ಸಾರಾಂಶ
ಇಡೀ ಸಮಾಜವೇ ತನ್ನ ವಿರುದ್ದ ನಿಂತರೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಸಂಕಲ್ಪ ತೊಟ್ಟು ಕಾರ್ಯಗತಗೊಳಿಸಿದ ಅಕ್ಷರಮಾತೆ ಸಾವಿತ್ರಿ ಬಾಯಿ ಫುಲೆ ಅವರ ಆದರ್ಶವನ್ನು ಪಾಲಿಸಿದರೆ ಮಾತ್ರ ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆದದ್ದಕ್ಕೂ ಸಾರ್ಥಕ
ಕನ್ನಡಪ್ರಭ ವಾರ್ತೆ ಕೋಲಾರ
ಇಡೀ ಸಮಾಜವೇ ತನ್ನ ವಿರುದ್ದ ನಿಂತರೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಸಂಕಲ್ಪ ತೊಟ್ಟು ಕಾರ್ಯಗತಗೊಳಿಸಿದ ಅಕ್ಷರಮಾತೆ ಸಾವಿತ್ರಿ ಬಾಯಿ ಫುಲೆ ಅವರ ಆದರ್ಶವನ್ನು ಪಾಲಿಸಿದರೆ ಮಾತ್ರ ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆದದ್ದಕ್ಕೂ ಸಾರ್ಥಕ ಎಂದು ಬೆಂಗಳೂರು ಪೂರ್ವ ವಲಯ ಡಿಸಿಪಿ ದೇವರಾಜ್ ಕರೆ ನೀಡಿದರು.ಜಿಲ್ಲಾ ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕ ಗೆಳೆಯರ ಬಳಗದಿಂದ ಸಾಧಕ ಶಿಕ್ಷಕರಿಗೆ ಅಕ್ಷರ ಮಾತೆ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿ, ನಾವು ಕೆಲಸ ಮಾಡುವ ಶಾಲೆಗಳ ಮಕ್ಕಳಿಗೆ ನೆರವಾಗುವ ಅವರ ಪ್ರಯತ್ನಕ್ಕೆ ಎಲ್ಲರ ಪ್ರೋತ್ಸಾಹ ಸಿಗಲಿ ಎಂದರು.
೬೦ ಶಾಲೆಗೆ ಡಿಜಿಟಲ್ ಬೋರ್ಡ್ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ೬೦ ಶಾಲೆಗಳಿಗೆ ಡಿಜಿಟಲ್ ಬೋರ್ಡ್ ನೀಡಲು ಕ್ರಿಯಾಯೋಜನೆ ಸಿದ್ದವಾಗಿದೆ, ನಮ್ಮ ಪ್ರಯತ್ನಕ್ಕೆ ನಮ್ಮೂರಿನವರಾದ ಡಿಸಿಪಿ ದೇವರಾಜ್ ಅವರ ನೆರವು ಮರೆಯುವಂತಿಲ್ಲ ಎಂದು ಧನ್ಯವಾದ ಸಲ್ಲಿಸಿದರು.ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ ಸರ್ಕಾರಿ ನೌಕರರ ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಶಿಕ್ಷಕ ಗೆಳೆಯರ ಬಳಗ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು, ಅದರ ಅಧ್ಯಕ್ಷ ನಾರಾಯಣಸ್ವಾಮಿ ಅವರ ಹೃದಯವಂತಿಕೆ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್,ಎಂಎಲ್‌ಸಿ ಇಂಚರ ಗೋವಿಂದರಾಜು, ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ, ಸಂಘದ ರಾಜ್ಯ ಮತ್ತು ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.