ಸಹಕಾರ ಸಂಘ ವಸೂಲಿಗೆ ಸೀಮಿತವಾದರೆ ಅಭಿವೃದ್ಧಿ ಕುಂಠಿತ: ಲೋಕಪ್ಪಗೌಡ

| Published : Sep 10 2024, 01:31 AM IST

ಸಹಕಾರ ಸಂಘ ವಸೂಲಿಗೆ ಸೀಮಿತವಾದರೆ ಅಭಿವೃದ್ಧಿ ಕುಂಠಿತ: ಲೋಕಪ್ಪಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಸಹಕಾರ ಸಂಘಗಳು ಎಂದರೆ ಕೇವಲ ತಮ್ಮ ವ್ಯಾಪ್ತಿಯ ರೈತರಿಗೆ ಬೆಳೆ ಸಾಲ ನೀಡುವುದು ಮತ್ತು ವಸೂಲಿ ಮಾಡುವುದು ಎನ್ನುವ ಮಟ್ಟಕ್ಕೆ ಸೀಮಿತವಾಗಿದ್ದರೆ ಅಭಿವೃದ್ಧಿ ಅಸಾಧ್ಯ ಎಂದು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಿ.ಸಿ. ಲೋಕಪ್ಪ ಗೌಡ ಹೇಳಿದರು.

