ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದರೆ ಹೈಕೋರ್ಟ್‌ ಮೊರೆ: ರಾಯರಡ್ಡಿ

| Published : Aug 04 2024, 01:20 AM IST

ಸಾರಾಂಶ

ಮುಡಾ ಹಗರಣದಲ್ಲಿ ಪ್ರಕರಣ ದಾಖಲು ಮಾಡಲು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದರೆ ಹೈಕೋರ್ಟ್ ಮೊರೆ ಹೋಗಲಾಗುತ್ತದೆ.

ಲಿಂಗಾಯತ ಶಾಸಕರ ಬೆಂಬಲ ಸಿಎಂಗೆ

ಹಿಂದುಳಿದ ವರ್ಗದ ನಾಯಕನ ಬೆಳವಣಿಗೆ ಸಹಿಸುತ್ತಿಲ್ಲ ಬಿಜೆಪಿ, ಜೆಡಿಎಸ್

ಸಿದ್ದರಾಮಯ್ಯನವರೇ ಅವಧಿ ಪೂರ್ಣ ಸಿಎಂ

ವರ್ಗಾವಣೆ ದಂಧೆಗೆ ಕೌನ್ಸಿಲಿಂಗ್ ಪರಿಹಾರ ಜಾರಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮುಡಾ ಹಗರಣದಲ್ಲಿ ಪ್ರಕರಣ ದಾಖಲು ಮಾಡಲು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದರೆ ಹೈಕೋರ್ಟ್ ಮೊರೆ ಹೋಗಲಾಗುತ್ತದೆ. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಮೇಯವೇ ಬರುವುದಿಲ್ಲ. ಅವರು ಅವಧಿಪೂರ್ಣ ಸಿಎಂ ಆಗಿಯೇ ಇರುತ್ತಾರೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದರು.

ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆಯ ವಿರುದ್ಧ ಹರಿಹಾಯ್ದ ಅವರು, ಇದೊಂದು ಅರ್ಥವಿಲ್ಲದ ಪಾದಯಾತ್ರೆಯಾಗಿದೆ. ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರು 2ನೇ ಅವಧಿಗೆ ಮುಖ್ಯಮಂತ್ರಿಯಾಗಿರುವುದು ಕಮ್ಯುನಲ್ ಪಾರ್ಟಿಯಗಿರುವ ಬಿಜೆಪಿ ಮತ್ತು ಜೆಡಿಎಸ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದು, ಅದು ಆಗುವುದಿಲ್ಲ ಎಂದರು.

ಮುಡಾ ಹಗರಣವೇ ಅಲ್ಲ. ಅಷ್ಟಕ್ಕೂ ಇದು ಬಿಜೆಪಿಯ ಅವಧಿಯಲ್ಲಿ ಆಗಿರುವ ಪ್ರಕರಣವಾಗಿದೆ. ಇದಕ್ಕಾಗಿಯೇ ಸಿಎಂ ಸಿದ್ದರಾಮಯ್ಯ ಅವರು ಮುಡಾದಲ್ಲಿ ಹಂಚಿಕೆಯಾಗಿರುವ ಶೇ. 50-50 ಅನುಪಾತವೇ ಕಾನೂನು ಬಾಹಿರ ಎಂದು ರದ್ದು ಮಾಡಿ ಆದೇಶಿಸಿದ್ದಾರೆ.

ತಮ್ಮ ಮೇಲೆ ಆರೋಪ ಬಂದ ತಕ್ಷಣ, ತನಿಖೆಗೆ ಆದೇಶ ಮಾಡಿದ್ದಾರೆ. ನ್ಯಾಯಯುತವಾಗಿ ಅವರ ಪತ್ನಿಗೆ ಬಂದಿರುವ ಭೂಮಿಯನ್ನು ಮುಡಾ ಅಕ್ರಮವಾಗಿ ಲೇ ಔಟ್ ಮಾಡಿ, ಹಂಚಿಕೆ ಮಾಡಿದೆ, ಅದಕ್ಕೆ ಪರಿಹಾರವಾಗಿ ಸೈಟ್‌ಗಳನ್ನು ನೀಡಿದೆ. ಈಗ ಅದನ್ನು ಸಹ ರದ್ದು ಮಾಡಿದ್ದು, ನಿಯಮಾನುಸಾರ ಮುಡಾ ಕ್ರಮವಹಿಸಬೇಕಾಗಿದೆ ಎಂದರು.

