ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಲೋಕಸಭೆ ಚುನಾವಣೆಯಲ್ಲಿ ಜನರು ನೀಡಿದ ತೀರ್ಪಿಗೆ ತಲೆ ಬಾಗುವುದಾಗಿ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಹೇಳಿದ್ದಾರೆ.ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಇವರು ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಆಡಳಿತ ನೀಡಿದರೂ ಸೋಲುಣ್ಣ ಬೇಕಾಯಿತು. ಮತ್ತೊಂದೆಡೆ ಸುಳ್ಳನ್ನೇ ಸತ್ಯ ಎಂದು ಬಿಂಬಿಸುವ ವರ್ಗಕ್ಕೆ ಜಯ ಸಿಕ್ಕಿದೆ ಎಂದಿದ್ದಾರೆ.
2019ರ ಚುನಾವಣೆಯಲ್ಲಿ ಸೋತ ಬಳಿಕ ಕ್ಷೇತ್ರದ ಜನರೊಂದಿಗೆ ಸದಾ ಸಂಪರ್ಕ ಹೊಂದಿದ್ದೆ. ಪಕ್ಷದ ಕಾರ್ಯಕರ್ತರು, ಕ್ಷೇತ್ರದ ಜನರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೆ. ಚಿತ್ರದುರ್ಗ ಕ್ಷೇತ್ರವನ್ನೇ ತನ್ನ ಕರ್ಮಭೂಮಿ ಎಂದು ಭಾವಿಸಿ, ಜನರೊಂದಿಗೆ ನಾನೂ ಒಬ್ಬನಾಗಿ ಕ್ಷೇತ್ರದಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಓಡಾಡಿದೆ. ಜನರು ಕೂಡ ಪ್ರೀತಿ ತೋರಿದ್ದರು. ಆದರೆ, ಜನರ ಪ್ರೀತಿ-ಅಭಿಮಾನ ಗೆಲುವಾಗಿ ಪರಿವರ್ತನೆ ಆಗಿಲ್ಲ. ಈ ನೋವು ನನ್ನಲ್ಲಿದೆ ಎಂದರು.ಸಮೀಕ್ಷೆಗಳನ್ನು ಸುಳ್ಳಾಗಿಸಿ ದೇಶದಲ್ಲಿ ಇಂಡಿಯಾ ಒಕ್ಕೂಟ ಹೆಚ್ಚು ಸ್ಥಾನ ಪಡೆದಿದ್ದು, ಅಧಿಕಾರದ ಹೊಸ್ತಿಲ್ಲಿ ಇದೆ. ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದೆ. ಇದನ್ನು ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ. ಭದ್ರಾ ಮೇಲ್ದಂಡೆ, ನೇರ ರೈಲುಮಾರ್ಗ, ಸರ್ಕಾರಿ ಮೆಡಿಕಲ್ ಕಾಲೇಜು ಯೋಜನೆಗಳು ನನ್ನ ಅಧಿಕಾರವಧಿಯಲ್ಲಿ ಹೆಚ್ಚು ವೇಗ ಪಡೆದಿದ್ದು, ಅವುಗಳನ್ನು ಈ ಬಾರಿ ಸಂಸದನಾಗಿ ಪೂರ್ಣಗೊಳಿಸುವ ಮಹಾದಾಸೆ ನನ್ನದಾಗಿತ್ತು. ಆದರೆ, ಜನರ ತೀರ್ಪು ವ್ಯತಿರಿಕ್ತವಾಗಿ ಬಂದಿದೆ. ಅದನ್ನು ಸ್ವೀಕರಿಸುವ ಜೊತೆಗೆ ಈ ಯೋಜನೆಗಳನ್ನು ಪೂರ್ಣಗೊಳಿಸುವ ಜೊತೆಗೆ ಶಿಕ್ಷಣ, ಕೈಗಾರಿಕೆ, ದುಡಿಯುವ ಜನರ ಕೈಗೆ ಕೆಲಸ ದೊರೆಯುವ ರೀತಿ ರಾಜ್ಯ ಸರ್ಕಾರದ ಜೊತೆಗೂಡಿ ಕೇಂದ್ರದ ಮೇಲೆ ಒತ್ತಡ ತಂದು ಯೋಜನೆಗಳನ್ನು ತರುವ ಪ್ರಯತ್ನ ಮಾಡುವೆ ಎಂದು ಹೇಳಿದ್ದಾರೆ.
ಬಿ.ಎನ್.ಚಂದ್ರಪ್ಪ ಸೋಲು ಅನಿರೀಕ್ಷಿತ: ಆಂಜನೇಯಚಿತ್ರದುರ್ಗ: ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ.ಆದರೆ, ಚಿತ್ರದುರ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರ ಸೋಲು ಅನಿರೀಕ್ಷಿತ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾದ ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿ.ಎನ್.ಚಂದ್ರಪ್ಪ ಅನ್ಯ ಪಕ್ಷದವರೂ ಮೆಚ್ಚುವಂತಹ ಗುಣ ಸ್ವಭಾವ ಹೊಂದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಪರಾಭವಗೊಳ್ಳುವ ನಿರೀಕ್ಷೆ ಇರಲಿಲ್ಲ. ಎಲ್ಲ ಮತ ಕ್ಷೇತ್ರದಲ್ಲಿ ಸಂಪೂರ್ಣ ಗೆಲ್ಲುವ ವಾತಾವರಣವಿತ್ತು. ಜಿಲ್ಲಾ ಸಚಿವರು ಸೇರಿದಂತೆ ಎಲ್ಲ ಶಾಸಕರು, ಮುಖಂಡರು, ಕಾರ್ಯಕರ್ತರು ಚುನಾವಣೆಯಲ್ಲಿ ಉತ್ತಮ ಕೆಲಸ ಮಾಡಿದ್ದರು. ಆದರೂ ಪರಾಭವಗೊಂಡಿದ್ದೇವೆ.ಅನಿರೀಕ್ಷಿತ ಸೋಲಿನಿಂದ ಮುಖಂಡರಿಗೆ, ಕಾರ್ಯಕರ್ತರಿಗೆ ನೋವಾಗಿರುವುದು ಸಹಜ. ಯಾರೂ ಎದೆಗುಂದುವ ಅವಶ್ಯಕತೆ ಇಲ್ಲ. ಸುಮಾರು 6 ಲಕ್ಷಕ್ಕೂ ಅಧಿಕ ಮತಗಳು ಬಿ.ಎನ್.ಚಂದ್ರಪ್ಪನವರಿಗೆ ಚಲಾವಣೆ ಆಗಿವೆ. ಇಷ್ಟೊಂದು ಮತ ನೀಡಿದ ಮತದಾರರೆಲ್ಲ ರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಆಂಜನೇಯ ಹೇಳಿದ್ದಾರೆ.