ಸಾರಾಂಶ
ಈಗಾಗಲೇ ಕ್ಷೇತ್ರದ ಅಭಿವೃದ್ಧಿಗೆ 1200 ಕೋಟಿಗೂ ಅಧಿಕ ಅನುದಾನ ತಂದಿದ್ದು, ಕಾಮಗಾರಿಗಳು ನಡೆಯುತ್ತಿವೆ. ಕೆಲವು ಕಡೆ ನಾನೇ ಹೋಗಿ ಖುದ್ದಾಗಿ ಪರಿಶೀಲನೆ ನಡೆಸುತ್ತಿದ್ದೇನೆ. ಇಸುವನಹಳ್ಳಿಪಾಳ್ಯ ಗ್ರಾಮದ ಅಭಿವೃದ್ಧಿಗೆ ಇನ್ನೂ ಒಂದು ಕೋಟಿ ಅನುದಾನ ನೀಡುತ್ತೇನೆ. ಗಡಿ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ.
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಬಿಜೆಪಿ, ಜೆಡಿಎಸ್ ನ ಬೇರೆ ಕ್ಷೇತ್ರದ ಶಾಸಕರಿಗೆ, ಸಂಸದರಿಗೆ ವೃಷಭಾವತಿ ನೀರು ಬೇಕು. ಆದರೆ ನಮ್ಮ ತಾಲೂಕಿನ ಬಿಜೆಪಿ- ಜೆಡಿಎಸ್ ಪಕ್ಷದ ಕೆಲವರು ನೀರು ಬೇಡವೆಂದು ಹೇಳುತ್ತಾ, ರೈತರಿಗೆ ದಾರಿ ತಪ್ಪಿಸುತ್ತಿದ್ದಾರೆ. ನಾನು ಕ್ಷೇತ್ರದ ರೈತರಿಗೆ, ಜನತೆಗೆ ಅಮೃತ ನೀಡುತ್ತೇನೆಯೇ ಹೊರತು ವಿಷ ಹಾಕುವಂಥ ಕೆಲಸ ಮಾಡುವುದಿಲ್ಲ ಎಂದು ಶಾಸಕ ಎನ್.ಶ್ರೀನಿವಾಸ್ ವಿರೋಧ ಪಕ್ಷಗಳ ವಿರುದ್ಧ ಆಕ್ರೋಶ ಹೊರಹಾಕಿದರು.ತ್ಯಾಮಗೊಂಡ್ಲು ಹೋಬಳಿಯ ಇಸುವನಹಳ್ಳಿಪಾಳ್ಯದಲ್ಲಿ ಸುಮಾರು ಒಂದು ಕೋಟಿ ರು. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ನಮ್ಮ ಅಕ್ಕಪಕ್ಕದ ಕ್ಷೇತ್ರಗಳಾದ ಯಲಹಂಕ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದು. ನಮಗೆ ವೃಷಭಾವತಿ ನೀರು ಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಕೇಂದ್ರ ಸಚಿವ ಸೋಮಣ್ಣನವರು ವೃಷಭಾವತಿ ನೀರು ಬಿಡಿ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕನಿರುವ ಕಾರಣಕ್ಕೆ ವೃಷಭಾವತಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದು, ನೆಲಮಂಗಲ ತಾಲೂಕಿನ ಕೆರೆಗಳಿಗೆ ಸಂಸ್ಕರಿಸಿದ ವೃಷಭಾವತಿ ನೀರು ಹರಿದೇ ಹರಿಯುತ್ತದೆ ಎಂದರು.ಈಗಾಗಲೇ ಕ್ಷೇತ್ರದ ಅಭಿವೃದ್ಧಿಗೆ 1200 ಕೋಟಿಗೂ ಅಧಿಕ ಅನುದಾನ ತಂದಿದ್ದು, ಕಾಮಗಾರಿಗಳು ನಡೆಯುತ್ತಿವೆ. ಕೆಲವು ಕಡೆ ನಾನೇ ಹೋಗಿ ಖುದ್ದಾಗಿ ಪರಿಶೀಲನೆ ನಡೆಸುತ್ತಿದ್ದೇನೆ. ಇಸುವನಹಳ್ಳಿಪಾಳ್ಯ ಗ್ರಾಮದ ಅಭಿವೃದ್ಧಿಗೆ ಇನ್ನೂ ಒಂದು ಕೋಟಿ ಅನುದಾನ ನೀಡುತ್ತೇನೆ. ಗಡಿ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ ಎಂದರು.
ಬಗರ್ ಹುಕುಂ ಸಮಿತಿ ಸದಸ್ಯ ಹಾಗೂ ವಕೀಲ ಹನುಮಂತೇಗೌಡ್ರು, ದೊಡ್ಡಬೆಲೆ ಗ್ರಾಪಂ ಅಧ್ಯಕ್ಷ ಮಂಜುನಾಥ್, ಪಿಡಿಒ ಗಿರೀಶ್ ಕುಮಾರ್, ಮುಖಂಡರಾದ ವಾದಕುಂಟೆ ಸುರೇಶ್, ಶಶಿಕುಮಾರ್, ವಕೀಲ ಸೋಮಶೇಖರ್ ಮತ್ತಿತರರಿದ್ದರು.