ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಹೊಸ ತಾಂತ್ರಿಕ ಪ್ರವೃತ್ತಿಗಳ ಕುರಿತು ಜ್ಞಾನ ಮತ್ತು ಮಾಹಿತಿ ವಿನಿಮಯ ಮಾಡಿಕೊಳ್ಳುವ ಮೂಲಕ ಹೊಸ ತಲೆಮಾರಿನ ಶಿಕ್ಷಕರು ಮತ್ತು ಉದ್ಯಮಶೀಲ ವಿದ್ಯಾರ್ಥಿಗಳನ್ನು ರೂಪಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ, ತಮಿಳುನಾಡು ಸರ್ಕಾರ ಮತ್ತು ಕೈಗಾರಿಕೆಗಳ ಒಕ್ಕೂಟದೊಂದಿಗೆ ಒಂದು ಸೊಸೈಟಿಯಾಗಿ ಸ್ಥಾಪಿತವಾಗಿರುವ ಐಸಿಟಿ ಅಕಾಡೆಮಿ ಹಾಗೂ ಕೊಡಗು ವಿಶ್ವವಿದ್ಯಾಲಯ ಜಂಟಿ ಒಡಂಬಡಿಕೆ ಮಾಡಿಕೊಂಡಿವೆ.ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಮುಗಿಸಿದ ನಂತರ ಕಂಪನಿಗಳಲ್ಲಿ ಕೆಲಸ ಮಾಡಲು ಸಿದ್ಧರಾಗುವುದಕ್ಕೆ ಉತ್ತೇಜನ ನೀಡಲಾಗುತ್ತದೆ. ಈ ಸಂಸ್ಥೆಯ ಮೂಲಕ ನೀಡುವ ತರಬೇತಿಯಲ್ಲಿನ ಬೋಧನೆ ಆಧುನಿಕ ತಂತ್ರಜ್ಞಾನಗಳ ಆಧಾರಿತವಾಗಿದ್ದು ತಾಂತ್ರಿಕ ಕೌಶಲ್ಯಗಳನ್ನು ನೀಡಲಾಗುತ್ತದೆ. ತಂತ್ರಜ್ಞಾನಗಳ ಮೂಲಕ ಅಂದರೆ ಕ್ಲೌಡ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ, ಮಿಷಿನ್ ಲರ್ನಿಂಗ್ ಮತ್ತು ಡೇಟಾ ಅನಾಲೆಟಿಕ್ಸ್ ನಂತಹ ತಂತ್ರಜ್ಞಾನಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಇದರಿಂದ ಕೊಡಗು ವಿಶ್ವವಿದ್ಯಾಲಯವು ಐಸಿಟಿ ಅಕಾಡೆಮಿಯ ಸಹಯೋಗದೊಂದಿಗೆ ನೀಡುವ ತರಬೇತಿ ಪಡೆದವರಿಗೆ ಉದ್ಯಮದಲ್ಲಿ ತಂತ್ರಜ್ಞಾನದ ಅವಶ್ಯಕತೆಯಿರುವ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ.
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಉದ್ಯಮಶೀಲರನ್ನಾಗಿಸಲು ಉತ್ತೇಜನ ನೀಡುವಂತಹ ಸಂಸ್ಥೆಯಾಗಿರುವ ಐಸಿಟಿ ಅಕಾಡೆಮಿಯ ಮುಖ್ಯ ಉದ್ದೇಶವೆಂದರೆ ದೇಶದಾದ್ಯಂತ ವಿಶ್ವವಿದ್ಯಾಲಯದ ಮಟ್ಟದಲ್ಲಿ ಹಾಗೂ ಎಂಜಿನಿಯರಿಂಗ್, ಕಲಾ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳ ಅಧ್ಯಾಪಕರಿಗೆ ತರಬೇತಿ ನೀಡುವುದು. ಶೈಕ್ಷಣಿಕ ಮತ್ತು ಉದ್ಯಮದೊಂದಿಗೆ ನಿಕಟ ಸಂಬಂಧ ಹೊಂದಿರುವ ಈ ಅಕಾಡೆಮಿ ವಿಶ್ವ ದರ್ಜೆಯ ಐಸಿಟಿ ಉದ್ಯಮಕ್ಕೆ ಸಂಬಂಧಿಸಿದ ಪಠ್ಯಕ್ರಮ ಅಭಿವೃದ್ಧಿಪಡಿಸುತ್ತದೆ ಮತ್ತು ನಿರ್ವಹಿಸುತ್ತದೆ. ಆನ್‌ಲೈನ್ ಪೋರ್ಟಲ್ ಮೂಲಕ ದೇಶಾದ್ಯಂತ ಅಧ್ಯಾಪಕ ಸದಸ್ಯರಿಗೆ ಲಭ್ಯವಾಗುತ್ತದೆ.ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವಾಲಯದ ಐಸಿಟಿ ಅಕಾಡೆಮಿಯು ಅಧ್ಯಾಪಕರಿಗೆ ಯಶಸ್ವಿಯಾಗಿ ತರಬೇತಿ ನೀಡಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿದೆ. ಈಗಾಗಲೇ ಈ ಅಕಾಡೆಮಿಯು ‘ತಮಿಳುನಾಡಿನ ಕಾಲೇಜುಗಳ ಅಧ್ಯಾಪಕರು ಮತ್ತು ಪದವೀಧರರಿಗೆ ಐಸಿಟಿ ಆಧಾರಿತ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ’ ಕುರಿತ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ತರಬೇತಿ ಕೈಪಿಡಿಗಳು ಮತ್ತು ಪಠ್ಯಕ್ರಮವನ್ನು ನವೀಕರಿಸಲು, ತಂತ್ರಜ್ಞಾನದಲ್ಲಿನ ಹೊಸ ಟ್ರೆಂಡ್‌ಗಳ ಬಗ್ಗೆ ನಿರಂತರವಾಗಿ ಸಲಹೆ ನೀಡುವುದಕ್ಕಾಗಿ ಸಕ್ರಿಯವಾದ ಐಎಎಸ್ ಅಧಿಕಾರಿಗಳನ್ನೊಳಗೊಂಡ ಆಡಳಿತ ಮತ್ತು ಅಧ್ಯಯನ ಮಂಡಳಿಗಳನ್ನು ಹೊಂದಿದೆ.ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂ. ಆಲೂರ ಉಪಸ್ಥಿತಿಯಲ್ಲಿ, ಕುಲಸಚಿವ ಡಾ. ಸೀನಪ್ಪ ಅವರು ಐಸಿಟಿ ಅಕಾಡೆಮಿಯ ಸಹಾಯಕ ಮುಖ್ಯ ವ್ಯವಸ್ಥಾಪಕ ಡಿ. ವಿಷ್ಣು ಪ್ರಸಾದ್ ಸಮ್ಮುಖದಲ್ಲಿ ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಆವರಣದಲ್ಲಿ ಜಂಟಿಯಾಗಿ ಒಡಂಬಟಿಕೆ ಮಾಡಿಕೊಂಡಿವೆ. ಐಸಿಟಿಯ ಪ್ರಜ್ವಲ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ. ಗುಣಶ್ರೀ ಇದ್ದರು.