ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಅಂಗಡಿ ಮುಂಗಟ್ಟುದಾರರು ಆಂಗ್ಲ ಭಾಷೆ ನಾಮಫಲಕ ತೆರವುಗೊಳಿಸಿ ಶೇ.60 ರಷ್ಟು ಕನ್ನಡ ಪದ ಬಳಕೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ಕರವೇ ಕಾರ್ಯ ಕರ್ತರು ಮಂಗಳವಾರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ನಗರದ ಬೋಳ ರಾಮೇಶ್ವರ ದೇವಾಲಯದಿಂದ ಐ.ಜಿ.ರಸ್ತೆ ಹಾಗೂ ಎಂ.ಜಿ.ರಸ್ತೆ ಮುಖಾಂತರ ಸಾಗಿದ ಪ್ರತಿಭಟನಾಕಾರರು ಪ್ರತಿ ಅಂಗಡಿದಾರರ ನಾಮಫಲಕ ಗಮನಿಸಿ ಶೇ.60 ಕನ್ನಡ ಬಳಸಿದ ಮಾಲೀಕರಿಗೆ ಸನ್ಮಾನಿಸಿ, ಉಳಿದ ಮುಂಗಟ್ಟುದಾರರಿಗೆ ಮಾ.13ರವರೆಗೆ ಅಂತಿಮ ಗಡುವು ನೀಡಿ ಎಚ್ಚರಿಸಿದ ನಂತರ ಪೌರಾಯುಕ್ತ ಹೆಚ್.ಟಿ.ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್, ಕನ್ನಡ ನಾಮಫಲಕಗಳು ಇರಬೇಕೆಂಬ ಹಕ್ಕೊತ್ತಾಯವನ್ನು ಮುಂದಿಟ್ಟು ಕರವೇ ಮುಖಂಡರು ಗಳು ಚಳವಳಿಯ ನಿರ್ಣಯ ಕೈಗೊಂಡಿದೆ.
ಕನ್ನಡ ನಮಗೇಕೆ ಬೇಕು ಎಂಬ ದರ್ಪದಿಂದ ಕೊಬ್ಬಿರುವ ಪರಭಾಷಿಕ ಉದ್ಯಮಿಗಳಿಗೆ ತಕ್ಕ ಪಾಠ ಕಲಿಸುವ ಕೆಲಸ ವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಸಾವಿರಾರು ಕನ್ನಡೇತರ ನಾಮಫಲಕಗಳು ಧರೆ ಗುರುಳಿದವು. ಚಳವಳಿಗೆ ರಾಜ್ಯದ ಜನತೆ ತುಂಬ ಮನಸ್ಸಿನಿಂದ ಬೆಂಬಲಿಸಿ ಕನ್ನಡ ನಾಮಫಲಕಬೇಕು ಎಂದು ದಶಕಗಳಿಂದ ಹಂಬಲಿಸುತ್ತಿದ್ದ ಮನಸ್ಸುಗಳಿಗೆ ಸಮಾಧಾನ ತಂದಿರುವ ಬಹುದೊಡ್ಡ ಹೋರಾಟ ವಾಗಿದೆ ಎಂದರು.
ಪ್ರಸ್ತುತ ರಾಜ್ಯಸರ್ಕಾರ ಜಾರಿಗೆ ತಂದಿರುವ ಕನ್ನಡಭಾಷಾ ಸಮಗ್ರ ಅಭಿವೃದ್ಧಿ ಪ್ರತಿ ಅಂಗಡಿ ಮುಂಗಟ್ಟುದಾರರು ಶೇ.60 ರಷ್ಟು ಭಾಗ ಕನ್ನಡ ಬಳಸಬೇಕು. ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು.
ಪ್ರಚಾರ ಕಾರ್ಯದಲ್ಲಿ ಹಾಗೂ ಜಾಹೀರಾತು ಫಲಕಗಳು ಕನ್ನಡದಲ್ಲಿರಬೇಕು ಹಾಗೂ ಎಲ್ಲಾ ಉದ್ಯಮಿಗಳು, ವ್ಯಾಪಾರ ಸ್ಥರು ಪಾಲಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಗರಸಭಾ ಪೌರಾಯುಕ್ತರು ಸಂಬಂಧಿಸಿದ ಅಧಿಕಾರಿಗಳಿಂದ ಅಂಗಡಿ ಮುಂಗಟ್ಟುದಾರರಿಗೆ ನೋಟಿಸ್ ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರದ ನಿರ್ಣಯವನ್ನು ಯಥಾವತ್ತಾಗಿ ಪಾಲನೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಟೆ ಮಲ್ಲೇಶ್, ತಾಲ್ಲೂಕು ಅಧ್ಯಕ್ಷ ಮನೋಜ್‌ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾದ ಶಶಿ, ಪಂಚಾ ಕ್ಷರಿ,
ಯುವ ಘಟಕದ ಅಧ್ಯಕ್ಷ ಕುಮಾರ್ ಶೆಟ್ಟಿ, ವಕ್ತಾರ ಕೋಟೆ ಸೋಮಣ್ಣ, ಕಡೂರು ಅಧ್ಯಕ್ಷ ಸಿದ್ದಪ್ಪ, ಅಜ್ಜಂಪುರ ಅಧ್ಯಕ್ಷ ಮಧು, ಮೂಡಿಗೆರೆ ಅಧ್ಯಕ್ಷ ಪ್ರಸನ್ನ ಗೌಡ, ಮುಖಂಡರುಗಳಾದ ನಾಗಲತಾ, ಪೂರ್ಣಿಮಾ, ಮಂಜುಳಾಬಾಯಿ, ಶೈಲಶ್ರೀ, ಶ್ರೀಧರ್, ವಿಜಯಲಕ್ಷ್ಮೀ, ವೆಂಕಟೇಶ್, ಇರ್ಷಾದ್ ಅಹ್ಮದ್, ಮಧು ಇದ್ದರು.