ಸಾರಾಂಶ
ಚಿತ್ರದುರ್ಗ: ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಬಲ ಇದ್ದರೂ, ಮಹಿಳೆ ಮೇಲಿನ ಹಿಂಸೆ ಪ್ರಕರಣಗಳು ಕಡಿಮೆಯಾಗಿಲ್ಲ. ಹಿಂಸೆ ಅನುಭವಿಸಿದರೂ ಮಹಿಳೆಯರು ದೂರು ನೀಡಲು ಹಿಂದೇಟು ಹಾಕುತ್ತಾರೆ. ಆರ್ಥಿಕವಾಗಿ ಮಹಿಳೆಯರು ಸಬಲವಾದಂತೆ ಅವರ ಮೇಲಿನ ಹಿಂಸೆಯ ಪ್ರಮಾಣವೂ ಸಹ ಕಡಿಮೆಯಾಗುತ್ತವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಬಿ.ಗೀತಾ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆವತಿಯಿಂದ ಹಮ್ಮಿಕೊಳ್ಳಲಾದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಅನುಷ್ಠಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರದ ಬಗ್ಗೆ 2 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಕೌಟುಂಬಿಕ ಹಿಂಸೆಗೆ ಒಳಗಾದ ಮಹಿಳೆ ಐಪಿಸಿ ಕಾಯ್ದೆಯಡಿ ದೂರು ದಾಖಲಿಸಿದರೆ ಅವರನ್ನು ಕುಟುಂಬದಿಂದ ಹೊರ ಇರುವಂತೆ ತಿಳಿಸಲಾಗುತ್ತಿತ್ತು. ಆದರೆ ಕೌಟುಂಬಿಕ ಹಿಂಸೆಯಿಂದ ಮಹಿಳೆಯ ಸಂರಕ್ಷಣಾ ಕಾಯ್ದೆಯಲ್ಲಿ ದೂರುದಾರ ಮಹಿಳೆ ಅದೇ ಕುಟುಂಬದೊಂದಿಗೆ ವಾಸವಿದ್ದು ರಕ್ಷಣೆ ಕೋರಬಹುದು. ಮನೆಯ ಇತರೆ ಸದಸ್ಯರು ಮಹಿಳೆಗೆ ಹಿಂಸೆ ನೀಡದಂತೆ ಕಾಯ್ದೆಯ ಅನುಸಾರ ನಿಯಂತ್ರಿಸಲು ಅವಕಾಶವಿದೆ. ಬೇರೆಲ್ಲಾ ಕಾನೂನುಗಳಲ್ಲಿ ಇರುವ ಅಧಿಕಾರವನ್ನು ಮಹಿಳೆಯರ ಸಂರಕ್ಷಣಾ ಕಾಯ್ದೆಯಲ್ಲಿ ಒಗ್ಗೂಡಿಸಿ ನ್ಯಾಯಾಧೀಶರಿಗೆ ನೀಡಲಾಗಿದೆ. ಇದರಿಂದಾಗಿ ನ್ಯಾಯಾಧೀಶರು ಯುಕ್ತವಾಗಿ ನೊಂದವರಿಗೆ ನ್ಯಾಯ ನೀಡಬಹುದು. ಮಹಿಳೆಯರ ಮೇಲಿನ ದೈಹಿಕ ಹಲ್ಲೆ, ನಿಂದನೆ, ಮಾನಸಿಕ, ಭಾವನಾತ್ಮಕ ಹಾಗೂ ಲೈಂಗಿಕ ಹಿಂಸೆಗಳು ಕೌಟುಂಬಿಕ ಹಿಂಸೆಗಳ ಪರಿಧಿಗೆ ಬರುತ್ತವೆ ಎಂದರು.
2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಾಗೂ ಬಾಲನ್ಯಾಯ ಮಂಡಳಿ ಅಧ್ಯಕ್ಷೆ ಉಜ್ವಲ ವೀರಣ್ಣ ಸಿದ್ದಣ್ಣನವರ್ ಮಾತನಾಡಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯ ಅನುಷ್ಠಾನದಲ್ಲಿ ಸಂರಕ್ಷಣಾಧಿಕಾರಿಗಳು ನೊಂದ ಮಹಿಳೆಯರನ್ನು ಅನುಕಂಪದಿಂದ ನೋಡಬೇಕು. ಪ್ರತಿಯೊಂದು ಪ್ರಕರಣದಲ್ಲೂ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳಬೇಕು. ಕೌಟುಂಬಿಕ ಹಿಂಸೆ ಹೆಚ್ಚಾಗಲು ಸಮಾಜದ ಮನಸ್ಥಿತಿಯೇ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ ಮಾತನಾಡಿ, ಕಳೆದ ಮೂರು ವರ್ಷದಲ್ಲಿ ಸ್ವ ಸಹಾಯ ಸಂಘದ ಸದಸ್ಯರಿಗೆ ಜಿಲ್ಲೆಯಲ್ಲಿ ರು.60 ಕೋಟಿ ಅನುದಾನವನ್ನು ಸಮುದಾಯ ಬಂಡವಾಳ ನಿಧಿಯಾಗಿ ನೀಡಲಾಗಿದೆ. ಈ ಸಮುದಾಯ ಬಂಡವಾಳ ನಿಧಿಯು 132 ಕೋಟಿ ವಹಿವಾಟು ಆಗಿದೆ. ನಮ್ಮ ಸಂಘದ ಸದಸ್ಯರು ಗಟ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಅನೇಕ ಉತ್ಪನ್ನಗಳನ್ನು ತಯಾರು ಮಾಡಿ, ಹೆಚ್ಚಿನ ಮನ್ನಣೆ ಗಳಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರಸ್ವತಿ ಕಾನೂನು ಕಾಲೇಜು ಪ್ರಾಂಶುಪಾಲೆ ಸುಧಾದೇವಿ,ಬಾಲನ್ಯಾಯ ಮಂಡಳಿ ಸದಸ್ಯೆ ಸುಮನ ಎಸ್.ಅಂಗಡಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಜಿಲ್ಲಾ ನಿರೂಪಣಾಧಿಕಾರಿ ಎಸ್.ವಿಜಯ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎನ್.ಪವಿತ್ರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ ಸೇರಿದಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಕೀಲರು ಹಾಗೂ ಕಾನೂನು ಪದವಿ ವಿದ್ಯಾರ್ಥಿಗಳು ಇದ್ದರು.