ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ದಸರಾ ಮುಸ್ಲಿಮರ ಹಬ್ಬವಲ್ಲ, ಅವರ ಧರ್ಮದಲ್ಲಿ ಮೂರ್ತಿ ಪೂಜೆಗೆ ನಿಷೇಧವಿದೆ. ಬಾನು ಮುಷ್ತಾಕ್ ಪೂಜೆ ಮಾಡಿದರೆ ಅವರ ಧರ್ಮದವರೇ ವಿರೋಧಿಸುತ್ತಾರೆ. ಅವರನ್ನು ಧರ್ಮದಿಂದ ಹೊರಹಾಕಿದ್ರೆ ಏನು ಮಾಡ್ತಿರಾ? ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದರು.ನಗರದಲ್ಲಿ ಸೋಮವಾರ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ದಸರಾ ಹಬ್ಬಕ್ಕೆ ಚಾಲನೆ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಚಾಮುಂಡೇಶ್ವರಿಗೆ ಅವರಿಂದ ಯಾಕೆ ಪೂಜೆ ಮಾಡಿಸಬೇಕು? ಹಿಂದೂಗಳನ್ನು ವಿರೋಧ ಮಾಡೋರು ಚಾಮುಂಡೇಶ್ವರಿ ಪೂಜೆ ಯಾಕೆ ಮಾಡಬೇಕು, ಯಾಕೆ ನಮ್ಮ ಹಿಂದೂ ಧರ್ಮದಲ್ಲಿ ಯಾರು ಇಲ್ವಾ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಸರ್ಕಾರ ಹಿಂದೂ ಧರ್ಮಕ್ಕೆ ಕಳಂಕ ತರುತ್ತಿದೆ. ಸಿದ್ದರಾಮಯ್ಯ ಅವರಿಗೆ ಟಿಪ್ಪು ಮನಸ್ಥತಿ ಇದೆ. ಹಾಗಾಗಿ ಮುಸ್ಲಿಮರನ್ನು ಆಯ್ಕೆ ಮಾಡಿದ್ದಾರೆ ಎಂದರು.ಇವರಿಗೆ ಸಾಬರು ಬಿಟ್ಟರೆ ಯಾರೂ ಸಿಗೋದಿಲ್ವಾ; ಅರವಿಂದ ಬೆಲ್ಲದ: "ಇವರಿಗೆ ಸಾಬರು ಬಿಟ್ಟರೆ ಯಾರೂ ಸಿಗೋದಿಲ್ವಾ? ಸಾಬರ ಉರುಸಿಗೆ ಅವರನ್ನು ಕರೆದುಕೊಂಡು ಹೋಗಲಿ, ದಸರಾ ಹಬ್ಬಕ್ಕೆ ಯಾಕೆ ಬಾನು ಮುಷ್ತಾಕ್ ಅವರನ್ನು ಕರೆಯಬೇಕು? ಎಂದು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಖಾರವಾಗಿ ಪ್ರಶ್ನಿಸಿದರು.