ಕಾವೇರಿ ಜೀವನದಿಯಾದರೆ, ಶರಾವತಿ ನಾಡಿನ ಶಕ್ತಿನದಿ: ಜಿ.ಟಿ.ಸತ್ಯನಾರಾಯಣ

| Published : Jan 29 2024, 01:30 AM IST

ಕಾವೇರಿ ಜೀವನದಿಯಾದರೆ, ಶರಾವತಿ ನಾಡಿನ ಶಕ್ತಿನದಿ: ಜಿ.ಟಿ.ಸತ್ಯನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ಒಂದೇ ನದಿ ದಂಡೆಯ ಜನರನ್ನು ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಬಲವಂತವಾಗಿ ಒಕ್ಕಲು ಎಬ್ಬಿಸುವುದು ನಾಗರಿಕ ಸರ್ಕಾರದ ಹೆಸರಿನಲ್ಲಿ ನಡೆಸುವುದು ಪ್ರಭುತ್ವ ಪ್ರಾಯೋಜಿತ ಶೋಷಣೆಯಾಗಿದೆ. ಶರಾವತಿ ನದಿ ದಂಡೆಯ ನಾಗರಿಕತೆ ಇಂತಹ ಪ್ರಭುತ್ವಕ್ಕೆ ಪದೇ ಪದೇ ತುತ್ತಾಗುತ್ತಾ ಇದ್ದಾರೆ ಎಂದು ಲೇಖಕ ಸತ್ಯನಾರಾಯಣ ತಿಳಿಸಿದರು.

ಲೇಖಕ ಜಿ.ಟಿ.ಸತ್ಯನಾರಾಯಣ ಪ್ರತಿಪಾದನೆ । ಸುಳ್ಳಳ್ಳಿಯಲ್ಲಿ ಕಳೆಗಟ್ಟಿದ ಸೌಳ್ನಾಡ್ ಹಬ್ಬ। ‘ಬಿಟ್ಟಿ ಬೀರ’ ನಾಟಕ, ಮಲ್ಲಗಂಬ ಪ್ರದರ್ಶನ

