ದೇವನಹಳ್ಳಿ: ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎಚ್.ಎನ್.ನಾಗೇಶ್ ತಿಳಿಸಿದರು

ದೇವನಹಳ್ಳಿ: ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎಚ್.ಎನ್.ನಾಗೇಶ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯಮಟ್ಟದಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸುತ್ತಿದ್ದು, ತಾಲೂಕು ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳು ಅದೇ ರೀತಿ ತಾಲೂಕಿನ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸತ್ತಾರೆಂಬ ನಂಬಿಕೆ ಇದೆ. ಯಾವುದೇ ಅಧಿಕಾರಿಗಳು ಶಿಕ್ಷಕರಿಗೆ ತೊಂದರೆ ನೀಡಿದಾಗ ಸರ್ಕಾರಿ ಆದೇಶಗಳು ಶಿಕ್ಷಕರ ವಿರುದ್ಧವಾಗಿದ್ದಾಗ ಆ ವಿರುದ್ಧ ಹೋರಾಟ ಮಾಡಿ ನ್ಯಾಯ ದೊರಕಿಸಿಕೊಡಬೇಕು ಎಂದು ಹೇಳಿದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯತೀಶ್‌ಕುಮಾರ್ ಮಾತನಾಡಿ, ಅನೇಕ ಅಡೆತಡೆಗಳ ಮಧ್ಯೆ ಚುನಾವಣೆ ನಡೆದು ಎಚ್.ಎನ್.ನಾಗೇಶ್ ತಂಡಕ್ಕೆ ಜಯಸಿಕ್ಕಿದೆ. ಶಿಕ್ಷಕರ ಸಮಸ್ಯೆಗಳು ಸಾಕಷ್ಟಿವೆ. ಎನ್‌ಪಿಎಸ್ ಹೋರಾಟ, ಶಿಕ್ಷಕರ ಒತ್ತಡ ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಶಾಲೆಯ ಬಿಸಿಯೂಟ ಮೊಟ್ಟೆ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯಸಂಘದ ಮೂಲಕ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಶಿಕ್ಷಕರ ಹಿತರಕ್ಷಣೆ ಹಾಗೂ ಅವರ ಒಳಿತಿಗಾಗಿ ನಮ್ಮ ತಂಡ ಹಗಲಿರುಳು ಶ್ರಮಿಸುತ್ತದೆ ಎಂದರು.

ನೂತನ ಪದಾಧಿಕಾರಿಗಳು: ತಾಲೂಕು ಅಧ್ಯಕ್ಷ ಎಲ್.ಎಸ್‌.ಯತೀಶ್‌ಕುಮಾರ್, ಉಪಾಧ್ಯಕ್ಷರಾಗಿ ಜಿ.ಗೀತಾ, ಕೆ.ಹರೀಶ, ಪ್ರಧಾನ ಕಾರ್ಯದರ್ಶಿ ಎ.ಮಂಜುನಾಥ್, ಖಜಾಂಚಿ ಆರ್‌.ಪದ್ಮಾವತಿ, ಸಂಘಟನಾ ಕಾರ್ಯದರ್ಶಿ ಪುಷ್ಪಲತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದೆ ವೇಳೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಹನುಮಂತರಾಯಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಆದರ್ಶ, ನಾಮಿನಿ ಸದಸ್ಯರಾದ ಕೆ.ಆರ್‌.ವೆಂಕಟೇಶ್, ಚಂದ್ರಪ್ಪ, ಆಂಜಿನಪ್ಪ, ಸುಜಾತ ಮತ್ತಿತರರಿದ್ದರು.

೨೨ ದೇವನಹಳ್ಳಿ ಚಿತ್ರಸುದ್ದಿ: ೦೧

ದೇವನಹಳ್ಳಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಜಿಲ್ಲಾ ಸಂಘದ ಸದಸ್ಯರು ಅಭಿನಂದಿಸಿದರು.