ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರವಾರ ಜಿಲ್ಲಾಸ್ಪತ್ರೆಗೆ ನೀಡಿರುವ ಅನುದಾನವನ್ನು ತಮ್ಮ ಅನುದಾನ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಶಾಸಕರು, ಈ ಕುರಿತು ಅಧಿಕೃತ ದಾಖಲೆಗಳಿದ್ದಲ್ಲಿ ಬಿಡುಗಡೆ ಮಾಡಲಿ.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ನಾಯಕರಿಗೆ ಮಾಜಿ ಶಾಸಕಿ ಸವಾಲುಕನ್ನಡಪ್ರಭ ವಾರ್ತೆ ಕಾರವಾರ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರವಾರ ಜಿಲ್ಲಾಸ್ಪತ್ರೆಗೆ ನೀಡಿರುವ ಅನುದಾನವನ್ನು ತಮ್ಮ ಅನುದಾನ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಶಾಸಕರು, ಈ ಕುರಿತು ಅಧಿಕೃತ ದಾಖಲೆಗಳಿದ್ದಲ್ಲಿ ಬಿಡುಗಡೆ ಮಾಡಲಿ ಎಂದು ಕಾರವಾರ-ಅಂಕೋಲಾ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಸವಾಲು ಹಾಕಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಗೆ ಅನುದಾನ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದರು. ಕೇವಲ ಕಟ್ಟಡವನ್ನು ಉದ್ಘಾಟಿಸಿ ಪ್ರಚಾರ ಗಿಟ್ಟಿಸಿಕೊಳ್ಳುವ ಬದಲು, ಮೊದಲು ಆಸ್ಪತ್ರೆಗೆ ಅಗತ್ಯವಿರುವ ತಜ್ಞ ವೈದ್ಯರು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಲಿ ಎನ್ನುವ ಮೂಲಕ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿದರು.

ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿದ್ದ ಈ ಆಸ್ಪತ್ರೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬರೋಬ್ಬರಿ ₹150 ಕೋಟಿ ಅನುದಾನ ಮಂಜೂರು ಮಾಡಲಾಗಿತ್ತು. 450 ಹಾಸಿಗೆಗಳ ಸಾಮರ್ಥ್ಯದ ಈ ಸುಸಜ್ಜಿತ ಕಟ್ಟಡವು ಅಂದು ಮಂಜೂರಾದ ಅನುದಾನದಿಂದಲೇ ತಲೆ ಎತ್ತಿದೆ. ಆದರೆ, ಕಟ್ಟಡ ನಿರ್ಮಾಣವಾಗಿದ್ದರೂ ಚಿಕಿತ್ಸೆ ನೀಡಲು ಪ್ರಮುಖವಾಗಿ ನರರೋಗ ತಜ್ಞರು ಮತ್ತು ಹೃದಯ ರೋಗ ತಜ್ಞರ ನೇಮಕಾತಿ ಇನ್ನೂ ನಡೆದಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುತ್ತೇವೆ ಎಂದು ಘೋಷಿಸಿಕೊಳ್ಳುವ ಕಾಂಗ್ರೆಸ್ ಸರ್ಕಾರದ ಶಾಸಕರು, ಸಚಿವರಿಗೆ, ಆಸ್ಪತ್ರೆಗೆ ಬೇಕಾದ ಕನಿಷ್ಠ ಒಂದು ಎಂಆರ್‌ಐ ಸ್ಕ್ಯಾನಿಂಗ್ ಮಷಿನ್ ಅಳವಡಿಸಲು ಸಾಧ್ಯವಾಗಿಲ್ಲ. ಇದ್ದ ವೈದ್ಯರನ್ನೂ ವರ್ಗಾವಣೆ ಮಾಡಲಾಗಿದೆಯೇ ಹೊರತು, ಖಾಲಿಯಾದ ಹುದ್ದೆಗಳಿಗೆ ಹೊಸ ವೈದ್ಯರನ್ನು ನೇಮಿಸಿಲ್ಲ. ಇದರ ಪರಿಣಾಮವಾಗಿ, ಬಡ ರೋಗಿಗಳು ಸಕಾಲದಲ್ಲಿ ಚಿಕಿತ್ಸೆ ಸಿಗದೇ ಆಂಬ್ಯುಲೆನ್ಸ್‌ಗಳಲ್ಲೇ ಪ್ರಾಣ ಬಿಡುವಂತಾಗಿದೆ. ಬಡವರ ಈ ಕಣ್ಣೀರು ಸರ್ಕಾರಕ್ಕೆ ಶಾಪವಾಗಿ ತಟ್ಟಲಿದೆ ಎಂದು ರೂಪಾಲಿ ಕಿಡಿಕಾರಿದರು.

ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಿಗೆ ಬರುವ ಅಭಿವೃದ್ಧಿ ನಿಧಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವ ಮೂಲಕ ಜನರಿಗೆ ವಂಚಿಸುತ್ತಿದೆ ಎಂದು ಆರೋಪ ಮಾಡಿದರು. ದೇವಸ್ಥಾನಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನೂ ಬಿಟ್ಟಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್ ಶಾಸಕರ ಬೆಂಬಲಿಗರು ಪತ್ರಿಕಾಗೋಷ್ಠಿ ನಡೆಸಿ ಹಿಂದಿನ ಬಿಜೆಪಿ ಸರ್ಕಾರ ನೀಡಿದ ಅನುದಾನವನ್ನೇ ತಮ್ಮದೆಂದು ಹೇಳಿಕೊಳ್ಳುವುದನ್ನು ಬಿಡಬೇಕು. ಈ ಆಸ್ಪತ್ರೆಗೆ ನಿಮ್ಮ ಸರ್ಕಾರದಿಂದ ನಯಾಪೈಸೆ ಬಿಡುಗಡೆಯಾಗಿದ್ದರೆ, ಅಧಿಕೃತ ದಾಖಲೆಗಳ ಸಮೇತ ಮಾತನಾಡಿ ಎಂದು ಸವಾಲು ಹಾಕಿದರು.

ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಜಿಲ್ಲೆಯ ಯಾವುದೇ ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಿಲ್ಲ. ವಿಶೇಷವಾಗಿ ಭಟ್ಕಳ ಸೇರಿದಂತೆ ಪ್ರಮುಖ ತಾಲೂಕುಗಳಲ್ಲಿ ಹೆರಿಗೆ ಮಾಡಿಸಲು ಸ್ತ್ರೀ ರೋಗ ತಜ್ಞರಿಲ್ಲ. ಗರ್ಭಿಣಿಯರು ಹೆರಿಗೆಗಾಗಿ ಹದಗೆಟ್ಟ ರಸ್ತೆಗಳಲ್ಲಿ 200ರಿಂದ 300 ಕಿಮೀ ಪ್ರಯಾಣಿಸಿ ಮಂಗಳೂರು ಅಥವಾ ಉಡುಪಿಗೆ ಹೋಗಬೇಕಾದ ಸ್ಥಿತಿ ಇದೆ. ಈ ಅವ್ಯವಸ್ಥೆ ಸರಿಪಡಿಸಲು ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಕೆ.ಜೆ. ನಾಯ್ಕ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯಕ, ನಗರಾಧ್ಯಕ್ಷ ನಾಗೇಶ ಕುರ್ಡೇಕರ್, ಸುಭಾಷ ಗುನಗಿ, ರವಿರಾಜ ಅಂಕೋಲೆಕರ್, ಸಂಜಯ ಸಾಳುಂಕೆ, ಸುಜಾತಾ ಬಾಂದೇಕರ್, ಅಶೋಕ ಗೌಡ, ದೇವಿದಾಸ್ ಕಂತ್ರೆಕರ್ ಸೇರಿದಂತೆ ಇತರರಿದ್ದರು.