ಕನ್ನಡಪ್ರಭ ವಾರ್ತೆ ಬ್ಯಾಕೋಡು ನಾಡು, ನುಡಿ, ಮಲೆನಾಡ ಸೊಬಗಿನ ಉಳಿವಿಗಾಗಿ ಬ್ಯಾಕೋಡು ಸಮೀಪ ಸುಳ್ಳಳ್ಳಿಯಲ್ಲಿ ಶನಿವಾರ ಸಂಜೆ ಜೀವ ಬಳಗದ ವತಿಯಿಂದ ಸೌಳ್ನಾಡ್ ಹಬ್ಬ ಎಂಬ ವಿಶೇಷ ಕಾರ್ಯಕ್ರಮ ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ ಲೇಖಕ ಜಿ.ಟಿ.ಸತ್ಯನಾರಾಯಣ, ಸೌಳ್ನಾಡು ಎಂದರೆ ಕರ್ನಾಟಕ ರಾಜ್ಯದ ಬೆಳಕಿಗಾಗಿ ನಮ್ಮ ಆಸ್ತಿಪಾಸ್ತಿ ಮತ್ತು ನಮ್ಮ ನಾಗರಿಕತೆಯನ್ನು ಮುಳುಗಿಸಿಕೊಂಡು, ನಮ್ಮದಲ್ಲದ ತಪ್ಪಿನಿಂದಾಗಿ ರಾಜ್ಯದ ಅಭ್ಯುದಯಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದವರು ಎಂದರ್ಥ ಎಂದು ಹೇಳಿದರು.ಕಾವೇರಿ ನದಿಯನ್ನು ಜೀವನದಿ ಎಂದು ಕರೆದರೆ ಇಡೀ ರಾಜ್ಯಕ್ಕೆ ಬೆಳಕು ಕೊಡುವ ಶರಾವತಿ ನದಿಯನ್ನು ಶಕ್ತಿನದಿಯೆಂದು ಯಾಕೆ ಕರೆಯಬಾರದು ಎಂದು ಇಲ್ಲಿಯ ಜನರ ಪ್ರಶ್ನೆಯಾಗಿದೆ. ಶರಾವತಿ ನದಿ ದಡದಲ್ಲಿ ವಾಸಿಸುವ ನಾವು ಹಿಂದಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಅನ್ಯಾಯಕ್ಕೆ ಒಳಗಾಗುತ್ತಲೇ ಬಂದಿದ್ದೇವೆ. ಪ್ರಮುಖವಾಗಿ ಅಂಬಾರ ಗುಡ್ಡದ ಹೆಸರಿನಲ್ಲಿ ಜೀವವೈವಿಧ್ಯತೆ ತಾಣ ಎಂದು ರೈತರ ಜಮೀನುಗಳನ್ನು ನುಂಗಿ ಹಾಕಿರುವ ಕಥೆ ಒಂದೆಡೆಯಾದರೆ, ಭಾರತದ ಇತಿಹಾಸದಲ್ಲಿ 56 ವರ್ಷ ಸುದೀರ್ಘವಾಗಿ ಶರಾವತಿ ನದಿ ದಂಡೆಯಲ್ಲಿ ಆಳ್ವಿಕೆ ನಡೆಸಿದ ಕಾಳು ಮೆಣಸಿನ ರಾಣಿ ಚೆನ್ನ ಭೈರಾದೇವಿ. ಇವರು ನಮ್ಮ ಸೌಳ್ನಾಡಿನವರು. ದೇಶಕ್ಕೆ ಇಷ್ಟೆಲ್ಲ ಕೊಡುಗೆ ನೀಡಿದರು ಸಹ ನಮ್ಮ ನಾಗರಿಕತೆಯನ್ನು ಇತಿಹಾಸದ ಪುಟಗಳಲ್ಲಿ ಕಾಣಲು ಇಂದು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಒಂದೇ ನದಿ ದಂಡೆಯ ಜನರನ್ನು ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಬಲವಂತವಾಗಿ ಒಕ್ಕಲು ಎಬ್ಬಿಸುವುದು ನಾಗರಿಕ ಸರ್ಕಾರದ ಹೆಸರಿನಲ್ಲಿ ನಡೆಸುವುದು ಪ್ರಭುತ್ವ ಪ್ರಾಯೋಜಿತ ಶೋಷಣೆಯಾಗಿದೆ. ಶರಾವತಿ ನದಿ ದಂಡೆಯ ನಾಗರಿಕತೆ ಇಂತಹ ಪ್ರಭುತ್ವಕ್ಕೆ ಪದೇ ಪದೇ ತುತ್ತಾಗುತ್ತಾ ಇದ್ದಾರೆ ಎಂದು ತಿಳಿಸಿದರು.ಅಂಬಾರಗುಡ್ಡದ ಖನಿಜ ಸಂಪತ್ತು ಗಣಿ ಗುತ್ತಿಗೆದಾರರು ಕೊಳ್ಳೆ ಹೊಡೆಯಲು ಭೂಮಿ ಅಗೆಯಲು ಬಂದಾಗ ಸರ್ಕಾರ ಪರವಾನಿಗೆ ಕೊಟ್ಟು ಸುಮ್ಮನೆ ಕುಳಿತಿತ್ತು. ಜನ ಹೋರಾಟ ಫಲವಾಗಿ ಉಳಿಸಿದ ಗುಡ್ಡದ ಹೆಸರಿನಲ್ಲಿ ಈಗ ಅರಣ್ಯ ಕಾನೂನು ನಿಯಮ ಬಾಹಿರವಾಗಿ ಜಾರಿಗೆ ತಂದು ಒಕ್ಕಲು ಎಬ್ಬಿಸಲು ಸರ್ಕಾರ ಮುಂದಾಗಿರುವುದು ಸಂತ್ರಸ್ತರ ಬದುಕುವ ಹಕ್ಕನ್ನು ಕಸಿದಿದೆ ಎಂದು ದೂರಿದರು.ಜನಪದ ಸಿರಿವಂತಿಕೆ ಹೊಂದಿದ ದ್ವೀಪದ ಭೂ ಭಾಗ ಅದನ್ನು ವಾಸ್ತವದ ಜಗತ್ತತ್ತು ಎದುರಿಸಲು ಇಂಧನ ಆಗಿಸಿಕೊಂಡಿದೆ. ಜನರ ಬಂಡಾಯದ ಕಥನಗಳೇ ಜಾನಪದ ವಾದವು ಎನ್ನುವ ಮಾತಿಗೆ ಇವರ ಬದುಕು ಅನ್ವರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಸೌಳ್ನಾಡ ಹಬ್ಬ ಆಯೋಜನೆ ಅರ್ಥಪೂರ್ಣವಾದುದು ಎಂದು ವಿವರಿಸಿದರು.

