ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಬದುಕಿನ ಜಂಜಾಟಕ್ಕೆ ಬಿದ್ದ ನಾವು ನಗುವುದನ್ನು ಮರೆತೇ ಬಿಟ್ಟಿದ್ದೇವೆ. ಜೀವನದಲ್ಲಿ ಸದಾ ಹಸನ್ಮುಖಿಗಳಾಗಿರಬೇಕು. ಸ್ವಾರ್ಥಿಗಳಾಗುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಹೈಕೋರ್ಟ್ ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಬಿಲ್ಲಪ್ಪ ಹೇಳಿದರು.ತಾಲೂಕಿನ ಮತ್ತೋಡು ಶ್ರೀ ಬನಶಂಕರಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನಡೆದ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮಗಾರಿಗೂ ಇನ್ನೂ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಈ ಸಮಾಜವನ್ನು ಸಮಾನತೆಯಿಂದ ನಡೆಸಲು ಸಾಧ್ಯವಾಗಿಲ್ಲ. ಬಡವರು, ಉಳ್ಳವರು ಎಂಬ ತಾರತಮ್ಯ ಇನ್ನೂ ಇದೆ. ಅವಕಾಶ ಉಳ್ಳವರು, ಅವಕಾಶ ಇಲ್ಲದವರು ಎಂಬ ಎರಡು ವರ್ಗಗಳಿವೆ. ಉಳ್ಳವರು ಮೇಲಿದ್ದಾರೆ, ಇಲ್ಲದವರು ಕೆಳಗಿದ್ದಾರೆ ಎಂದರು.ಕಾಯಕದ ತತ್ವವನ್ನು 12ನೇ ಶತಮಾನದ ಶರಣರ ಜೀವನದಲ್ಲಿ ಕಂಡುಕೊಳ್ಳಬಹುದು. ರಾಜನಾಗಿದ್ದವನು ತನ್ನ ಕಾಯಕವನ್ನ ಮರೆಯುತ್ತಿರಲಿಲ್ಲ. ತಮ್ಮ ತಮ್ಮ ಕಾಯಕದಿಂದಲೇ ಕೈಲಾಸ ಕಾಣುತ್ತಿದ್ದರು. ನಮ್ಮಲ್ಲಿ ಆತ್ಮವಿಶ್ವಾಸ ಧೈರ್ಯ ಇದ್ದರೆ ಎಲ್ಲದನ್ನು ಜಯಿಸಬಹುದು. ಮೂರ್ತಿ ಪೂಜೆ ಒಂದು ಸಂಸ್ಕಾರ. ಇದರಿಂದ ಒಳ್ಳೆಯ ವಾತಾವರಣನಿರ್ಮಾಣ ಮಾಡಬಹುದು. ಆದರೆ ನಾವು ಮಾಡುವ ಕಾಯಕ, ಪೂಜೆಗಿಂತಲೂ ಶ್ರೇಷ್ಠವಾಗಿದೆ. ಶ್ರದ್ಧೆಯಿಂದ ಪ್ರೀತಿಯಿಂದ ಕಾಯಕ ಮಾಡಿದರೆ ಅದು ಶ್ರೇಷ್ಠವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ. ಪರಶುರಾಮಪ್ಪ ಮಾತನಾಡಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಬಡ ಹಾಗೂ ಮಧ್ಯಮ ವರ್ಗದ ರೈತ ಕುಟುಂಬಗಳಿಗೆ ವಸತಿ ಸೌಲಭ್ಯ, ಶೌಚಾಲಯ, ಗೃಹ ನಿರ್ಮಾಣ, ಪ್ರಾಕೃತಿಕ ವಿಪತ್ತು ಸಂಭವಿಸಿದಾಗ ಹಾಳಾದ ಮನೆಗಳ ನಿರ್ಮಾಣಕ್ಕೆ ಧನ ಸಹಾಯ, ದುಶ್ಚಟ ನಿರ್ಮೂಲನೆಯಂತಹ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.ಚಿತ್ರದುರ್ಗದ ಪಾಳೇಗಾರರ ಕಾಲದ ಮತ್ತೋಡು ಭಾಗದಲ್ಲಿನ ಬೇವಿನಾಳಮ್ಮ, ಭಾಗೀರಥಮ್ಮ ಹಾಗೂ ಬನಶಂಕರಿ ದೇವಾಲಯಗಳ ಜೀರ್ಣೋದ್ಧಾರ ಮಾಡುವ ಕಾಯಕವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ. ಕಂಚೀಪುರ, ಡಿಬಿ ಕೆರೆ, ಕಿಟ್ಟದಾಳ್, ದ್ಯಾವಜ್ಜನಪಾಳ್ಯ, ಬನಸಿಹಳ್ಳಿ, ಬೋಕಿಕೆರೆ ಕೆರೆ ಅಭಿವೃದ್ಧಿ ಮಾಡುವುದರ ಮೂಲಕ ಬರದ ನಾಡು ಹೊಸದುರ್ಗ ತಾಲೂಕಿನ ಅಂತರ್ಜಲ ಅಭಿವೃದ್ಧಿಗೆ ಕಂಕಣ ತೊಟ್ಟಿದ್ದಾರೆ. ಗುಡಿ ಕೈಗಾರಿಕೆಗಳು ಹಾಗೂ ಸಿದ್ಧ ಉಡುಪುಗಳ ತಯಾರಿಕೆ, ಸಿರಿಧಾನ್ಯ ಉತ್ಪಾದನೆಯಲ್ಲಿ ಧರ್ಮಸ್ಥಳ ಸಂಸ್ಥೆ ಮಹತ್ತರ ಪಾತ್ರ ಹೊಂದಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಯೋಜನಾಧಿಕಾರಿ ಶಿವಣ್ಣ, ಗ್ರಾಪಂ ಅಧ್ಯಕ್ಷೆ ಪರಮ್ಮ, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ತುಂಬಿನಕೆರೆ ಬಸವರಾಜ್, ತಿಪ್ಪೇಶಪ್ಪ, ರೇವಣಸಿದ್ದಪ್ಪ, ಶಿವಮೂರ್ತಿ, ಶಿಲ್ಪಾ, ಲತಾ, ಗಾಯತ್ರಿ ವೀಣಾ, ಶ್ವೇತಾ, ಹಾಗೂ ಒಕ್ಕೂಟದ ಸದಸ್ಯರು ಹಾಜರಿದ್ದರು.