ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ರಾಮನಗರ ಕ್ಷೇತ್ರದಲ್ಲಿ ಕೂಪನ್ ಕಾರ್ಡ್, ಹಣ ಕೊಡುವುದಾಗಿ ಹೇಳಿ ಜನರಿಗೆ ಮೋಸ ಮಾಡಿದ್ದರಿಂದ ನನಗೆ ಸೋಲಾಯಿತು ಎಂದು ರಾಜ್ಯ ಯುವ ಜನತಾ ದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ಇಲ್ಲಿನ ವಕ್ಕಲಿಗರ ಸಮುದಾಯ ಭವನದಲ್ಲಿ ಜಾತ್ಯತೀತ ಜನತಾದಳ ವತಿಯಿಂದ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನನ್ನ ಮೊದಲ ಚುನಾವಣೆಯಲ್ಲಿ ಎಚ್‌ಡಿಕೆ ಸಿಎಂ ಆಗಿದ್ದರು. ಆಗ ನನ್ನನ್ನು ಎಲ್ಲರೂ ಸೇರಿ ಸೋಲಿಸುವ ಜೊತೆಗೆ ಸರ್ಕಾರವನ್ನು ಕಿತ್ತು ಹಾಕಿದರು. ರಾಮನಗರ ಕ್ಷೇತ್ರದಲ್ಲಿ ಕೂಪನ್ ಕಾರ್ಡ್, 5 ಸಾವಿರ ಹಣ ಸಿಗುತ್ತದೆ ಎಮದು ಮುಗ್ದ ಜನರಿಗೆ ಹೇಳಿ ಮತಗಳಿಸಿ ಮೋಸ ಮಾಡಿ ನನ್ನ ಸೋಲಿಸಿದರು. ಇನ್ನೂ ಚನ್ನಪಟ್ಟಣದಲ್ಲೂ ಎಲ್ಲರೂ ಸೇರಿ ಸೋಲಿಸಿದರೂ. ಆದರೂ ನಾನು ಎದೆಗುಂದಲ್ಲ. ಪಕ್ಷವನ್ನು ತಳ ಮಟ್ಟದಿಂದ ಹಿರಿಯ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟುತ್ತೇನೆ ಕಾರ್ಯರ್ತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಎಂದರು.ಮಧುಗಿರಿ ಕ್ಷೇತ್ರ ನಮ್ಮ ಕುಟುಂಬಕ್ಕೆ ಮಾತೃ ಕ್ಷೇತ್ರ. ಕಾರ್ಯಕರ್ತರು ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ. ಜೆಡಿಎಸ್ ಪಕ್ಷ ಸದೃಢವಾಗಿದೆ. 2008ರಲ್ಲಿ ಪಕ್ಷದ ವರಿಷ್ಠರು, ಮುಖಂಡರ ತೀರ್ಮಾನದಂತೆ ನನ್ನ ತಾಯಿ ಅನಿತಾ ಕುಮಾರಸ್ವಾಮಿಯವರಿಗೆ ಕ್ಷೇತ್ರದ ಮತದಾರರು ಆಶೀರ್ವಾದ ಮಾಡಿದ್ದರು. ನಾವು ಯಾವುದೇ ಕಾರಣಕ್ಕೂ ಮಧುಗಿರಿ ಕ್ಷೇತ್ರವನ್ನು ಮರೆಯುವುದಿಲ್ಲ. ನಮಗೆ ಮಧುಗಿರಿ ಕ್ಷೇತ್ರ ಮಾತೃ ಕ್ಷೇತ್ರ. ನಮ್ಮ ತಾಯಿ ಗೆದ್ದ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದು ಆರೋಗ್ಯಕರ ಮತ ಕ್ಷೇತ್ರವಾಗಿತ್ತು, ಆದರೆ,ಪ್ರಸ್ತುತ ಏನಾಗಿದೆ ನೀವೆ ಯೋಚಿಸಿ ಎಂದರು.
