ಸ್ಥಳೀಯಾಡಳಿತಗಳಿಗೆ ಶಕ್ತಿ ತುಂಬುವ ಕೆಲಸ ಮಾಡುವೆ: ಕಿಶೋರ್ ಪುತ್ತೂರು

| Published : Oct 27 2024, 02:21 AM IST

ಸ್ಥಳೀಯಾಡಳಿತಗಳಿಗೆ ಶಕ್ತಿ ತುಂಬುವ ಕೆಲಸ ಮಾಡುವೆ: ಕಿಶೋರ್ ಪುತ್ತೂರು
Share this Article
  • FB
  • TW
  • Linkdin
  • Email

ಸಾರಾಂಶ

ವಾಹನ ಮೆರವಣಿಗೆಯ ಮೂಲಕ ಮಹಾಲಿಂಗೇಶ್ವರ ದೇವಳಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಜೈನ ಭವನಕ್ಕೆ ತೆರಳಿ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಬಿಜೆಪಿ ಜನಪ್ರತಿನಿಧಿಗಳು ನನ್ನ ಮೇಲೆ ಇಟ್ಟಿರುವ ಪ್ರೀತಿ- ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ಮಾಡುವ ಜೊತೆಗೆ ಬಿಜೆಪಿ ಕಟ್ಟಾಳುವಾಗಿ ದುಡಿಯುತ್ತೇನೆ. ಮುಂದಿನ ದಿನಗಳಲ್ಲಿ ನಗರಾಡಳಿತ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡುವೆ ಎಂದು ವಿಧಾನ ಪರಿಷತ್ ನೂತನ ಸದಸ್ಯ ಕಿಶೋರ್ ಪುತ್ತೂರು ಹೇಳಿದರು.

ಪುತ್ತೂರು ನಗರದ ಜೈನ ಭವನದಲ್ಲಿ ಶನಿವಾರ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಮತ್ತು ನಗರ ಮಂಡಲದ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಳೆದ ಬಾರಿಗಿಂತ ೧೦೪ ಮತಗಳು ಜಾಸ್ತಿ ಲಭಿಸಿದ್ದು, ಹಿಂದುತ್ವವನ್ನು ಗಟ್ಟಿಗೊಳಿಸುವ, ಸಂಘಟನಾತ್ಮಕವಾಗಿ ನಾವು ಗಟ್ಟಿ ಇದ್ದೇವೆ ಎಂಬುವುದನ್ನು ತೋರಿಸಿಕೊಡುವ ಕೆಲಸ ಆಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್‌ ಅಭಿನಂದನಾ ಭಾಷಣ ಮಾಡಿದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜುರುಮಾರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಸಂಜೀವ ಮಠಂದೂರು ಮತ್ತು ಮಲ್ಲಿಕಾ ಪ್ರಸಾದ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ನಗರಸಭೆ ಅಧ್ಯಕ್ಷೆ ಲೀಲಾವತಿ, ಪುತ್ತೂರು ವಿಧಾನಸಭಾ ಕ್ಷೇತ್ರ ಚುನಾವಣಾ ಸಂಚಾಲಕ ನಿತೀಶ್‌ ಕುಮಾರ್‌ ಶಾಂತಿವನ, ಚುನಾವಣಾ ಸಹ ಸಂಚಾಲಕ ಸಂತೋಷ್ ರೈ ಕೈಕಾರ, ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್. ಗೌರಿ, ಬಿಜೆಪಿ ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ ಮತ್ತಿತರರು ಉಪಸ್ಥಿತರಿದ್ದರು. ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ ಸ್ವಾಗತಿಸಿದರು. ಸುನಿಲ್ ದಡ್ಡು ನಿರೂಪಿಸಿದರು.

ಮಂಗಳೂರಿನಿಂದ ಆಗಮಿಸಿದ ಕಿಶೋರ್ ಪುತ್ತೂರು ಅವರನ್ನು ಪುತ್ತೂರು ನಗರದ ಹೊರವಲಯದ ಕಬಕ ಜಂಕ್ಷನ್ ಬಳಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಬಳಿಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ವಾಹನಗಳ ಮೂಲಕ ದರ್ಬೆ ಅಶ್ವಿನಿ ಸರ್ಕಲ್ ತನಕ ತೆರಳಿ, ಅಲ್ಲಿಂದ ವಾಹನ ಮೆರವಣಿಗೆ ಆರಂಭಿಸಲಾಯಿತು. ವಾಹನ ಮೆರವಣಿಗೆಯ ಮೂಲಕ ಮಹಾಲಿಂಗೇಶ್ವರ ದೇವಳಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಜೈನ ಭವನಕ್ಕೆ ತೆರಳಿ ಅಭಿನಂದನಾ ಕಾರ್ಯಕ್ರಮ ನಡೆಯಿತು.