ಸಾರಾಂಶ
ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾದರೂ ಮಂಡ್ಯ ಜಿಲ್ಲೆಗೆ ಒಡೆಯರಾಗುವುದಿಲ್ಲ ಎಂದು ಶಾಸಕ ಕದಲೂರು ಉದಯ್ ಟೀಕಿಸಿದರು.
ಮದ್ದೂರು : ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾದರೂ ಮಂಡ್ಯ ಜಿಲ್ಲೆಗೆ ಒಡೆಯರಾಗುವುದಿಲ್ಲ ಎಂದು ಶಾಸಕ ಕದಲೂರು ಉದಯ್ ಟೀಕಿಸಿದರು.
ಪಟ್ಟಣದ ಶಿವಪುರ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ, ರಾಜಕಾರಣದಲ್ಲಿ ಸೋಲು - ಗೆಲುವು ಸಾಮಾನ್ಯ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಸೋಲಿಗೆ ಕಾರ್ಯಕರ್ತರು ಮತ್ತು ಮುಖಂಡರು ಎದೆಗುಂದಬಾರದು ಎಂದು ಧೈರ್ಯ ತುಂಬಿದರು. ಚುನಾವಣೆಗಳಲ್ಲಿ ಹಿರಿಯರಾದ ಎಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ಜಿ.ಮಾದೇಗೌಡ, ಅಂಬರೀಶ್, ಎಂ.ಎಸ್.ಸಿದ್ದರಾಜು ಮತ್ತಿತರ ಧುರೀಣರು ಸೋತಿದ್ದ ಉದಾಹರಣೆ ಸಾಕಷ್ಟಿದೆ. ಮುಂದಿನ ದಿನಗಳಲ್ಲಿ ಈ ಸೋಲನ್ನು ಸವಾಲಾಗಿ ಸ್ವೀಕರಿಸಿ ಮತ್ತೆ ಗೆಲುವಿಗೆ ಮುನ್ನುಡಿ ಬರೆಯೋಣ ಎಂದು ಹೇಳಿದರು.
ದೇಶದ ಅತ್ಯುತ್ತಮ ಸಂಸದೀಯ ಪಟುಗಳಲ್ಲಿ ಒಬ್ಬರಾಗಿದ್ದ ರಾಮನಗರ ಜಿಲ್ಲೆಯ ಡಿ.ಕೆ.ಸುರೇಶ್ ರವರೇ ಪ್ರಸಕ್ತ ಚುನಾವಣೆ ವೇಳೆ ಸೋತಿದ್ದಾರೆ. ಇದೇ ರೀತಿ ಫಲಿತಾಂಶ ಹಳೆ ಮೈಸೂರು ಭಾಗದ ಕೆಲವೆಡೆ ಬಂದಿದೆ ಎಂದರು. ಮುಂದಿನ 4 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಲಿದೆ. ನಾನು ಕೂಡ ಶಾಸಕನಾಗಿರುತ್ತೇನೆ. ತಾಲೂಕಿನ ಅಭಿವೃದ್ಧಿ ಸೇರಿದಂತೆ ಪಕ್ಷದ ಕಾರ್ಯಕರ್ತರ ಹಿತ ಕಾಯುತ್ತೇನೆ. ಯಾವುದೇ ಆತಂಕವಿಲ್ಲದೆ ಪಕ್ಷ ಸಂಘಟನೆಗೆ ಇಂದಿನಿಂದಲೇ ಪುನರ್ ಕಾರ್ಯ ಆರಂಭಿಸುವಂತೆ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬಿದರು.
ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಆರ್.ಮೋಹನ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಜಿಪಂ ಮಾಜಿ ಸದಸ್ಯ ಅಣ್ಣೂರು ರಾಜೀವ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಡಿ. ಮಹಾಲಿಂಗಯ್ಯ, ಪುರಸಭೆ ಮಾಜಿ ಉಪಾಧ್ಯಕ್ಷ ಮನ್ಸೂರ್ ಖಾನ್ ಹಾಗೂ ಮುಖಂಡ ಬಿ.ಬಸವರಾಜು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಶಿವಲಿಂಗೇಗೌಡ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಪಿ.ರಾಘವ, ನಿರ್ದೇಶಕ ಚಂದ್ರನಾಯಕ, ಜಿಪಂ ಮಾಜಿ ಅಧ್ಯಕ್ಷ ಕಂಠಿ ಸುರೇಶ್, ಮುಖಂಡರಾದ ಬಿ.ವಿ.ಶಂಕರೇಗೌಡ, ಇಮ್ತಿಯಾಜ್ ಉಲ್ಲಾಖಾನ್, ಸಿ.ನಾಗೇಗೌಡ, ಸುರೇಶ್, ಪುರಸಭೆ ಸದಸ್ಯ ಸಚಿನ್ ಇತರರು ಇದ್ದರು.