ಸಾರಾಂಶ
ರಾಮನಗರ, ತುಮಕೂರು, ಮಂಡ್ಯ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಉದ್ದೇಶ
ಭೂಮಿ ಲಭ್ಯತೆ ಪರಿಶೀಲಿಸಿ ವರದಿ ಸಲ್ಲಿಸಲು ಸೂಚನೆಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರಬೆಂಗಳೂರು ಹೊರವಲಯದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರ ರಾಮನಗರ ಜಿಲ್ಲೆಯಲ್ಲಿ ಭೂಮಿ ಹುಡುಕಾಟಕ್ಕೆ ಮುಂದಾಗಿದೆ ಎನ್ನಲಾಗಿದೆ.
ನೆರೆಯ ತಮಿಳುನಾಡು ಸರ್ಕಾರ ಬೆಂಗಳೂರಿಗೆ ಹೊಂದಿಕೊಂಡಂತಿರುವ ಹೊಸೂರಿನಲ್ಲಿ ಹೊಸದಾಗಿ ವಿಮಾನ ನಿಲ್ದಾಣ ಸ್ಥಾಪಿಸುವ ನಿರ್ಧಾರ ಘೋಷಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರವೂ ಬೆಂಗಳೂರು ಸುತ್ತಮುತ್ತಲ ಜಾಗದಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಲ್ಲಿಯೂ ಭೂಮಿಗಾಗಿ ಹುಡುಕಾಟ ನಡೆದಿದೆ.ಬೆಂಗಳೂರಿಗೆ ಸನಿಹದಲ್ಲಿಯೇ ಇರುವ ರಾಮನಗರ, ತಮಕೂರು ಹಾಗೂ ಮಂಡ್ಯ ಜಿಲ್ಲೆಗಳ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕುರಿತು ಚರ್ಚೆಗಳು ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಸೇರಿದಂತೆ ರಾಜಧಾನಿಯನ್ನು ತ್ವರಿತವಾಗಿ ತಲುಪಬಲ್ಲ ಸಂಪರ್ಕ ವ್ಯವಸ್ಥೆ ಇರುವ ಸ್ಥಳಗಳಲ್ಲಿ ಹೊಸ ನಿಲ್ದಾಣಕ್ಕಾಗಿ ಜಾಗ ಹುಡುಕಲಾಗುತ್ತಿದೆ.
ಭೂಮಿ ಲಭ್ಯತೆ ಪರಿಶೀಲಿಸಿ ನಿಲ್ದಾಣದ ಕಾರ್ಯಸಾಧ್ಯತೆ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕಾರಣದಿಂದಾಗಿಯೇ ರಾಮನಗರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಸಂಬಂಧ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.ರಾಮನಗರ ಜಿಲ್ಲೆಯೇ ಏಕೆ ?:
ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ಹಾದು ಹೋಗುತ್ತವೆ. ರಾಜಧಾನಿಗೆ ತ್ವರಿತ ರಸ್ತೆ ಸಂಪರ್ಕ ವ್ಯವಸ್ಥೆ ಹೊಂದಿರುವ ಮಾಗಡಿ ತಾಲೂಕಿನ ಸೋಲೂರು ಸುತ್ತಮುತ್ತ, ಇಲ್ಲವೇ ರಾಮನಗರ ಅಥವಾ ಚನ್ನಪಟ್ಟಣದ ಹೊರಗಿನ ಜಾಗವನ್ನು ಸಹ ನಿಲ್ದಾಣಕ್ಕೆ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.ಪರ್ಯಾಯ ವಿಮಾನ ನಿಲ್ದಾಣದ ಅವಶ್ಯಕತೆ ಏನು? :
ಬೆಂಗಳೂರಿನ ಜನಸಂಖ್ಯೆ ಈಗಾಗಲೇ ಒಂದು ಕೋಟಿ ದಾಟಿದೆ. ನಗರ ಜಾಗತಿಕ ಕಂಪನಿಗಳಿಗೆ ನೆಲೆಯಾಗಿದೆ. ಪ್ರಸ್ತುತ ವಿಮಾನ ನಿಲ್ದಾಣ ಹತ್ತಿರದ ಜಿಲ್ಲೆಗಳು ಮತ್ತು ಆಂಧ್ರಪ್ರದೇಶದ ಕೆಲವು ಜಿಲ್ಲೆಗಳಿಗೆ ಸೇವೆ ಸಲ್ಲಿಸುತ್ತಿದೆ. 2033ರ ವೇಳೆಗೆ ಪ್ರಯಾಣಿಕರ ಸಾಮರ್ಥ್ಯ ಗರಿಷ್ಠವಾಗಿರುತ್ತದೆ. ಸರಕುಗಳ ಪ್ರಮಾಣವೂ 2040ರ ವೇಳೆಗೆ ಹೆಚ್ಚಳಗೊಳ್ಳಲಿದೆ.ಅಲ್ಲದೆ, ಬೆಂಗಳೂರಿಗೆ ಪರ್ಯಾಯವಾಗಿ ಎರಡನೇ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ಭೂಸ್ವಾಧೀನ ಮತ್ತು ಪರಿಹಾರ ವಿತರಣೆ ಕಾರ್ಯಗಳು ತಡವಾಗಲಿದೆ. ಮತ್ತೊಂದು ವಿಮಾನ ನಿಲ್ದಾಣ ಕೈಗಾರಿಕಾ ಅಭಿವೃದ್ಧಿಗೂ ನೆರವಾಗಲಿದೆ.
