ಸಾರಾಂಶ
ಉಡುಪಿ : ಆಪರೇಷನ್ ಸಿಂದೂರದಂತಹ ಕಾರ್ಯಾಚರಣೆ 90ರ ದಶಕದಲ್ಲಿ ಆಗಬೇಕಿತ್ತು. ಅಂದು ಆಗಿದ್ದರೆ ಇಂದು ಇಂತಹ ಘಟನೆ ನಡೆಯುತ್ತಿರಲಿಲ್ಲ. ನಾವು ಕೂಡ ನಮ್ಮ ಮನೆಯಲ್ಲಿ ಇರುತ್ತಿದ್ದೆವು. ಆಪರೇಷನ್ ಸಿಂದೂರ ನಡೆಸಿದ ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆಗೆ ಧನ್ಯವಾದಗಳು....
ಇದು ಪಹಲ್ಗಾಂ ಘಟನೆ ಹಾಗೂ ಆಪರೇಷನ್ ಸಿಂದೂರ ಕುರಿತು ಉಡುಪಿಗೆ ವಲಸೆ ಬಂದು ಇಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತ, ಮಣಿಪಾಲ ಕೆಎಂಸಿ ಪ್ರಾಧ್ಯಾಪಕ ರಾಹುಲ್ ಮ್ಯಾಗಝೀನ್ ಅವರ ಮಾತು.ಆಪರೇಷನ್ ಸಿಂದೂರ ಕುರಿತು ಉಡುಪಿಯಲ್ಲಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಪಹಲ್ಗಾಂ ಘಟನೆ ನಡೆದಾಗ ನನಗೆ ತುಂಬಾ ದುಃಖವಾಯಿತು. ನಾನೊಬ್ಬ ಕಾಶ್ಮೀರಿ ಪಂಡಿತನಾಗಿ ಜನರ ನೋವು ಅರ್ಥ ಮಾಡಿಕೊಳ್ಳಬಲ್ಲೆ. 1990ರಲ್ಲಿ ನಾವು ಇದೇ ರೀತಿ ಸಮಸ್ಯೆ ಅನುಭವಿಸಿ ಬಂದೆವು. 18 ವರ್ಷದ ತರುಣನಾಗಿ ನಾನು ಎಲ್ಲವನ್ನು ಕಣ್ಣಾರೆ ಕಂಡಿದ್ದೆ. ಕಾಶ್ಮೀರಿ ಪಂಡಿತರು ಭಯೋತ್ಪಾದಕರಿಂದ ಹತ್ಯೆಗೊಳಗಾದರು. ಮಹಿಳೆಯರನ್ನು ಅತ್ಯಾಚಾರ ಮಾಡಿದರು. 4-5 ಲಕ್ಷ ಕಾಶ್ಮೀರಿ ಪಂಡಿತರು ಊರು ಬಿಟ್ಟು ಬಂದೆವು. 35 ವರ್ಷದ ನಂತರ ಪಹಲ್ಗಾಂ ಘಟನೆ ನೋಡಿ ಆತಂಕವಾಯಿತು. ಹಳೆಯ ನೋವುಗಳು ಮತ್ತೆ ಮರುಕಳಿಸಿತು ಎಂದರು.
