ರೋಗ ಹೆಚ್ಚಳಕ್ಕೆ ಆಲಸ್ಯತನವೇ ಕಾರಣ

| Published : Jul 15 2025, 11:45 PM IST

ಸಾರಾಂಶ

ನಿತ್ಯವೂ ಕ್ರಿಮಿನಾಶಕ ಸಿಂಪಡಿಸಿದ ಮತ್ತು ಹೈಬ್ರಿಡ್ ಆಹಾರ ಸೇವಿಸುತ್ತಿರುವುದರಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿವೆ. ಯಥೇಚ್ಛವಾಗಿ ಎಣ್ಣೆ ಪದಾರ್ಥ, ಮಾಂಸಹಾರ ಸೇವಿಸುವುದರಿಂದಲೂ ಹೃದಯಾಘಾತ ಉಂಟಾಗುವ ಸಾಧ್ಯತೆ ಇದೆ.

ಕನಕಗಿರಿ:

ಆಲಸ್ಯತನದಿಂದಲೇ ಮನುಷ್ಯನಿಗೆ ವಿವಿಧ ರೋಗಗಳು ಬರುತ್ತಿದ್ದು ಯೋಗ, ಪ್ರಾಣಾಯಾಮಗಳಲ್ಲಿ ತೊಡಗಿಸಿಕೊಂಡು ಆರೋಗ್ಯವಂತರಾಗಬೇಕು ಎಂದು ಹೃದ್ರೋಗ ತಜ್ಞ ಡಾ. ಭಾನು ಪ್ರತಾಪ ಹೇಳಿದರು.

ಪಟ್ಟಣದ ಕೌಡೇಪೀರ ಯುವಕರ ಕಮಿಟಿ ವತಿಯಿಂದ ಆಯೋಜಿಸಿದ್ದ ‘ಆರೋಗ್ಯ ಹಬ್ಬ’ ಹಾಗೂ ಹೃದಯ ಸಂಬಂಧಿ ವಿಶೇಷ ಉಪನ್ಯಾಸ, ಸೂಲಗಿತ್ತಿ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿತ್ಯವೂ ಕ್ರಿಮಿನಾಶಕ ಸಿಂಪಡಿಸಿದ ಮತ್ತು ಹೈಬ್ರಿಡ್ ಆಹಾರ ಸೇವಿಸುತ್ತಿರುವುದರಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿವೆ. ಯಥೇಚ್ಛವಾಗಿ ಎಣ್ಣೆ ಪದಾರ್ಥ, ಮಾಂಸಹಾರ ಸೇವಿಸುವುದರಿಂದಲೂ ಹೃದಯಾಘಾತ ಉಂಟಾಗುವ ಸಾಧ್ಯತೆ ಇದೆ ಎಂದರು.ಇನ್ನೂ ಮನುಷ್ಯ ಎಂತಹ ಸಂದರ್ಭದಲ್ಲೂ ಒತ್ತಡಕ್ಕೆ ಸಿಲುಕದೆ ಜೀವನ ಸಾಗಿಸಬೇಕು. ನೈಸರ್ಗಿಕವಾಗಿರುವ ತರಕಾರಿ, ಹಣ್ಣು ಹಾಗೂ ಕಾಳು ಸೇವಿಸಿ ಆರೋಗ್ಯ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಮುಕ್ತರಾಗಬೇಕು ಎಂದು ತಿಳಿಸಿದರು. ಕೊಪ್ಪಳ ಕಿಮ್ಸ್ ಆಸ್ಪತ್ರೆಯ ಆಡಳಿತ ಪರಿಷತ್ ಸದಸ್ಯ ಡಾ. ಸಿದ್ದರಾಮೇಶ ಮಾತನಾಡಿ, ಮೊಹರಂ ಹಬ್ಬದಲ್ಲಿ ಆರೋಗ್ಯ ಕಾಳಜಿಯುಳ್ಳ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಹಲವು ದಶಕಗಳಿಂದ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮಾಡಿಸಿ ನಿಸ್ವಾರ್ಥ ಸೇವೆಗೈದ ಸೂಲಗಿತ್ತಿಯರಾದ ಹೊನ್ನೂರಮ್ಮ, ಸಗರಮ್ಮ, ಫಾತಮ್ಮ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಸಹನಾ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹಜರತ್ ಹುಸೇನ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಪ್ರಮುಖರಾದ ಶರಣಪ್ಪ ಭತ್ತದ, ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಥಿರಂಗಪ್ಪ ನಾಯಕ, ಸದಸ್ಯರಾದ ಸಂಗಪ್ಪ ಸಜ್ಜನ, ರಾಕೇಶ ಕಂಪ್ಲಿ, ಹನುಮಂತ ಬಸರಿಗಿಡ, ಮಾಜಿ ಜಿಪಂ ಸದಸ್ಯ ವೀರೇಶ ಸಮಗಂಡಿ, ಆಪ್ತ ಸಮಾಲೋಚಕ ಸಿದ್ದರಾಮಪ್ಪ ಚಳ್ಳೂರು, ಪ್ರಮುಖರಾದ ವಾಗೇಶ ಹೀರೆಮಠ, ಹುಸೇನಸಾಬ ಗೊರಳ್ಳಿ, ಖಾಜಾಸಾಬ ಗುರಿಕಾರ ಇದ್ದರು.