ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತ್ಯೇತರರು ಅಧ್ಯಕ್ಷರಾದರೆ ಅದು ಸಮ್ಮೇಳನಕ್ಕೆ ಮಾಡುವ ದೊಡ್ಡ ಅವಮಾನ, ಮೋಸ ಎಂದು ರಂಗಕರ್ಮಿ ಮಂಡ್ಯ ರಮೇಶ್ ವಿಶ್ಲೇಷಿಸಿದರು.ನಗರದ ಪತ್ರಕರ್ತರ ಭವನದಲ್ಲಿ ನಡೆದ ವಾರದ ಅತಿಥಿ ಸಾಹಿತಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತಿಗಳೇ ಅಧ್ಯಕ್ಷರಾಗಬೇಕು. ಸಾಹಿತ್ಯದ ನೆಲೆಗಟ್ಟಿನಿಂದ ಬಂದವರು ಅಧ್ಯಕ್ಷರಾದರೆ ಸಮ್ಮೇಳನ ಅರ್ಥಪೂರ್ಣವಾಗುತ್ತದೆ. ಸಾಹಿತ್ಯ ಕ್ಷೇತ್ರದವರನ್ನು ಹೊರತುಪಡಿಸಿ ಬೇರೆಯವರು ಅಧ್ಯಕ್ಷರಾಗುವುದಾದರೆ ಅಂತಹ ಸಮ್ಮೇಳನದಿಂದ ನಾನು ದೂರ ಉಳಿಯುವುದಾಗಿ ನೇರವಾಗಿಯೇ ಹೇಳಿದರು.
ಸಾಹಿತ್ಯವೆಂದರೆ ಜ್ಞಾನವಷ್ಟೇ ಅಲ್ಲ ಬದುಕು:ಸಾಹಿತ್ಯವೆಂದರೆ ಅರಿವು, ಜ್ಞಾನ ಅಷ್ಟೇ ಅಲ್ಲದೇ ಬದುಕು ಕೂಡ ಹೌದು. ಸಾಹಿತ್ಯಕ್ಕೆ ಇರುವ ಸರಳತೆಯಿಂದ ಶ್ರೇಷ್ಠತೆಯನ್ನು ಗುರುತಿಸುವ ಕೆಲಸ ಆಗಬೇಕು. ಭಾಷೆಯ ಮೇಲೆ ಹಿಡಿತವನಿಟ್ಟುಕೊಂಡು ಹೊಸ ರೂಪ, ಶಕ್ತಿ ತುಂಬುವ ಸಾಮರ್ಥ್ಯವಿರುವುದು ಸಾಹಿತಿಗಳಿಗೆ ಮಾತ್ರ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದರು.
ಪುಸ್ತಕ ಪ್ರೀತಿ ಹೆಚ್ಚಿಸಿ:ಪ್ರಸ್ತುತ ಸಮಯದಲ್ಲಿ ಸಾಹಿತ್ಯ ಸಮ್ಮೇಳನಗಳು ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಪುಸ್ತಕ ಪ್ರೀತಿ ಹೆಚ್ಚಿಸುವ ಕೆಲಸ ಆಗಬೇಕಿದೆ. ಪರಂಪರೆ ಗುರುತಿಸದ ಹೊರತು ಸಮ್ಮೇಳನಗಳಿಗೆ ಅರ್ಥವಿರುವುದಿಲ್ಲ. ಪ್ರಸಿದ್ಧ ಕಾವ್ಯ-ಕಾದಂಬರಿಗಳನ್ನು ಮಕ್ಕಳಿಗೆ ಕಲಿಸುವ ಕೆಲಸವಾಗಬೇಕಿದೆ. ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆದಾಗ ಪುಸ್ತಕ ಪ್ರೀತಿಯೂ ಬೆಳವಣಿಗೆ ಕಾಣುತ್ತದೆ ಎಂದು ವಿಶ್ಲೇಷಿಸಿದರು.