ಸೌಳ್ನಾಡ ಹಬ್ಬವನ್ನು ಸ್ಥಳೀಯ ಸಿಗಂದುರೇಶ್ವರಿ ಶಾಂತಿನಿಕೇತನ ಶಾಲೆಯ ಮಕ್ಕಳು ಸಾಮುಹಿಕವಾಗಿ ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು. ಸೌಲ್ನಾಡು ಹಬ್ದದಲ್ಲಿ ಅಂಟಿಕೆ ಪಿಂಟಿಕೆ, ಬತ್ತ ಕುಟ್ಟುವ ಹಾಡು, ಲಾವಣಿ, ಕುನುಬಿ ನೃತ್ಯ, ಕಾಲುಪೂಜೆ ಹಾಡು, ಯಕ್ಷಗಾನ, ಕೋಲಾಟ, ಬೀಸುಗಲ್ಲಿನ ಹಾಡು, ಜೋಗಿ ಪದ, ಮಕ್ಕಳ ಆಧುನಿಕ ನೃತ್ಯ, ರಸಮಂಜರಿ, ಗಾಡಿಗತನ ಮುಂತಾದ ಕಾರ್ಯಕ್ರಮ ಜತೆಗೆ ಕೊಡಚಾದ್ರಿ ಶಾಲೆಯ ಮಕ್ಕಳು ನಡೆಸಿಕೊಟ್ಟ ಮಲ್ಲಕಂಬ ಏರುವ ಸ್ಪರ್ಧೆ ನಡೆಯಿತು. ಪ್ರಸಾದ್ ಸುಳ್ಳಳ್ಳಿ ನಿರ್ದೇಶನದ ಜೀವಬಳಗ ತಂಡ ಅಭಿನಯಿಸಿದ ‘ಬಿಟ್ಟಿ ಬೀರ’ ನಾಟಕ ಪ್ರದರ್ಶನ ಬೆಳಗಿನ ತನಕವೂ ನಡೆಯಿತು. ಸಾವಿರಕ್ಕೂ ಹೆಚ್ಚು ಜನ ಕೊರೆಯುವ ಚಳಿಯ ನಡುವೆ ಇಡೀ ರಾತ್ರಿ ಕುಳಿತು ಹಬ್ಬದಲ್ಲಿ ಪಾಲ್ಗೊಂಡು ಕಾರ್ಯಕ್ರಮ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.

ಫೋಟೋ ಬ್ಯಾಕೋಡು: 01 ಬ್ಯಾಕೋಡು ಸಮೀಪ ಸುಳ್ಳಳ್ಳಿಯಲ್ಲಿ ನಡೆದ ಸೌಳ್ನಾಡು ಹಬ್ಬದಲ್ಲಿ ಕೊಡಚಾದ್ರಿ ಶಾಲೆಯ ಮಕ್ಕಳಿಂದ ವಿವಿಧ ರೀತಿಯಲ್ಲಿ ಮಲ್ಲಗಂಬ ಪ್ರದರ್ಶನ ಕಣ್ಮನ ಸೆಳೆಯಿತು.