ಹೊಸಪೇಟೆ ನಗರದ ಟಿಬಿ ಡ್ಯಾಂ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾನು ಮುಷ್ತಾಕ್ ಮುಸ್ಲಿಂ ಧರ್ಮದವರು. ಅವರಿಗೆ ಹಿಂದೂ ಧರ್ಮದಲ್ಲಿ ನಂಬಿಕೆ ಇರುವುದಿಲ್ಲ, ದಸರಾ ಉದ್ಘಾಟಿಸಿ, ಚಾಮುಂಡೇಶ್ವರಿಗೆ ಪೂಜೆ ಮಾಡಬೇಕು. ಅವರು ಪೂಜೆ ಮಾಡಲು ಒಪ್ಪಿಕೊಂಡರೆ ವಿಚಾರ ಮಾಡಬಹುದು, ಹಿಂದೂ ಧರ್ಮದಲ್ಲಿ ನಂಬಿಕೆ ಇದೆ ಎಂದಾಗುತ್ತದೆ ಎಂದರು.ಹಿಂದೂಗಳ ಭಾವನೆಗೆ ಲಕ್ಷ್ಯ ಕೊಡುವುದಿಲ್ಲ, ಮುಸ್ಲಿಮರಿಗೆ ಮಾತ್ರ ಸ್ಪಂದನೆ ಮಾಡುತ್ತೇವೆ. ಹಿಂದೂಗಳಿಗೆ ಸ್ಪಂದನೆ ಮಾಡುವುದಿಲ್ಲ ಎಂದು ಹೇಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾನು ಮುಸ್ತಾಕ್ ಅವರನ್ನು ದಸರಾ ಹಬ್ಬ ಉದ್ಘಾಟನೆಗೆ ಕರೆದಿದ್ದಾರೆ. ಸಿದ್ದರಾಮಯ್ಯ ಹಿಂದೂ ಅಂದರೆ ಉಲ್ಟಾ ಯಾಕೆ ಕೆಲಸ ಮಾಡಬೇಕು, ಹಿಂದೂ ಭಾವನೆಗಳ ಕೆರಳಿಸುವ ಕೆಲಸ ಯಾಕೆ ಮಾಡಬೇಕು? ಮುಸ್ಲಿಂ, ಕ್ರಿಶ್ಚಿಯನ್ ರನ್ನ ಓಲೈಸುವ ರಾಜಕಾರಣ ಯಾಕೆ ಮಾಡುತ್ತಾರೆ? ಜಾತ್ಯತೀತ ರಾಷ್ಟ್ರವಾದರೆ ಹಿಂದೂಗಳ ಪೂಜೆಗೆ ಮುಸ್ಲಿಮರು ಯಾಕೆ ಬರಬೇಕು? ಎಂದು ಪ್ರಶ್ನಿಸಿದರು.ಆರೆಸ್ಸೆಸ್ ರಾಷ್ಟ್ರೀಯ ವಿಚಾರಧಾರೆಯ ಸಂಸ್ಥೆ ಆಗಿದೆ. ಅದೊಂದು ಪಾರ್ಟಿಯ ಸಂಸ್ಥೆಯಲ್ಲ, ನಾನೂ ಶಾಖೆಗೆ ಹೋಗುತ್ತಿದ್ದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿ ದೇಶಭಕ್ತಿ ವಿಚಾರಗಳ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದರೆ, ಅಲ್ಲಿಂದ ಹೊರಗೆ ಹೋಗಬೇಕಾದ ಪರಿಸ್ಥಿತಿ ಇದೆ. ಅಲ್ಲಿ ದೇಶ ವಿರೋಧಿ, ನೆಗೆಟಿವ್ ಶಕ್ತಿಗಳ ಬಗ್ಗೆ ಮಾತನಾಡಬೇಕು ಎಂದು ವ್ಯಂಗ್ಯವಾಡಿದರು.ನಾನು ಬಹಳ ದಿನಗಳ ಹಿಂದೆಯೇ ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದ್ದೆ, ಇವತ್ತು ಆ ಷಡ್ಯಂತ್ರ ಹೊರಬಂದಿದೆ. ಯಾರೋ ಒಬ್ಬನು ನಾನು ಮರ್ಡರ್ ಮಾಡಿದ್ದೇನೆ ಎಂದು ಬಂದಿದ್ದಾನೆ. ಅವನನ್ನು