ಸಾರಾಂಶ
ಹರಿಹರ: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು ಖಾಯಂಗೊಳಿಸಲು ಸರ್ಕಾರ ಮುಂದಾಗಬೇಕು ಅವರ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಶಾಸಕ ಬಿ.ಪಿ ಹರೀಶ್ ಹೇಳಿದರು. ನಗರದ ಗುರುಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯರ್ತೆಯರ ಮತ್ತು ಸಹಾಯಕಿಯರ ಮಹಾ ಮಂಡಳ ಹಾಗೂ ಶಿಶು ಅಭಿವೃದ್ಧಿ ಇಲಾಖೆಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಸಮಾವೇಶ, ವಯೋ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಕಳೆದ ಹಲವಾರು ವರ್ಷಗಳಿಂದ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಎಲ್ಲಾ ವರ್ಗದ ಮಕ್ಕಳ, ಮಹಿಳೆಯರ, ತಾಯಂದಿರ, ಗರ್ಭಿಣಿಯರ, ಬಾಣಂತಿಯರ ಯೋಗ ಕ್ಷೇಮ ವಿಚಾರಿಸುತ್ತ ಉತ್ತಮ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನಿಯ ಕಾರ್ಯವಾಗಿದೆ. ಆದರೆ, ಸರ್ಕಾರ ಅವರು ಮಾಡುತ್ತಿರುವ ಕೆಲಸಕ್ಕೆ ತಕ್ಕ ಸಂಬಳ ನೀಡುತ್ತಿಲ್ಲ. ಕೇವಲ ಗೌರವ ಧನದಿಂದಲೆ ಅವರನ್ನು ದುಡಿಸಿಕೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.ದೇಶದ ಭದ್ರ ಬುನಾದಿಯಾಗಿರುವ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿಮ್ಮನ್ನು ಸರ್ಕಾರ ಖಾಯಂ ನೌಕರರೆಂದು ಘೋಷಿಸಬೇಕು ಎಂದ ಅವರು, ನಿಮ್ಮ ಹೋರಾಟಕ್ಕೆ ಸದಾ ಬೆಂಬಲಿಸುತ್ತೆನೆಂದು ಹೇಳಿದರು.
ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ರಾಜ್ಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ರಾಜ್ಯಾಧ್ಯಕ್ಷ ಜಿ.ಆರ್.ಶಿವಶಂಕರ, ಕಾರ್ಯದರ್ಶಿ ನಾಗರತ್ನಾ, ತಾಲೂಕು ಅಧ್ಯಕ್ಷೆ ಸುಮಿತ್ರಮ್ಮ ಗೀತಾ ಮತ್ತಿತರರಿದ್ದರು.