ರೋಣ: ರೋಣ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡದಿದ್ದಲ್ಲಿ ಈ ಭಾಗದ ಎಲ್ಲ ಮಠಾಧೀಶರು ಒಗ್ಗೂಡಿ ಬೆಂಗಳೂರು ವಿಧಾನಸಭೆ ಚಲೋ ನಡೆಸಬೇಕಾಗುತ್ತದೆ ಎಂದು ಅಸೂಟಿ ಮುರುಘರಾಜೇಂದ್ರ ಶಾಂತಿಧಾಮದ ದಿವಾನ ಶರೀಫಗುರು ಮುರುಘರಾಜೇಂದ್ರ ಶಿವಯೋಗಿಗಳು ಎಚ್ಚರಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಜಿ.ಎಸ್.ಪಾಟೀಲರು ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವುದು ಮಾತ್ರವಲ್ಲದೆ ಈ ಭಾಗದ ರೈತರು, ಮಹಿಳೆಯರು, ಶೋಷಿತರ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ನಿರ್ವಹಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ಈ ಭಾಗದ ಕಾರ್ಯಕರ್ತರು ಹಾಗೂ ಸ್ವಾಮೀಜಿಗಳ ಮನಸ್ಸು ನೋಯಿಸುವ ಕೆಲಸ ಮಾಡಿದೆ ಎಂದರು.ಸವಡಿ ಮರುಳಸಿದ್ದೇಶ್ವರ ಮಠದ ಮರುಳಸಿದ್ದೇಶ್ವರ ಸ್ವಾಮೀಜಿ, ಅಬ್ಬಿಗೆರೆ ಯಲ್ಲಾಲಿಂಗೇಶ್ವರ ಮಠದ ಬಸವರಾಜ ದೇವರು, ರೋಣ ಬೂದಿಶ್ವರ ಮಠದ ವಿಶ್ವನಾಥ ಸ್ವಾಮೀಜಿ ಮಾತನಾಡಿದರು. ಇಟಗಿ ಮರುಳಸಿದ್ದೇಶ್ವರ ಪುಣ್ಯಾಶ್ರಮದ ಗದಿಗೆಪ್ಪಜ್ಜ ಸ್ವಾಮೀಜಿ, ಹರ್ಲಾಪುರ ಸದ್ಧರ್ಮ ಪೀಠದ ಶಿವಮುನಿ ಸ್ವಾಮೀಜಿ, ರೋಣ ಹೊರಪೇಟೆ ದರ್ಗಾದ ಹಜರತ್ ಸೈಯದ್ ಸುಲೇಮಾನ್ ಶಾವಲಿ, ಲಕ್ಕುಂಡಿ ಮರುಳ ಸಿದ್ದೇಶ್ವರ ಮಠದ ಹುಚ್ಚಯ್ಯ ಸ್ವಾಮೀಜಿ, ಸವಡಿ ಚಂದ್ರಶೇಖರಯ್ಯ ಸ್ವಾಮೀಜಿ ಮುಂತಾದವರು ಉಪಸ್ಥಿತರಿದ್ದರು.ಮಠಾಧೀಶರು, ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ರೋಣ: ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಶುಕ್ರವಾರ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಮಠಾಧೀಶರ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು.ಸಿದ್ಧಾರೂಢ ಮಠದಿಂದ ಪ್ರಾರಂಭವಾದ ಪ್ರತಿಭಟನಾ ರ್ಯಾಲಿ ಸೂಡಿ ವೃತ್ತ, ಮುಲ್ಲನಬಾವಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.20ರಂದು ಜಿ.ಎಸ್. ಪಾಟೀಲರಿಗೆ ಮಂತ್ರಿ ಸ್ಥಾನಕ್ಕೆ ಆಗ್ರಹಿಸಿ ಪ್ರತಿಭಟನೆ
ಗಜೇಂದ್ರಗಡ: ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಜೂ. ೨೦ರಂದು ಗದಗ ನಗರದ ಗಾಂಧಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗಜೇಂದ್ರಗಡ ಹಾಗೂ ರೋಣ ತಾಲೂಕು ಪದಾಧಿಕಾರಿಗಳು ಎಚ್ಚರಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರೋಣ ಮತಕ್ಷೇತ್ರಕ್ಕೆ ಭೇಟಿ ನೀಡಿದ್ದ ವೇಳೆ ಕ್ಷೇತ್ರದ ಜನತೆಗೆ ನೀಡಿದ ಭರವಸೆಯಂತೆ ಶಾಸಕ ಜಿ.ಎಸ್. ಪಾಟೀಲ ಅವರನ್ನು ಸಚಿವರನ್ನಾಗಿ ಮಾಡುವುದಾಗಿ ತಿಳಿಸಿದ್ದರು. ಆ ಮಾತನ್ನು ಉಳಿಸಿಕೊಳ್ಳಬೇಕೆಂದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಜಿಲ್ಲೆಯ ವೀರಶೈವ ಲಿಂಗಾಯತರಿಗೆ ಅನ್ಯಾಯ ಆಗುತ್ತಿರುವುದು ಸ್ಪಷ್ಟ. ಈ ಬಾರಿ ರೋಣ ಮತಕ್ಷೇತ್ರದ ಹಿರಿಯ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಮಂತ್ರಿ ಸ್ಥಾನ ನೀಡಲು ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದರು.ಗಜೇಂದ್ರಗಡ ತಾಲೂಕಾಧ್ಯಕ್ಷ ಪ್ರಭು ಚವಡಿ, ರೋಣ ತಾಲೂಕಾಧ್ಯಕ್ಷ ಅನಿಲಕುಮಾರ ತೆಗ್ಗಿನಕೇರಿ, ರಾಜ್ಯ ಯುವ ಘಟಕದ ನಿರ್ದೇಶಕ ಸಿದ್ದು ಗೊಂಗಡಶೆಟ್ಟಿಮಠ, ಬಿ.ಎಸ್. ಶೀಲವಂತರ, ಭೀಮಪ್ಪ ರಡ್ಡೇರ, ಶರಣಪ್ಪ ರೇವಡಿ, ಶರಣು ಬ್ಯಾಳಿ, ಅವಿನಾಶ ಮತ್ತಿಕಟ್ಟಿ, ಅಮರಯ್ಯ ಗೌರಿಮಠ, ಮಲ್ಲಿಕಾರ್ಜುನ ರಡ್ಡೇರ್, ಬಸವರಾಜ ಚನ್ನಿ, ಶಿವಕುಮಾರ ಶಶಿಮಠ, ಕಿರಣ ಚನ್ನವೀರಶೆಟ್ಟರ, ವಿಜಯ ಪಾಟೀಲ, ಎಂ.ಎಸ್. ದಢೇಸೂರಮಠ, ವೀರಭದ್ರ ಯಲಬುರ್ಗಿ ಸೇರಿ ಮಹಿಳಾ ಘಟಕದ ಪದಾಧಿಕಾರಿಗಳಿದ್ದರು.