ಸಾರಾಂಶ
ಕನ್ನಡಪ್ರಭ ವಾರ್ತೆ ಸಿರಿಗೆರೆ
ಬದುಕಿಗೆ ಹತ್ತಿರವಾದ ವಿಚಾರಧಾರೆಗಳು ಎಲ್ಲ ಕಾಲಕ್ಕೂ ಜೀವಂತವಾಗಿರುತ್ತವೆ. ಅಂತೆಯೇ ತರಳಬಾಳು ಜಗದ್ಗುರು ಬೃಹನ್ಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ಧರ ವಿಚಾರಗಳೂ ಸಹ ಇಂದಿಗೂ ಜೀವಂತವಾಗಿವೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಸಿರಿಗೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನ ಭಾಗವಹಿಸಿ ಮಾತನಾಡಿದ ಅವರು ೮೦೦ ವರ್ಷಗಳ ನಂತರವೂ ಮರುಳಸಿದ್ಧರ ಚಿಂತನೆಗಳು ಬದುಕಿವೆ ಎಂದರೆ ಅವುಗಳಲ್ಲಿ ಜೀವನದ ವಿಚಾರಧಾರೆ ಅಡಗಿದೆ ಎಂದೇ ಅರ್ಥ ಎಂದರು.
ಸಾಮಾಜಿಕ ನ್ಯಾಯದ ಬಗ್ಗೆ ರಾಜಕಾರಣಿಗಳಾದ ನಾವು ಈಗ ಮಾತನಾಡುತ್ತಿದ್ದೇವೆ. ಆದರೆ ತರಳಬಾಳು ಪರಂಪರೆಯ ಹಿರಿಯ ಗುರುಗಳಾಗಿದ್ದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಸ್ವಾತಂತ್ರ್ಯಪೂರ್ವದಲ್ಲಿಯೇ ಸಾಮಾಜಿಕ ನ್ಯಾಯದ ಬಗ್ಗೆ ತಮ್ಮ ಚಿಂತನೆಯನ್ನು ಹಂಚಿಕೊಂಡಿದ್ದರು. ಸಮಾಜದಲ್ಲಿ ಸಮಾನತೆಯನ್ನು ತರುವ ಉದ್ದೇಶದಿಂದ ಬಸವಣ್ಣ ಮತ್ತು ವಿಶ್ವಬಂಧು ಮರುಳಸಿದ್ಧ ತತ್ವ ಸಿದ್ಧಾಂತಗಳನ್ನು ತಲೆ ಮೇಲೆ ಇರಿಸಿಕೊಂಡು ಬದುಕಿದರು. ಮುಂದುವರಿದು ಈಗಿನ ಗುರುಗಳ ರೈತರ ಶ್ರೇಯೋಭಿವೃದ್ಧಿ ಮೂಲಕ ಅಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.ಮುಖ್ಯ ಅತಿಥಿಯಾಗಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನಾಡಿನಲ್ಲಿ ಭೀಕರ ಬರಗಾಲ ಇರುವ ಸಂದರ್ಭದಲ್ಲಿ ಮಠದ ಸಂಭ್ರಮದ ಆಚರಣೆಯನ್ನು ಸರಳಗೊಳಿಸಿ ಆಚರಿಸುತ್ತಿರುವುದು ತರಳಬಾಳು ಶ್ರೀಗಳ ಸಮಾಜಮುಖಿ ಚಿಂತನೆಯಾಗಿದೆ ಎಂದರು.
ರಾಜ್ಯದಲ್ಲಿ ಮಠಗಳಿಂದ ಬಹುದೊಡ್ಡ ಸಾಮಾಜಿಕ ಕ್ರಾಂತಿ ಆಗಿದೆ. ಶಿಕ್ಷಣ ಮತ್ತು ದಾಸೋಹ ಕ್ಷೇತ್ರದಲ್ಲಿ ನಮ್ಮ ರಾಜ್ಯದ ಮಠಗಳು ಮಾಡಿರುವ ಸೇವೆ ದೇಶದ ಮತ್ತಾವ ರಾಜ್ಯದಲ್ಲಿಯೂ ಆಗಿಲ್ಲ ಎಂದರು.ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸದ್ಧರ್ಮ ಸಿಂಹಾಸನಾರೋಹಣ ಮಾಡಿ ಅನುಗ್ರಹಿಸಿದರು. ಚಿಂತಕರು ಮತ್ತು ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ. ಚಿದಾನಂದಗೌಡ, ಹಿರೇಮಗಳೂರು ಕಣ್ಣನ್ ಮುಂತಾದವರು ಉಪನ್ಯಾಸ ನೀಡಿದರು. ಡಾ.ಮಹದೇವ ಬಣಕಾರರ ವಿಶ್ಬಬಂಧು ಮರುಳಸಿದ್ಧ ಕಾವ್ಯ ಗ್ರಂಥವನ್ನು ಚಿದಾನಂದಗೌಡರು ಲೋಕಾರ್ಪಣೆ ಮಾಡಿದರು.ಶಾಸಕರುಗಳಾದ ಎಂ. ಚಂದ್ರಪ್ಪ, ಡಿ.ಜಿ. ಶಾಂತನಗೌಡ, ಬಿ.ಪಿ. ಹರೀಶ್, ಗಣೇಶ್ ಪ್ರಸಾದ್, ಎಂಎಲ್‌ಸಿ ಎಂ.ಬಿ. ನವೀನ್, ಚಿಂತಕ ಚಿದಾನಂದಗೌಡ, ಹಿರೇಮಗಳೂರು ಕಣ್ಣನ್, ಎಚ್.ಆರ್. ಬಸವರಾಜಪ್ಪ, ಕರ್ನಾಟಕ ನೀರಾವರಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಮುಂತಾದವರು ಉಪಸ್ಥಿತರಿದ್ದರು.