ಜಿಲ್ಲಾ ಸಹಕಾರ ಯೂನಿಯನ್‌ನಲ್ಲಿ ಸಂಘದ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಹಕರಿಗೆ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಹಕಾರ ಸಂಘಗಳು ಎಂದರೆ ಕೇವಲ ತಮ್ಮ ವ್ಯಾಪ್ತಿಯ ರೈತರಿಗೆ ಬೆಳೆ ಸಾಲ ನೀಡುವುದು ಮತ್ತು ವಸೂಲಿ ಮಾಡುವುದು ಎನ್ನುವ ಮಟ್ಟಕ್ಕೆ ಸೀಮಿತವಾಗಿದ್ದರೆ ಅಭಿವೃದ್ಧಿ ಅಸಾಧ್ಯ ಎಂದು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಿ.ಸಿ. ಲೋಕಪ್ಪ ಗೌಡ ಹೇಳಿದರು.ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ಧ ಸಹಕಾರ ಸಂಘದ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಕರಿಗೆ ಒಂದು ದಿನದ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಸಹಕಾರ ಎನ್ನುವುದು ರಾಜ್ಯ ವಿಷಯವಾಗಿ ರಾಜ್ಯಕ್ಕೆ ಸೀಮಿತವಾಗಿದ್ದು ಸಹಕಾರ ಕಾಯ್ದೆ ತಿದ್ದುಪಡಿಗಳು ಆಯಾ ರಾಜ್ಯ ಗಳಲ್ಲಿಯೇ ಆಗಬೇಕಾಗಿದ್ದ ಪರಿಸ್ಥಿತಿ ಇದೀಗ ಬದಲಾವಣೆಯಾಗಿ ಕೇಂದ್ರ ಸರ್ಕಾರದ ಸಹಕಾರ ಮಂತ್ರಿಗಳು ಸಹಕಾರ ಕಾಯ್ದೆ ಕಾನೂನಿಗೆ ಬದಲಾವಣೆ, ನಿರ್ದೇಶನ ತರುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ತಿಳಿಸಿದರು.ಕೇಂದ್ರ ಸಹಕಾರ ಮಂತ್ರಿಗಳು ಸಾರ್ವಜನಿಕರಿಗೆ ಸಹಕಾರ ಸಂಘಗಳ ಮೂಲಕ ಎಲ್ಲಾ ಸೇವೆಗಳೂ ದೊರೆಯು ವಂತಾಗ ಬೇಕು. ಈ ನಿಟ್ಟಿನಲ್ಲಿ ಸಹಕಾರ ಸಂಘಗಳನ್ನು ಸಾಮಾನ್ಯ ಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸಲು ಮುಂದಾಗಿದ್ದಾರೆ ಎಂದು ಹೇಳಿದರು.ಇಫ್ಕೋ, ಕ್ರಿಬ್ಕೋ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆದು ಉತ್ತಮ ಗೋದಾಮು ವ್ಯವಸ್ಥೆ ಹೊಂದಿದ ಸಹಕಾರ ಸಂಘಗಳ ಗೊಬ್ಬರದ ಡೀಲರ್‌ಶಿಪ್ ಪಡೆಯಲು ಪ್ರಯತ್ನಪಡಬೇಕು. ಇದರಿಂದ ಸಹಕಾರ ಸಂಘಗಳ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದರು.ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪ ನಿರ್ದೇಶಕಿ ಎಸ್.ಎಂ.ಶಶಿರೇಖಾ ಮಾತನಾಡಿ, ಸಹಕಾರ ಕ್ಷೇತ್ರ ವಿಭಿನ್ನ ಮತ್ತು ವಿಶಿಷ್ಟವಾದದ್ದು, ಈ ಕ್ಷೇತ್ರದಲ್ಲಿ ಸೇವಾ ಮನೋಭಾವ ಹೊಂದಿ ಕಾರ್ಯ ನಿರ್ವಹಿಸಬೇಕು. ಎಲ್ಲಾ ಸಹಕಾರ ಸಂಘಗಳು ಕಾಲಕಲಕ್ಕೆ ಲೆಕ್ಕ ಪರಿಶೋಧನೆ ಮಾಡಿಸಿ ವರದಿ ಹಾಗೂ ವಾರ್ಷಿಕ ಮಹಾ ಸಭೆ ನಡೆದ ನಂತರ ನಿಗದಿತ ಅವಧಿಯೊಳಗೆ ಸಭಾ ನಡವಳಿಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಪರಮೇಶ್ವರಪ್ಪ ಮಾತನಾಡಿ, ಯೂನಿಯನ್ ಮುಖಾಂತರ ನಡೆಸುವ ಎಲ್ಲಾ ತರಬೇತಿ ಕಾರ್ಯಾಗಾರಗಳಲ್ಲಿ ಸರಿಯಾದ ಸಮಯಕ್ಕೆ ಹಾಜರಾಗಿ ಸದುಪಯೋಗ ಪಡಿಸಿಕೊಳ್ಳಲು ಸೂಚಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಡಾ. ಜಿ.ಎಸ್. ಮಹಾಬಲ ಮಾತನಾಡಿ, ಸಹಕಾರ ಸಂಘಗಳ ವ್ಯವಹಾರ ಹಾಗೂ ಕಾಯ್ದೆ ಕಾನೂನುಗಳಲ್ಲಿ ಆದ ಸಾಕಷ್ಟು ಬದಲಾವಣೆಗಳ ಬಗ್ಗೆ ತಿಳುವಳಿಕೆ ನೀಡುವುದೇ ಜಿಲ್ಲಾ ಸಹಕಾರ ಯೂನಿಯನ್ನಿನ ಉದ್ದೇಶ. ಸಹಕಾರ ಸಂಘಗಳ ಸದಸ್ಯರಿಗೆ ಅನೇಕ ರೀತಿ ಸವಲತ್ತುಗಳನ್ನು ನೀಡಬೇಕಾದರೆ ಬಹು ಸೇವಾ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸಬೇಕು ಇದರಿಂದ ಸಂಘಗಳ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜಿ.ಕೆ.ದಿವಾಕರ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಕೆ.ಯಶಸ್ಸು, ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಎಚ್.ಎಸ್.ನಾಗರಾಜಯ್ಯ, ಸಹಕಾರ ಸಂಘಗಳ ಸಹಾಯಕ ನಿಬಂಧಕ ತ್ರಿವೇಣಿರಾವ್, ಮುಖಂಡರಾದ ಬಿ.ಟಿ.ರಾಮಚಂದ್ರಪ್ಪ, ಸುಧಾ, ಚಂಪಾ ಉಪಸ್ಥಿತರಿದ್ದರು. 8 ಕೆಸಿಕೆಎಂ 3ಚಿಕ್ಕಮಗಳೂರಿನ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆದ ಒಂದು ದಿನದ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರವನ್ನು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಿ.ಸಿ. ಲೋಕಪ್ಪಗೌಡ ಉದ್ಘಾಟಿಸಿದರು. ಎಸ್.ಎಂ.ಶಶಿರೇಖಾ, ಜಿ.ಕೆ.ದಿವಾಕರ್, ಎಚ್.ಕೆ.ಯಶಸ್ಸು ಇದ್ದರು.