ಜಾಗತಿಕವಾಗಿ ಉದ್ಯೋಗ ಸೃಷ್ಟಿಯಾಗಲಿ:ಇಂದಿನ ದಿನಮಾನಗಳಲ್ಲಿ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡಿದವರು, ಕನ್ನಡ ಭಾಷೆಯನ್ನು ಅರ್ಥೈಸಿಕೊಂಡವರು ಜಾಗತಿಕವಾಗಿ ತಲುಪಲು ಪೂರಕವಾಗುವಂತಹ ಉದ್ಯೋಗಗಳು ಸೃಷ್ಟಿಯಾಗಬೇಕು. ಕಡ್ಡಾಯವಾಗಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರಿಗೆ ರಂಗಭೂಮಿ ತರಬೇತಿ ಕೊಟ್ಟು ಮಕ್ಕಳಿಗೆ ಸಂವಹನವನ್ನು ದಟ್ಟವಾಗಿ ನೀಡಬೇಕು. ಭಾಷೆ, ಉಪಭಾಷೆ ಸೇರಿದಂತೆ ಕನ್ನಡದ ಎಲ್ಲಾ ಪ್ರಾಕಾರಗಳನ್ನು ಕಲಿಸುವ ಕೆಲಸ ಸರ್ಕಾರದಿಂದ ನಡೆದರೆ ಭಾಷೆಯ ಜೊತೆಗೆ ಸಾಹಿತ್ಯವೂ ಸಮೃದ್ಧವಾಗಿ ಬೆಳವಣಿಗೆ ಕಾಣುತ್ತದೆ ಎಂದರು.
ಸಾಹಿತ್ಯದ ಮೇಲಿನ ಒಲವು ಕ್ಷೀಣ:ಸಾಹಿತ್ಯವನ್ನು ಎಲ್ಲರೂ ಆರಾಧಿಸಬೇಕು. ಪುಸ್ತಕದ ಮಹತ್ವವನ್ನು ತಿಳಿಸಿಕೊಡುವ ಗುರುಗಳಿಲ್ಲದಿರುವುದರಿಂದ ಸಾಹಿತ್ಯದ ಮೇಲಿನ ಒಲವು ಕ್ಷೀಣಿಸಿದೆ. ಅದಕ್ಕಾಗಿ ಒಳ್ಳೆಯ ಸಾಹಿತ್ಯ ಪುಸ್ತಕಗಳ ಮಹತ್ವವನ್ನು ತಿಳಿಸಿಕೊಡುವ ಅಗತ್ಯವಿದೆ. ಉತ್ತಮ ಕತೆ, ಕಾದಂಬರಿಗಳನ್ನು ನಾಟಕ ರೂಪಕ್ಕಿಳಿಸಿ ಜನರಿಗೆ ಅರ್ಥೈಸಿಕೊಡಬೇಕಿದೆ. ಯಾವುದೇ ಕ್ಷೇತ್ರ ಸಾಹಿತ್ಯದ ನೆಲಗಟ್ಟನ್ನು ಹೊಂದಿದ್ದರೆ ಮಾತ್ರ ಎಲ್ಲರನ್ನೂ ಆಕರ್ಷಿಸಲು ಸಾಧ್ಯ. ಕಾವ್ಯಾತ್ಮಕ ಗುಣ ಕೂಡ ಮುಖ್ಯ ಎಂದರು.
ಚಿತ್ರರಂಗದಲ್ಲಿ ಸಾಹಿತ್ಯದ ನೆಲಗಟ್ಟಿಲ್ಲ:ಸಾಹಿತ್ಯದ ನೆಲಗಟ್ಟನ್ನು ಕಳೆದುಕೊಂಡಿರುವುದರಿಂದಲೇ ಚಿತ್ರರಂಗ ಆಕರ್ಷಣೆಯನ್ನು ಕಳೆದುಕೊಂಡಿದೆ. ಕಿರುತೆರೆಯಲ್ಲಿ ಸೇತುರಾಂ, ಟಿ.ಎನ್. ಸೀತಾರಾಂ, ನಾಗಾಭರಣ ಅವರಂತಹ ಪ್ರಬುದ್ಧ ನಿರ್ದೇಶಕರು ರೂಪಿಸಿದ ಧಾರಾವಾಹಿಗಳು ಗುಣಮಟ್ಟವನ್ನು ಹೊಂದಿದ್ದರೂ, ಸೃಜನಶೀಲತೆಯಿಂದ ಕೂಡಿದ್ದರೂ ಜನರನ್ನು ಮೆಚ್ಚಿಸಲಾಗುತ್ತಿಲ್ಲ. ಅದಕ್ಕಾಗಿ ಸಾಹಿತ್ಯಾಸಕ್ತಿಯನ್ನು ಎಲ್ಲರಲ್ಲೂ ಬೆಳೆಸುವುದರೊಂದಿಗೆ ಹೊಸದೊಂದು ಪರಂಪರೆಯನ್ನು ಹುಟ್ಟಿಹಾಕಬೇಕಿದೆ ಎಂದರು.
