ಸಾರಾಂಶ
ಶ್ರೀಗಳಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಏನಾದರೂ ವೈಯಕ್ತಿಕ ಸಮಸ್ಯೆ ಇದ್ದರೆ ಹಾಗೂ ಸಮಾಜಕ್ಕೆ ಅನ್ಯಾಯವಾಗಿದ್ದರೆ, ಆ ಕುರಿತು ಹಿರಿಯರ ಜತೆಗೂಡಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಯಾವುದೇ ಸಮಾಜಕ್ಕೆ ಅನ್ಯಾಯವಾಗಬಾರದು ಎಂದು ವರೂರು ತೀರ್ಥಕ್ಷೇತ್ರದ ಗುಣಧರನಂದಿ ಮಹಾರಾಜರು ಹೇಳಿದ್ದಾರೆ.
ಹುಬ್ಬಳ್ಳಿ: ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗಳು ರಾಜಕೀಯ ಪ್ರವೇಶ ಮಾಡಿದ ಸಮಯ ಮತ್ತು ಜಾಗ ಸರಿಯಿಲ್ಲ. ಇದು ಶಿರಹಟ್ಟಿಯ ಫಕೀರೇಶ್ವರ ಮಹಾಸಂಸ್ಥಾನದ ಅಸ್ತಿತ್ವದ ಪ್ರಶ್ನೆಯಾಗಿದೆ. ಈ ಚುನಾವಣೆಯಲ್ಲಿ ಶ್ರೀಗಳು ಸೋತಲ್ಲಿ ಶ್ರೀಮಠದ ಗೌರವಕ್ಕೆ ಧಕ್ಕೆಯಾಗಲಿದೆ ಎಂದು ವರೂರು ತೀರ್ಥಕ್ಷೇತ್ರದ ಗುಣಧರನಂದಿ ಮಹಾರಾಜರು ಕಿವಿಮಾತು ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡ ಲೋಕಸಭಾ ಕ್ಷೇತ್ರವು 546 ಹಳ್ಳಿಗಳನ್ನು ಒಳಗೊಂಡಿರುವ ದೊಡ್ಡ ಕ್ಷೇತ್ರವಾಗಿದೆ. ಅವರು ಅತಿ ಕಡಿಮೆ ಸಮಯದಲ್ಲಿ ಎಲ್ಲ ಹಳ್ಳಿಗಳನ್ನು ಸಂಪರ್ಕಿಸಲು ಅಸಾಧ್ಯ. ಇದು ಅವರಿಗೆ ಕಷ್ಟವಾಗಲಿದೆ. ಫಕೀರ ದಿಂಗಾಲೇಶ್ವರ ಶ್ರೀಗಳು ದೊಡ್ಡ ಧರ್ಮಗುರುಗಳು. ಅಂಥವರು ಏಕಾಏಕಿ ರಾಜಕಾರಣಕ್ಕೆ ಮುನ್ನುಗ್ಗುವುದು ಬೇಡ ಎಂಬುದು ನಮ್ಮ ಅನಿಸಿಕೆ ಎಂದರು.ಚರ್ಚಿಸಿ ಬಗೆಹರಿಸಿಕೊಳ್ಳಲಿ: ಶ್ರೀಗಳಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಏನಾದರೂ ವೈಯಕ್ತಿಕ ಸಮಸ್ಯೆ ಇದ್ದರೆ ಹಾಗೂ ಸಮಾಜಕ್ಕೆ ಅನ್ಯಾಯವಾಗಿದ್ದರೆ, ಆ ಕುರಿತು ಹಿರಿಯರ ಜತೆಗೂಡಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಯಾವುದೇ ಸಮಾಜಕ್ಕೆ ಅನ್ಯಾಯವಾಗಬಾರದು ಎಂದರು.
ಫಕೀರ ದಿಂಗಾಲೇಶ್ವರ ಶ್ರೀಗಳು ನನ್ನನ್ನು ಸಂಪರ್ಕಿಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಅವರಿಗೆ ರಾಜಕೀಯ ಪ್ರವೇಶಿಸಲು ಸಮಯ ಮತ್ತು ಜಾಗ ಸರಿಯಿಲ್ಲ ಎಂದು ಹೇಳಿದ್ದೇನೆ. ಆಗ ಅವರು ಸೋಲು-ಗೆಲುವು ಲೆಕ್ಕಿಸುವುದಿಲ್ಲ. ಸ್ಪರ್ಧಿಸಲು ನಿರ್ಧರಿಸಿರುವುದಾಗಿ ತಿಳಿಸಿದರು. ಚುನಾವಣೆಗೆ ಸ್ಪರ್ಧಿಸುವುದು, ಬಿಡುವುದು ಅವರ ವೈಯಕ್ತಿಕ ವಿಷಯವಾಗಿದೆ ಎಂದರು.ಯಾವ ಪಕ್ಷಕ್ಕೆ ಬೆಂಬಲ ನೀಡುತ್ತೀರಿ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗುಣಧರನಂದಿ ಮಹಾರಾಜರು, ಭಾರತ ಸದೃಢವಾಗಿರಬೇಕು. ರಾಷ್ಟ್ರದ ಸಮಗ್ರ ಅಭಿವೃದ್ಧಿ ಹಾಗೂ ಸುರಕ್ಷತೆಗೆ ಒತ್ತು ನೀಡುವ ಪಕ್ಷಕ್ಕೆ ಸಮಾಜ ಬಾಂಧವರು ಹಾಗೂ ನಾನು ಬೆಂಬಲ ನೀಡುತ್ತೇನೆ ಎಂದರು.