ಅರೆಸ್ಟ್ ಮಾಡುವುದಿಲ್ಲ, ಅವನು ಹೇಳಿದಂಗೆ ಕೇಳುತ್ತಾ ಹೋದರೆ ನಿಮ್ಮ ಉದ್ದೇಶ ಏನು? ನಾನು ನೂರಾರು ಶವ ಹೂಳಿದ್ದೇನೆ ಎಂದರೆ ಅವ ದೊಡ್ಡ ಸೈಕೊ, ದೊಡ್ಡ ಮರ್ಡರ್‌ನಲ್ಲಿ ಸಾತ್ ನೀಡಿದವನು, ಮೊದಲು ಅವನನ್ನು ಅರೆಸ್ಟ್ ಮಾಡಬೇಕಿತ್ತು. ಸರ್ಕಾರ ಶವ ತೆಗೆಯುವ ನಾಟಕ ನಡೆಸಿತು ಎಂದರು.
ಹಿಂದೂಗಳ ದೇವಸ್ಥಾನ, ಅದನ್ನು ನಡೆಸುವವರ ಮೇಲೆ ಶ್ರದ್ಧೆ ಕಡಿಮೆ ಆಗಬೇಕು. ಅಂದಾಗ ಮಾತ್ರ ಮತಾಂತರ ನಡೆಸಲು ಸಾಧ್ಯವಾಗುತ್ತದೆ. ಧರ್ಮಸ್ಥಳದ ಷಡ್ಯಂತ್ರದ ಹಿಂದಿನ ಶಕ್ತಿನೇ ಸಿದ್ದರಾಮಯ್ಯ, ಶಶಿಕಾಂತ್ ಸೆಂಥಿಲ್ ಒಬ್ಬ ದೊಡ್ಡ ಲೆಫ್ಟಿಸ್ಟ್, ಆತ ದೇಶ ವಿರೋಧಿ, ನಮ್ಮ ವ್ಯವಸ್ಥೆ ವಿರೋಧಿಸುವ ವ್ಯಕ್ತಿ ಆಗಿದ್ದು, ಹಿಂದೂ ಧಾರ್ಮಿಕ ಕ್ಷೇತ್ರಗಳ ಬಗ್ಗೆ ತಮ್ಮ ಭಾಷಣದಲ್ಲಿ ಮಾತನಾಡಿದ್ದಾರೆ. ಇವರಿಗೆ ಏನು ಅಧಿಕಾರ ಇದೆ? ಆರೆಸ್ಸೆಸ್‌ನಲ್ಲಿ ಎರಡು ಗುಂಪುಗಳಿವೆ ಎಂಬುದನ್ನು ಬಿಂಬಿಸಲು ಕಾಂಗ್ರೆಸ್ ನವರು ಹೊರಟಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ಪ್ರಭಾಕರ್ ಕಲ್ಲಡ್ಕ ಭಟ್, ಬಿ.ಎಲ್. ಸಂತೋಷ್ ಅವರ ಪಾತ್ರ ಇಲ್ಲ, ಆರೆಸ್ಸೆಸ್‌ನಲ್ಲಿ ಎರಡು ಗುಂಪುಗಳಿಲ್ಲ ಎಂದು ಬೆಲ್ಲದ ಸ್ಪಷ್ಟಪಡಿಸಿದರು.ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ಅವರ ಬೆಂಬಲ ಇದೆ. ಆರೆಸ್ಸೆಸ್‌ನವರ ಬೆಂಬಲ ಇದೆ ಎಂದು ಹವಾ ಬಿಡಲು ಹೊರಟಿದ್ದಾರೆ. ನಮ್ಮ ಮನಸ್ಸನ್ನು ಕಲುಷಿತ ಮಾಡುವುದು ಇವರ ಉದ್ದೇಶವಾಗಿದೆ. ಗಿರೀಶ್ ಮಟ್ಟಣ್ಣನವರ್ ಆರೆಸ್ಸೆಸ್ ಹುಡುಗ ಅಲ್ಲ, ಧಾರವಾಡದ ಹುಡುಗ ಎಂಬುದು ನಿಜ. ಗಿರೀಶ್ ಕಾರ್ನಾಡ್ ಕೂಡ ಧಾರವಾಡದವರು. ಆದರೆ, ಮಹಾನ್ ಹಿಂದೂ ವಿರೋಧಿ ಆಗಿದ್ದರು ಎಂದು ಸ್ಮರಿಸಿದರು.