ಪಾಕಿಸ್ತಾನ ಒಂದು ದೇಶವಲ್ಲ ರಾಕ್ಷಸ. ಈ ರಾಕ್ಷಸರಿಂದ ನಮ್ಮನ್ನು ಸೇನೆ ರಕ್ಷಿಸಿದೆ. ಸೇನಾ ಕಾರ್ಯಚರಣೆಯಿಂದ ನಮ್ಮ ಎಲ್ಲ ಭಯ ದೂರವಾಗಿದೆ. ಕೆಲವೇ ವರ್ಷಗಳಲ್ಲಿ ನಮ್ಮ ಸೈನಿಕರು ಈ ರಾಕ್ಷಸನನ್ನು ಅಂತ್ಯ ಕಾಣಿಸುತ್ತಾರೆ ಎಂಬ ವಿಶ್ವಾಸ ಬಂದಿದೆ ಎಂದು ಹೇಳಿದರು.ಪಂಡಿತರು ಮರಳಿದರೆ ಮಾತ್ರ ಕಾಶ್ಮೀರ ಸುರಕ್ಷಿತ:
ನಾವು ಕಾಶ್ಮೀರ ಬಿಟ್ಟು 35 ವರ್ಷವಾಯಿತು. ಈವರೆಗೆ ನಾವು ವಾಪಸ್ ಹೋಗಿಲ್ಲ. ಕಾಶ್ಮೀರಿ ಪಂಡಿತರು ಮತ್ತೆ ತಮ್ಮ ಮನೆಗೆ ಹೋಗುವವರೆಗೆ ಕಾಶ್ಮೀರ ಸಹಜ ಸ್ಥಿತಿಗೆ ಬರಲ್ಲ. ಕಾಶ್ಮೀರಿ ಪಂಡಿತರು ತವರಿಗೆ ಮರಳಿದ ನಂತರವೇ ಕಾಶ್ಮೀರ ಇತರ ಭಾರತೀಯರಿಗೆ ಸುರಕ್ಷಿತ ಎಂದರು.ತವರಿಗೆ ವಾಪಸ್ ಮರಳುವ ಭರವಸೆ ಮೂಡಿದೆ:
ನಾವು 5000 ವರ್ಷದಿಂದ ಕಾಶ್ಮೀರದಲ್ಲಿ ಜೀವಿಸಿದ್ದೇವೆ. ಅಲ್ಲಿಂದ ಇಲ್ಲಿಗೆ ವಲಸೆ ಬಂದು ಆರಂಭದ 10 ವರ್ಷ ತುಂಬಾ ಕಷ್ಟಪಟ್ಟಿದ್ದೇವೆ. ನಮ್ಮ ಹಿರಿಯರಿಗೆ ತುಂಬಾ ದುಃಖವಾಗಿತ್ತು. ಸಮಯ ಕಳೆದಂತೆ ನಮ್ಮ ನೋವು ಕಡಿಮೆಯಾಗಿದೆ. ಆದರೆ ಗಾಯ ಇನ್ನೂ ಮಾಸಿಲ್ಲ. ನಾವು ವಾಪಸ್ ಮರಳಿದ ನಂತರವೇ ನಮಗೆ ನೆಮ್ಮದಿ. ಇದುವೇ ನಮ್ಮ ಅಂತಿಮ ಗುರಿ. ಭಾರತೀಯ ಸೇನೆಯ ಈ ಬಾರಿಯ ಕಾರ್ಯಾಚರಣೆ ನೋಡಿದಾಗ ಆ ಭರವಸೆ ಮೂಡಿದೆ. ಆ ನಮ್ಮ ನಿರೀಕ್ಷೆಯ ದಿನ ಶೀಘ್ರ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
* ಪಂಡಿತರ ‘ಕಣ್ಣೀರ ಕಣಿವೆ’ : ಕಾಶ್ಮೀರದಲ್ಲಿ 90ರ ದಶಕದಲ್ಲಿ ಆದ ನರಸಂಹಾರದ ಬಗ್ಗೆ ಮೂರು ವರ್ಷದ ಹಿಂದೆ ನಾನೊಂದು ಪುಸ್ತಕ ಬರೆದಿದ್ದೇನೆ. ಸಂತ್ರಸ್ತರ ಸಂದರ್ಶನ ಮಾಡಿ, 40-50 ಕುಟುಂಬಗಳ ಸತ್ಯಕಥೆಗಳನ್ನು ಅದರಲ್ಲಿ ದಾಖಲಿಸಿದ್ದೇನೆ. ನಾವು ಅನುಭವಿಸಿದ ಭೇದ ಭಾವ, ಮಹಿಳೆಯನ್ನು ತುಂಡರಿಸಿದ ಘಟನೆಯನ್ನು ‘ಆ್ಯಂಡ್ ದ ವ್ಯಾಲಿ ರಿಮೇನ್ಸ್ ಸೈಲೆಂಟ್’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದೇನೆ. ಕನ್ನಡದಲ್ಲಿ ಈ ಪುಸ್ತಕವನ್ನು ‘ಕಣ್ಣೀರ ಕಣಿವೆ’ ಎಂಬ ಹೆಸರಿನಲ್ಲಿ ಅನುವಾದಿಸಲಾಗಿದೆ ಎಂದಿದ್ದಾರೆ.