ರಾಣಿಬೆನ್ನೂರು: ಸರಕಾರ ಕಾವೇರಿ ತಂತ್ರಾಂಶದ ಮೂಲಕ ಪೇಪರ್‌ಲೆಸ್ ಡಿಜಿಟಲ್ ನೋಂದಣಿ ಜಾರಿಗೆ ತಂದಿದ್ದು, ಇದರಿಂದ ಸಾರ್ವಜನಿಕರ ಆಸ್ತಿ ದಾಖಲಾತಿಗೆ ಭದ್ರತೆ ಇಲ್ಲದಂತಾಗಿದೆ. ಇದನ್ನು ಖಂಡಿಸಿ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ(ದಸ್ತು)ಪತ್ರ ಬರಹಗಾರರ ಒಕ್ಕೂಟದಿಂದ ಮೇ 25ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟದ ಉಪಾಧ್ಯಕ್ಷ ನವೀನಕುಮಾರ ಎನ್. ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ತಿಂಗಳು 30ರಂದು ಚಾಮರಾಜನಗರ ಜಿಲ್ಲೆಯಲ್ಲಿ ಜಾರಿಗೆ ತಂದಿರುವ ಈ ಯೋಜನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಆಸ್ತಿ ನೋಂದಣಿ ಆಗಿರುವ ಬಗ್ಗೆ ಯಾವುದೇ ಬೌತಿಕ ಪತ್ರಗಳನ್ನು ಖರೀದಿದಾರರಿಗೆ ನೀಡದೇ ಇರುವುದರಿಂದ ಹಾಗೂ ಡಿಜಿಟಲ್ ಲಾಕರ್‌ನಲ್ಲಿ ಸೇವ್ ಆಗುವುದರಿಂದ ಆಸ್ತಿ ಖರೀದಿದಾರರಿಗೆ ಯಾವುದೇ ನಿಖರವಾದ ಪತ್ರಗಳು, ದಾಖಲೆಗಳು ಸಿಗುವುದಿಲ್ಲ. ಪತ್ರಗಳು ಸಿಗದೇ ಇರುವುದರಿಂದ ಮುಂದೆ ಅವರ ವಾರಸುದಾರರಿಗೆ ಸಹಾ ಆಸ್ತಿ ಖರೀದಿಸಿರುವ ಬಗ್ಗೆ ಮಾಹಿತಿ ಇರುವುದಿಲ್ಲ ಎಂದರು.ಈ ಪೇಪರಲೆಸ್ ನೋಂದಣಿ ಪ್ರಕ್ರಿಯೆಯಲ್ಲಿ ದಸ್ತಾವೇಜು ತಯಾರಿಸುವವರ ಭೌತಿಕ ರುಜು ಅಥವಾ ಡಿಜಿಟಲ್ ಸಹಿಗೆ ಅವಕಾಶ ಮಾಡಿಕೊಟ್ಟಿರುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಕಾನೂನು ಸಲಹೆಗಾರರು ಇಲ್ಲದಂತೆ ಮಾಡಿರುತ್ತಾರೆ. ಈ ಪೇಪರಲೆಸ್ ನೋಂದಣಿ ಪ್ರಕ್ರಿಯೆ ಸಂಪೂರ್ಣ ಅವೈಜ್ಞಾನಿಕ ರೀತಿಯಲ್ಲಿ ಜಾರಿಗೆ ತಂದಿರುತ್ತಾರೆ. ಈ ಪೇಪರ್‌ಲೆಸ್ ನೋಂದಣಿ ವ್ಯವಸ್ಥೆಯಿಂದ ಭೂ ಮಾಫಿಯಾ ಜನರಿಗೆ ಸರಕಾರವೇ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ ಎಂದರು.ಮೂಲಪತ್ರಗಳು ಖರೀದಿದಾರರಿಗೆ ಸಿಗದೇ ಇರುವುದರಿಂದ ಅವರು, ಅವರ ಸ್ವತ್ತಿನ ಪತ್ರಗಳನ್ನು ಬ್ಯಾಂಕ್‌ನಲ್ಲಿ ಅಡವು ಮಾಡಿ ಸಾಲ ಸೌಲಭ್ಯ ಪಡೆಯಲು ಅನಾನುಕೂಲವಾಗಿರುತ್ತದೆ. ದಾಖಲೆಗಳ ಅಡಮಾನ ಪತ್ರ ಕಲಂನ ಅಸ್ತಿತ್ವಕ್ಕೆ ಪೇಪರಲೆಸ್ ಡಿಜಿಟಲ್ ನೋಂದಣಿ ವ್ಯವಸ್ಥೆಯೂ ವಿರುದ್ಧವಾಗಿದೆ. ಆದ್ದರಿಂದ ಈ ವ್ಯವಸ್ಥೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಒಕ್ಕೂಟದ ಅಧ್ಯಕ್ಷ ಡಿ.ಕೆ. ಸಂಗಮೇಶ ಎಲಿಗಾರ, ಉಪಾಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ, ಜಿ.ಎಂ. ಸುರೇಶಬಾಬು, ಸಹ ಕಾರ್ಯದರ್ಶಿ ಕರಿಬಸಪ್ಪ ಬಳ್ಳಿ, ಈ ಕೃಷ್ಣಮೂರ್ತಿ, ಡಿ.ಆರ್. ಗಿರಿರಾಜು, ಶಿವಪುತ್ರಪ್ಪ ಸಪಗಾಯಿ, ರುಕ್ಮಿಣಿ ಚೆಲುವಾದಿ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.