ಪ್ರಯಾಣಿಕರ ದಟ್ಟಣೆಗೆ ಪರಿಹಾರ:
ದೇವನಹಳ್ಳಿಯಲ್ಲಿ 2008ರಲ್ಲಿ ಕಾರ್ಯಾರಂಭಗೊಂಡ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 4,700 ಎಕರೆ ಪ್ರದೇಶದಲ್ಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೆಹಲಿ ಮತ್ತು ಮುಂಬೈ ನಂತರ ಭಾರತದ ಮೂರನೇ ಅತ್ಯಂತ ಜನನಿಬಿಡವಾಗಿದೆ. ಕಳೆದ ವರ್ಷ ಬೆಂಗಳೂರು ವಿಮಾನ ನಿಲ್ದಾಣವು 37.5 ಮಿಲಿಯನ್ ಪ್ರಯಾಣಿಕರು ಮತ್ತು ನಾಲ್ಕು ಲಕ್ಷ ಟನ್ ಸರಕುಗಳನ್ನು ನಿರ್ವಹಿಸಿದೆ. ಈ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿ ವರ್ಷ ಪ್ರಯಾಣಿಕರ ಸಂಖ್ಯೆ ಶೇ.10ರಷ್ಟು ಹೆಚ್ಚಳವಾಗುತ್ತಿದೆ. ನಿಲ್ದಾಣದಲ್ಲಿ ಸದ್ಯ ಎರಡು ಟರ್ಮಿನಲ್‌ಗಳಿದ್ದು ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಹೋದರೆ ಮುಂದೆ ದಟ್ಟಣೆ ನಿರ್ವಹಣೆ ಸವಾಲಾಗಲಿದೆ. ಅದಕ್ಕಾಗಿ ಪರ್ಯಾಯವಾಗಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.ವಿಮಾನ ನಿಲ್ದಾಣಕ್ಕಾಗಿ ಎಲ್ಲೆಲ್ಲಿಂದ ಒತ್ತಾಯ ?
1.ತುಮಕೂರು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗೃಹ ಸಚಿವ ಪರಮೇಶ್ವರ ಸೇರಿದಂತೆ ಆ ಭಾಗದ ಅನೇಕ ನಾಯಕರು ಒತ್ತಾಯಿಸುತ್ತಿದ್ದಾರೆ. ತುಮಕೂರು, ಕೊರಟಗೆರೆ, ಮಧುಗಿರಿ ಮತ್ತು ಸಿರಾ ತಾಲೂಕುಗಳಲ್ಲಿ 8,000 ಎಕರೆಗೂ ಹೆಚ್ಚು ಭೂಮಿ ವಿಮಾನ ನಿಲ್ದಾಣಕ್ಕೆ ಲಭ್ಯವಿದೆ ಎಂದು ಹೇಳಿಕೊಂಡಿದ್ದಾರೆ.
2.ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಅಥವಾ ನಾಗಮಂಗಲ ತಾಲೂಕುಗಳಲ್ಲಿ ಸರ್ಕಾರಿ ಭೂಮಿ ಲಭ್ಯವಿದ್ದು, ಇಲ್ಲಿಯೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು. ಇದರಿಂದ ಕೈಗಾರಿಕೆಗಳ ಸ್ಥಾಪನೆ ಜೊತೆಗೆ ಜಿಲ್ಲೆ ಅಭಿವೃದ್ಧಿ ಹೊಂದಲು ನೆರವಾಗಲಿದೆ ಎಂಬುದು ಮಂಡ್ಯ ಜಿಲ್ಲೆ ನಾಯಕರ ಅಭಿಪ್ರಾಯ.3.ರಾಮನಗರ ಜಿಲ್ಲೆಯ ರಾಮನಗರ - ಚನ್ನಪಟ್ಟಣ ಅಥವಾ ಕುದೂರು ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂಮಿಯ ಹುಡುಕಾಟ ನಡೆದಿದೆ ಎನ್ನಲಾಗಿದೆ. ಈ ಮಧ್ಯೆ ಸಾತನೂರು ಹೋಬಳಿ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಿ ಎಂಬ ಒತ್ತಾಯ ಕೇಳಿ ಬರುತ್ತಿದೆ.