ಇಲ್ಲಿನ ಕೃಷಿ ಇಲಾಖೆಯಲ್ಲಿ ಡಿಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದ ನರಸಿಂಹಮೂರ್ತಿ ಎಂಬಾತ ಜೆಡಿಎಸ್ ಪಕ್ಷದ ಅಭಿಮಾನಿ ಎಂಬ ಕಾರಣಕ್ಕೆ ಆತನನ್ನು ಟಾರ್ಗೆಟ್ ಮಾಡಿ ಕೆಲಸದಿಂದ ವಜಾ ಮಾಡಿದ್ದಾರೆ ಎಂದರೆ ಹೇಗೆ? ಯಾರಿಗೂ ಅಭಿಮಾನಿಗಳಾಗಿ ಇರಬಾರದಾ ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು. ಇಲ್ಲಿನ ಶಾಸಕರ ಹಿರಿತನಕ್ಕೆ ನಾನು ಬೆಲೆ ಕೊಡುತ್ತೇನೆ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ.ಆದರೆ ಇಂತಹ ದ್ವೇಶದ ರಾಜಕಾರಣ ,ದಬ್ಬಾಳಿಕೆ ಎಷ್ಟು ದಿನ ಮಾಡ್ತತೀರಾ.? ಹಿಟ್ಲರ್ ರಾಜಕಾರಣ ಬೇಡ. ನಿಮ್ಮ ದರ್ಪದ ರಾಜಕಾರಣ ನೋಡಿಕೊಂಡು ಯಾರು ಕೈಕಟ್ಟಿ ಕೂರಲ್ಲ, ಮುಂದೆ ನಾವು ಕೂಡ ಅಧಿಕಾರಕ್ಕೆ ಬಂದೇ ಬರುತ್ತೇವೆ. ಸಹಸ್ರಾರು ಸಂಖ್ಯೆಯಲ್ಲಿ ಕಟ್ಟಿ ಬೆಳಸಿದ ನಮ್ಮ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ರಕ್ಷಣೆ ಕೊಡಬೇಕು. ಇಲ್ಲಿನ ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ ಇನ್ನೂ ಗೊಂದಲದಲ್ಲಿದ್ದಾರೆ. ಅವರ ಜೊತೆ ನಾನು ಮಾತನಾಡುತ್ತೇನೆ. ಪಕ್ಷದ ಕಾರ್ಯಕರ್ತರ ಸಂಬಂಧವನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ನಿಟ್ಟಿನಲ್ಲಿಯೇ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಅದಕ್ಕಾಗಿಯೇ ಈ ಸದಸ್ಯತ್ವ ನೋಂದಣಿ ಕಾರ್ಯಕ್ರಮ. ನಾವು ಎಲ್ಲೂ ಹೋಗಲ್ಲ ನಿಮ್ಮ ಜೊತೆ ಇರುತ್ತೇವೆ. ಕ್ಷೇತ್ರದ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದರು.ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಜೆಡಿಎಸ್ ಪಕ್ಷವನ್ನು ಸದೃಢವಾಗಿ ಕಟ್ಟಲು ನಿಖಿಲ್ ಕುಮಾರಸ್ವಾಮಿ ರಾಜ್ಯದಾದ್ಯಂತ ಜನರೊಟ್ಟಿಗೆ ಬೆರೆತು ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಸದಸ್ಯತ್ವ ನೋಂದಣಿ ಮಾಡಲು ಪ್ರವಾಸ ಮಾಡುತ್ತಿದ್ದು, ಡಿಜಿಟಲ್ ತಂತ್ರಜ್ಞಾನ ಬಳಸಿ ಜೆಡಿಎಸ್ ಮಿಸ್ ಕಾಲ್ ಕೊಡುವುದ ಮೂಲಕ ಸದಸ್ಯತ್ವ ನೋಂದಣಿ ಮಾಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಮಾಜಿ ಎಂಎಲ್‌ಸಿ ತಿಪ್ಪೇಸ್ವಾಮಿ, ಪಾವಗಡ ಮಾಜಿ ಶಾಶಕ ತಿಮ್ಮರಾಯಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಪುರಸಭೆ ಸದಸ್ಯರಾದ ಕೆ.ನಾರಾಯಣ್,ಎಂ.ಎಲ್.ಗಂಗರಾಜು,ಚಂದ್ರಶೇಖರ್ ಬಾಬು, ಮುಖಂಡರಾದ ಬಿ.ಎಸ್.ಶ್ರೀನಿವಾಸ್, ವೆಂಕಟಾಪುರ ಗೋವಿಂದರಾಜು, ಜಗದೀಶ್, ಮೋಹನ್, ನರಸಪ್ಪ, ಸತೀಶ್, ಸಿಡದರಗಲ್ಲು ಶ್ರೀನಿವಾಸ್, ದೊಡ್ಡೇರಿ ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷೀದೇವಮ್ಮ, ಎಸ್.ಆರ್,ಲಕ್ಷ್ಮಮ್ಮ, ಎಸ್.ಡಿ.ಕೃಷ್ಣಪ್ಪ ಸಿದ್ದಗಂಗಮ್ಮ, ತಾ.ಜೆಡಿಎಸ್ ಅಧ್ಯಕ್ಷ ಬಸವರಾಜು ಸೇರಿದಂತೆ ಅನೇಖರು ಉಪಸ್ಸಿತರಿದ್ದರು.