ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಸೂರು ವಂಚಿತ ಕಡು ಬಡವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದೇ ನಮ್ಮೆಲ್ಲರ ಉದ್ದೇಶವಾಗಿದೆ. ಸೂರು ವಂಚಿತ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವುದರ ಜೊತೆಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಮುಂದಿನ ದಿನಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸಿಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.ನಗರದ ಹೆಚ್ಚುವರಿ ಐಡಿಎಸ್‌ಎಂಟಿ ಲೇಔಟ್‌ಗೆ ಅಡಿಗಲ್ಲು ಸಮಾರಂಭ ನೆರವೇರಿಸಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಂಜೂರಾತಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
ವಸತಿ ರಹಿತರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಹತ್ವಕಾಂಕ್ಷಿ ಯೋಜನೆಯನ್ನು ರೂಪಿಸಿವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ನಗರಸಭೆಯಿಂದ ಸಹಾಯಧನ ಸೌಲಭ್ಯ ಪಡೆದುಕೊಂಡು ಮನೆ ನಿರ್ಮಿಸಿಕೊಳ್ಳುವ ಮೂಲಕ ನೆಮ್ಮದಿ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು.ಅಂದಾಜು 1980-81ರಲ್ಲಿ ಐಡಿಎಸ್‌ಎಂಟಿ ಲೇಔಟ್ ನಿರ್ಮಾಣವಾಗಿದ್ದು, ಅದರಲ್ಲಿ ಹೆಚ್ಚುವರಿಯಾಗಿ ಉಳಿದಿದ್ದ ಐಡಿಎಸ್‌ಎಂಟಿ 8 ಎಕರೆ ಪ್ರದೇಶದಲ್ಲಿ ಸುಮಾರು 84 ನಿವೇಶನಗಳನ್ನು ಪ್ರಸ್ತುತವಾಗಿ ರೂಪಿಸಲಾಗಿದೆ. ಮತ್ತು ಈ ಪ್ರದೇಶವನ್ನು ಸಮತಟ್ಟು ಗೊಳಿಸಲು ಕೆಂಪು ಮಣ್ಣ (ಮರಮು) ಹಾಕಿಸಲು 33 ಲಕ್ಷ ರು. ಗಳ ವೆಚ್ಚದ ಟೆಂಡರ್ ಕರೆಯಲಾಗಿದೆ. ಇನ್ನುಳಿದಂತೆ ಚರಂಡಿ, ರಸ್ತೆ ಮತ್ತು ವಿದ್ಯುತ್ ಸಂಪರ್ಕ ಸೌಲಭ್ಯ ಕಲ್ಪಿಸಲು ಯೋಜನೆ ಪತ್ರ ಸಿದ್ಧಗೊಂಡಿದ್ದು, ಮುಂದಿನ ದಿನಗಳಲ್ಲಿ ಸಮರ್ಪಕ ಸೌಲಭ್ಯ ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಬೇಸಿಗೆ ಆಗಮಿಸಿದ್ದರಿಂದ ನಗರ ಸೇರಿದಂತೆ ಕ್ಷೇತ್ರದಾದ್ಯಂತ ಕುಡಿಯಲು ನೀರಿನ ತೊಂದರೆಯಾಗದಂತೆ ಸಮರ್ಪಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ಮತ್ತು ಆಯಾ ತಾಲೂಕು ಆಡಳಿತ ಸಜ್ಜುಗೊಂಡಿವೆ. ಶಹಾಪುರ ನಗರದ ಹಲವು ಬಡಾವಣೆಗಳನ್ನು ಗುರುತಿಸಿ ಆಯಾ ಸಮೀಪದ ಬೋರವೆಲ್ ದುರಸ್ತಿ ಸೇರಿದಂತೆ ಅಗತ್ಯ ಬಿದ್ದಲ್ಲಿ ಖಾಸಗಿ ಅವರ ಬೋರವೆಲ್ ವಶಕ್ಕೆ ಪಡೆದುಕೊಂಡು ಸಮರ್ಪಕವಾಗಿ ನೀರಿನ ತೊಂದರೆಯಾಗದಂತೆ ಪೂರೈಕೆ ಮಾಡುವಂತೆ ಸರ್ಕಾರದ ಆದೇಶವಿದೆ. ಅಂತಹ ಸಮಸ್ಯೆ ನಮ್ಮ ಕ್ಷೇತ್ರದಲ್ಲಿ ಇಲ್ಲ. ಗ್ರಾಮೀಣ ಪ್ರದೇಶ ಒಂದೆರೆಡು ಗ್ರಾಮಗಳಲ್ಲಿ ಇದೆ. ಕರೆಗಳು ಬರುತ್ತಿವೆ. ಅಂತಹ ಗ್ರಾಮಗಳಿಗೆ ಟ್ಯಾಂಕ್ ಮೂಲಕ ಅಥವಾ ಸಮೀಪದ ಬೋರವೆಲ್ ಉಪಯೋಗಿಸಿಕೊಂಡು ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ನಗರದಲ್ಲಿ ಅಂತಹ ತೊಂದರೆ ಇಲ್ಲ. ಅಗತ್ಯವಿದ್ದಲ್ಲಿ ಖಾಸಗಿ ಅವರ ಬೋರವೆಲ್ ಸಹಕಾರ ಪಡೆದು ನೀರು ಒದಗಿಸಲಾಗುವದು ಎಂದರು.ಈ ಸಂದರ್ಭದಲ್ಲಿ ಮನೆ ಕಟ್ಟಿಕೊಳ್ಳುವ ಅರ್ಹ ಫಲಾನುಭವಿಗಳಿಗೆ ನಗರಸಭೆ ನಿಧಿ ಯೋಜನೆಯಡಿ ಸಹಾಯ ಧನ ಪಡೆಯಲು ಆಯ್ಕೆಗೊಂಡ 105 ಫಲಾನುಭವಿಗಳಲ್ಲಿ ವೇದಿಕೆ ಮೇಲೆ ಸಾಂಕೇತಿಕವಾಗಿ ಐದು ಜನರಿಗೆ ವಿತರಿಸಲಾಯಿತು.
ಪೌರಾಯುಕ್ತ ರಮೇಶ ಬಡಿಗೇರ, ನಗರಸಭೆ ಸದಸ್ಯರಾದ ಶಿವಕುಮಾರ ತಳವಾರ, ಅಂಬ್ಲಪ್ಪ, ಎಇಇ ನಾನಾಸಾಬ, ಪರಿಸರ ಅಭಿಯಂತರ ಹರೀಶ ಸಜ್ಜನ್, ಆಶ್ರಯ ಕಮಿಟಿ ಅಧ್ಯಕ್ಷ ವಸಂತಕುಮಾರ ಸುರಪುರಕರ್ ಇತರರಿದ್ದರು.