ಮಕ್ಕಳಿಗೆ ರಂಗಭೂಮಿಯಲ್ಲಿ ಕೆಲಸ ಮಾಡುವುದಕ್ಕೆ ತರಬೇತಿ ಕೇಂದ್ರಗಳನ್ನು ನಿರ್ಮಾಣ ಮಾಡಬೇಕು. ಕಾವ್ಯ ಮತ್ತು ಕಾದಂಬರಿಗಳನ್ನು ನಾಟಕವಾಗಿ ನಿರ್ಮಾಣ ಮಾಡುವ ಸಾಮರ್ಥ್ಯವನ್ನು ಅವರಲ್ಲಿ ಬೆಳೆಸಬೇಕಿದೆ. ಕೌಶಲ್ಯ ಜ್ಞಾನದ ಜೊತೆಯಲ್ಲೇ ಸಾಹಿತ್ಯದ ಮನಸ್ಥಿತಿಯನ್ನು ವೃದ್ಧಿಸುವಂತೆ ಮಾಡಬೇಕಿದೆ ಎಂದರು.ಒಬ್ಬರಿಂದ ರಂಗಭೂಮಿ ನಡೆಸಲಾಗದು:
ನಾನು ರಂಗಭೂಮಿಯಿಂದ ಬಂದವನು. ನಾಟಕ ತಂಡವನ್ನು ಕಟ್ಟಿಕೊಂಡು ಪ್ರದರ್ಶನಗಳನ್ನು ನೀಡುತ್ತಿದ್ದೇನೆ. ಸಾಹಿತ್ಯ, ಕತೆ, ಕವನ, ಕಾದಂಬರಿ ಬರೆಯುವ ಕೆಲಸವನ್ನು ಒಬ್ಬನೇ ಮಾಡಬಲ್ಲರು. ನಾಟಕ ಒಬ್ಬರಿಂದ ಆಗುವ ಕೆಲಸವಲ್ಲ. ಅದಕ್ಕೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಮಚಿತ್ತತೆಯಿಂದ ಕೊಂಡೊಯ್ಯುವ ಅಗತ್ಯವಿದೆ. ನಾನಿಲ್ಲದಿದ್ದರೂ ನಾಟಕವನ್ನು ಮುಂದುವರಿಸಿಕೊಂಡು ಹೋಗುವ ಕಲಾತಂಡಗಳನ್ನು ಜೊತೆಯಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮಂಡ್ಯ ಜಿಲ್ಲೆಯ ನಾಗಮಂಗಲ, ಪಾಂಡವಪುರ ಸೇರಿದಂತೆ ಇತರೆಡೆಗಳಲ್ಲಿ ನಾನೂ ಅನೇಕ ನಾಟಕಗಳನ್ನು ಪ್ರದರ್ಶಿಸಿದ್ದೇನೆ. ಆದರೆ, ಪ್ರೇರಣೆ, ಪ್ರೋತ್ಸಾಹದ ಹುಡುಕಾಟದಲ್ಲಿದ್ದ ನನಗೆ ಮೈಸೂರಿನಲ್ಲಿ ಅದು ಸಿಕ್ಕಾಗ ಅಲ್ಲೇ ನೆಲೆಯೂರುವಂತಾಯಿತು. ಈಗಲೂ ಅವಕಾಶ ನೀಡುವವರು ಮುಂದೆ ಬಂದರೆ ನಾನು ಮಂಡ್ಯದಲ್ಲಿಯೂ ನಾಟಕ ಪ್ರದರ್ಶನಗಳನ್ನು ನೀಡುವುದಕ್ಕೆ ಸಿದ್ಧನಿದ್ದೇನೆ ಎಂದು ಮುಕ್ತವಾಗಿ ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಕೆ.ಎನ್.ರವಿ, ಆನಂದ್, ನಂಜುಂಡಸ್ವಾಮಿ ಇದ್ದರು.