ವಾಹನದಲ್ಲಿ ಶ್ರೀಗಳ ಗ್ರಾಮಯಾತ್ರೆತರಳಬಾಳು ಮಠದ ಸಂಪ್ರದಾಯದಂತೆ ಕಳೆದ ೭ ದಶಕಗಳಿಂದ ನಡೆಯುತ್ತಾ ಬಂದಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದರ್ಭದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಡ್ಡಪಲ್ಲಕ್ಕಿ ಮೆರವಣಿಗೆಯನ್ನು ನಿರಾಕರಿಸಿ ಅಲಂಕೃತ ವಾಹನ ಏರಿ ಸಿರಿಗೆರೆಯ ಬೀದಿಗಳಲ್ಲಿ ಸಂಚಾರ ನಡೆಸಿದರು. ಇದರಿಂದ ಮಠದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಸೃಷ್ಟಿಯಾದಂತಾಯಿತು.
ಐಕ್ಯಮಂಟಪದಿಂದ ಹೊರಬಂದು ಮೆರವಣಿಗೆಯ ವಾಹನವೇರುತ್ತಿದ್ದಂತೆ ಹಲವು ಜಿಲ್ಲೆಗಳಿಂದ ಬಂದಿದ್ದ ಶಿವಸೈನ್ಯ ಯುವಕರ ಜಯಘೋಷ ಮುಗಿಲು ಮುಟ್ಟಿದವು. ಯುವಕರ ತಂಡಗಳು ಕುಣಿದು ಕುಪ್ಪಳಿಸಿ ತರಳಬಾಳು ಸಂತತಿಗೆ ಜಯವಾಗಲಿ ಎಂದರು. ಬೃಹದಾಕಾರದ ಶಿವಧ್ವಜಗಳು ಮುಗಿಲುಮುಟ್ಟಿದವು.ಹಲವು ಜಾನಪದ ತಂಡಗಳು ಮೆರವಣಿಗೆಯಲ್ಲಿ ಸಾಗಿಬಂದವು. ಪೂರ್ಣಕುಂಭ ಹೊತ್ತ ಬಾಲಿಕೆಯರು ಮೆರವಣಿಗೆಯುದ್ದಕ್ಕೂ ಸಾಗಿ ಮೆರವಣಿಗೆಗೆ ಮೆರಗು ನೀಡಿದರು.
ಶ್ರೀ ಅಡ್ಡಪಲ್ಲಕ್ಕಿ ನಿರಾಕರಣೆ: ಭಕ್ತರಿಂದ ಮಿಶ್ರ ಪ್ರತಿಕ್ರಿಯೆಇದೇ ಮೊದಲ ಬಾರಿಗೆ ತರಳಬಾಳು ಹುಣ್ಣಿಮೆಯಲ್ಲಿ ಅಡ್ಡಪಲ್ಲಕ್ಕಿ ಮೆರವಣಿಗೆಯನ್ನು ನಿರಾಕರಿಸಿ ಅಲಂಕೃತ ವಾಹನದಲ್ಲಿ ಗ್ರಾಮ ಸಂಚಾರ ಮಾಡಿದ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ನಿರ್ಧಾರಕ್ಕೆ ಭಕ್ತ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೆರವಣಿಗೆಯಲ್ಲಿ ಭಾಗವಹಿಸಲು ಹಲವು ಜಿಲ್ಲೆಗಳಿಂದ ಬಂದಿದ್ದ ಯುವಕರು, ರೈತರು ಮತ್ತು ಭಕ್ತರನ್ನು ಮಾತನಾಡಿಸಿದಾಗ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.ರಾಜ್ಯದಲ್ಲಿ ತೀವ್ರ ಬರ ಆವರಿಸಿದೆ. ರೈತ ಸಮುದಾಯ ಹಲವು ತೊಂದರೆಗಳಿಗೆ ಸಿಲುಕಿದೆ. ರೈತರ ಬಾಳು ಹಸನಾಗಲು ಶ್ರೀಗಳು ಹಲವು ಏತನೀರಾವರಿ ಯೋಜನೆಗಳು ಜಾರಿಯಾಗುವಂತೆ ಸರ್ಕಾರದ ಮನವೊಲಿಸಿ ಕೆಲಸ ನಿರ್ವಹಿಸಿದ್ದಾರೆ. ಜನರು ಸಂಕಟದಲ್ಲಿರುವಾಗ ಮೆರವಣಿಗೆ ಬೇಡವೆಂದು ಶ್ರೀಗಳು ತೆಗೆದುಕೊಂಡ ಕ್ರಮ ಸ್ತುತ್ಯಾರ್ಹ ವಾದುದಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ಮತ್ತೊಂದೆಡೆ ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆ ಸಾಗುವ ಶ್ರೀಗಳನ್ನು ಕಣ್ತುಂಬಿಕೊಳ್ಳುವುದೇ ಅಪರೂಪದ ಸನ್ನಿವೇಶ. ಅಂತಹ ಸಡಗರಕ್ಕೆ ಈ ಬಾರಿ ಅವಕಾಶ ಇಲ್ಲದಂತಾಯಿತು ಎಂಬ ಕೊರಗು ಉಳಿಯಿತು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.