ಹೀಗಿದ್ದಾಗ್ಯೂ ಆರ್‌ಟಿಐ ಕಾರ್ಯಕರ್ತ ಅಬ್ರಾಹಂ ನೀಡಿದ ದೂರಿನ ಮೇಲೆ ಏಕಾಏಕಿ ರಾಜ್ಯಪಾಲರು ನೋಟಿಸ್ ನೀಡಿದ್ದು ಸರಿಯಲ್ಲ. ಸಚಿವ ಸಂಪುಟದಲ್ಲಿ ಇದನ್ನ ತಿರಸ್ಕಾರ ಮಾಡಿ, ನಿರ್ಣಯ ಮಾಡಲಾಗಿದೆ. ರಾಜ್ಯ ಮತ್ತು ದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಇದು ಗೊತ್ತಾಗಿದ್ದರಿಂದ ಈಗ ವಿನಾಕಾರಣ ಗೊಂದಲ ಉಂಟು ಮಾಡಲು ಬಿಜೆಪಿ, ಜೆಡಿಎಸ್ ಯತ್ನಿಸುತ್ತೇವೆ ಎಂದರು.

ಅಬ್ರಾಹಂ ಒಬ್ಬ ಬ್ಲ್ಯಾಕ್ ಮೇಲರ್ ಆಗಿದ್ದಾನೆ, ಈ ಹಿಂದೆ ಯಡಿಯೂರಪ್ಪ, ಕುಮಾರಸ್ವಾಮಿ ಮೇಲೂ ದೂರು ನೀಡಿದ್ದಾನೆ, ಈಗಲೂ ಅದೇ ಯತ್ನ ಮಾಡಿದ್ದು, ಏನು ಆಗುವುದಿಲ್ಲ ಎಂದರು.

ಶಾಸಕರ ಬೆಂಬಲ:

ಲಿಂಗಾಯತ ಶಾಸಕರು ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ. ಒಕ್ಕಲಿಗರೂ ಸಹ ಬೆಂಬಲಿಸಿದ್ದಾರೆ. ಇದನ್ನು ಬಿಜೆಪಿ, ಜೆಡಿಎಸ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.

ಕೇಂದ್ರದ ತನಿಖಾ ಸಂಸ್ಥೆಗೆ ಕೊಡುವ ಪ್ರಶ್ನೆಯೇ ಇಲ್ಲ. ಇದರಲ್ಲಿ ಸರ್ಕಾರದ ಪಾತ್ರವೇನು ಇಲ್ಲದೆ ಇರುವುದರಿಂದ ಅದರ ಅಗತ್ಯವಿಲ್ಲ. ಬಿಜೆಪಿಯವರು ಹಾಗೊಂದು ವೇಳೆ ಬೇಕಿದ್ದರೇ ಕೋರ್ಟ್‌ಗೆ ಹೋಗಲಿ ಎಂದರು.

ಈ ಸರ್ಕಾರ ಮುಟ್ಟಲು ಯಾರಿಗೂ ಸಾಧ್ಯವಿಲ್ಲ:

ಇದು ಜನರಿಂದ ಆಯ್ಕೆಯಾಗಿರುವ ಸರ್ಕಾರ, ಸಂಪೂರ್ಣ ಬಹುಮತ ಇರುವ ಸರ್ಕಾರವಾಗಿದೆ. ಹೀಗಾಗಿ ಈ ಸರ್ಕಾರವನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ರಾಯರಡ್ಡಿ ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತ ಪ್ರಶ್ನೆಗೆ ಕೆರಳಿದ ರಾಯರಡ್ಡಿ ಅವರು, ಬಿಜೆಪಿಯವರು ಏನು ಬೇಕಾದರೂ ಹೇಳಿಕೊಳ್ಳಲಿ, ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿಯೇ ಇರುತ್ತಾರೆ. ಜನರಿಂದ ಆಯ್ಕೆಯಾಗಿರುವ ಸರ್ಕಾರ ಕಿತ್ತೊಗೆಯಲು ಸಾಧ್ಯವಿಲ್ಲ ಎಂದರು.