ಸಾರಾಂಶ
ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಮಾಡಬೇಕು. ಜನರ ಆರೋಗ್ಯ ಕಾಪಾಡಬೇಕು, ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕಾದರೆ, ನಾವು ಈಗಿನಿಂದಲೇ, ಕಷ್ಟವಾದರೂ ಪ್ಲಾಸ್ಟಿಕ್ ಕವರುಗಳ ಬಳಕೆಯನ್ನು ಬಿಟ್ಟು, ಬಟ್ಟೆಯ ಬ್ಯಾಗುಗಳನ್ನು ಬಳಕೆ ಮಾಡಿ.
ಕನ್ನಡಪ್ರಭ ವಾರ್ತೆ ವಿಜಯಪುರ
ಪ್ಲಾಸ್ಟಿಕ್ ಕವರುಗಳು ಕೊಡದಿದ್ದರೆ, ಗ್ರಾಹಕರು ಬರಲ್ಲ, ಪ್ಲಾಸ್ಟಿಕ್ ಕವರುಗಳ ಕೊಟ್ಟರೆ, ಪುರಸಭೆಯಿಂದ ದಂಡ ವಿಧಿಸ್ತೀರಿ, ನಾವು ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ, ವ್ಯಾಪಾರ ವಹಿವಾಟು ಮಾಡದಿದ್ದರೆ ಬದುಕುವುದು ಹೇಗೆ, ನೀವು ಪ್ಲಾಸ್ಟಿಕ್ ಕವರುಗಳನ್ನು ಉತ್ಪಾದನೆ ಮಾಡುವಂತಹ ಕಾರ್ಖಾನೆಗಳನ್ನು ಸ್ಥಗಿತಗೊಳಿಸಿ, ಉತ್ಪಾದನೆಯೇ ಇಲ್ಲದಂತೆ ಮಾಡಿದರೆ, ನಾವೂ ಕೂಡಾ ಗ್ರಾಹಕರಿಗೆ ಹೇಳಬಹುದು ಎಂದು ಪಟ್ಟಣದ ದಿನಸಿ ವ್ಯಾಪಾರಿಗಳು ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರು.ಪಟ್ಟಣದ ರೋಜ್ ಗಾರ್ ಕಚೇರಿಯಲ್ಲಿ ಪುರಸಭೆ ಅಧ್ಯಕ್ಷೆ ಎನ್.ಭವ್ಯಾ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ, ಪ್ಲಾಸ್ಟಿಕ್ ಕವರುಗಳು ಬಳಕೆ ಮಾಡಿದರೆ, ಇನ್ನು ಮುಂದೆ ದಂಡ ವಿಧಿಸುವುದಿಲ್ಲ, ಕೇಸು ದಾಖಲಿಸಲಾಗುತ್ತದೆ ಎಂದು ಪುರಸಭೆಯ ಅಧಿಕಾರಿಗಳು ನೀಡಿದ ಎಚ್ಚರಿಕೆಯನ್ನು ಆಧರಿಸಿ ವ್ಯಾಪಾರಿಗಳು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಡಿ.ಮಾರ್ಟ್ ಆರಂಭವಾದ ನಂತರ, ದಿನಸಿ ವ್ಯಾಪಾರಿಗಳಿಗೆ ವ್ಯಾಪಾರಗಳಿಲ್ಲ. ಬರುವಂತಹ ಗ್ರಾಹಕರಿಗೆ ಕವರುಗಳು ಕೊಡದಿದ್ದರೆ, ಅವರು ಖರೀದಿಸಿರುವ ವಸ್ತುಗಳನ್ನು ಅಂಗಡಿಯಲ್ಲೇ ಬಿಟ್ಟು ಹೋಗುತ್ತಾರೆ. ನಮಗೆ ವಿಧಿಯಿಲ್ಲ. ೪೦ ಮೈಕ್ರಾನ್ ಮೇಲ್ಪಟ್ಟ ಕವರುಗಳನ್ನು ಬಳಕೆ ಮಾಡಿಕೊಳ್ಳಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಕೊಟ್ಟಿದ್ದರೂ, ವಿನಃ ಕಾರಣ ಪುರಸಭೆಯ ಅಧಿಕಾರಿಗಳು ಬಂದು, ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸುವುದು ಯಾಕೆ? ಎಣ್ಣೆ, ಚಾಕೋಲೇಟ್, ಶಾಂಪೂ ಸೇರಿದಂತೆ ಬಹಳಷ್ಟು ಉತ್ಪನ್ನಗಳು ಪ್ಲಾಸ್ಟಿಕ್ ಕವರುಗಳಲ್ಲೇ ಬರುತ್ತವೆ. ನಾವೇನು ಮಾಡಲು ಸಾಧ್ಯ? ನೀವು ಗ್ರಾಹಕರು ಅಗತ್ಯ ವಸ್ತುಗಳನ್ನು ಖರೀದಿಸಿಕೊಂಡು ಹೋಗುವಾಗ ಪ್ಲಾಸ್ಟಿಕ್ ಕವರುಗಳ ಸಮೇತ ಹಿಡಿದು ದಂಡ ವಿಧಿಸಿರಿ, ಆಗಲಾದರೂ ಗ್ರಾಹಕರು ಪ್ಲಾಸ್ಟಿಕ್ ಕವರುಗಳ ಕೇಳುವುದನ್ನು ತಪ್ಪಿಸಲು ಅನುಕೂಲವಾಗುತ್ತದೆ. ನಾವು ಪ್ಲಾಸ್ಟಿಕ್ ಕವರ್ ಕೊಡದಿದ್ದರೆ, ಬೇರೆ ಅಂಗಡಿಗಳಲ್ಲಿ ಕೊಡುತ್ತಾರೆ. ಗ್ರಾಹಕರು ಅಲ್ಲಿಗೆ ಹೋಗುತ್ತಾರೆ ಎಂದು ಸಲಹೆ ನೀಡಿದರು.ಪುರಸಭೆ ಅಧ್ಯಕ್ಷೆ ಎನ್. ಭವ್ಯಾ ಮಹೇಶ್ ಮಾತನಾಡಿ, ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಮಾಡಬೇಕು. ಜನರ ಆರೋಗ್ಯ ಕಾಪಾಡಬೇಕು, ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕಾದರೆ, ನಾವು ಈಗಿನಿಂದಲೇ, ಕಷ್ಟವಾದರೂ ಪ್ಲಾಸ್ಟಿಕ್ ಕವರುಗಳ ಬಳಕೆಯನ್ನು ಬಿಟ್ಟು, ಬಟ್ಟೆಯ ಬ್ಯಾಗುಗಳನ್ನು ಬಳಕೆ ಮಾಡಿ ಎಂದರು.
ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ಕುಮಾರ್ ಮಾತನಾಡಿ, ನಾವು ಸುಧಾರಣೆಯತ್ತ ಸಾಗಬೇಕು, ಹಿಂದಿನಿಂದಲೂ ಹೀಗೆ ಮಾಡುತ್ತಿದ್ದೇವೆ ಎಂದರೆ, ಸುಧಾರಣೆ ತರಲು ಸಾಧ್ಯವಾಗಲ್ಲ. ನೀವು ಪ್ಲಾಸ್ಟಿಕ್ ಕೊಡುವುದನ್ನು ನಿಲ್ಲಿಸಿ, ಪುರಸಭೆಯೊಂದಿಗೆ ಸಹಕಾರ ನೀಡಿ, ಕಸವನ್ನು ಎಲ್ಲೆಂದರಲ್ಲಿ ಹಾಕಬೇಡಿ, ಪ್ರತಿಯೊಬ್ಬರೂ ವಾಣಿಜ್ಯ ಪರವಾನಗಿ ಪಡೆದುಕೊಳ್ಳಬೇಕು, ಹೊಟೇಲ್ ಗಳಲ್ಲಿ, ಗ್ರಾಹಕರಿಗೆ ಕುಡಿಯಲು ಫಿಲ್ಟರ್ ನೀರು ಕೊಡಬೇಕು, ಸ್ವಚ್ಛತೆ ಕಾಪಾಡಬೇಕು, ಊಟದ ತಟ್ಟೆಗಳಿಗೆ ಪ್ಲಾಸ್ಟಿಕ್ ಕವರ್ ಬದಲಿಗೆ ಎಲೆ ಹಾಕಬೇಕು. ಬೇಕರಿಗಳಲ್ಲಿ ತಯಾರಾಗುವ ತಿಂಡಿಗಳಿಗೆ ಕಲರ್ ಬೆರೆಸಬಾರದು, ಮಾಂಸ ಮಾರಾಟದ ಅಂಗಡಿಗಳವರೂ ಸಹಾ ಪ್ಲಾಸ್ಟಿಕ್ ಕವರುಗಳನ್ನು ಬಳಕೆ ಮಾಡುವಂತಿಲ್ಲ. ತ್ಯಾಜ್ಯವನ್ನು ನೇರವಾಗಿ ಪುರಸಭೆ ವಾಹನಕ್ಕೆ ನೀಡಬೇಕು ಎಂದು ಎಚ್ಚರಿಕೆ ನೀಡಿದರು.ಪುರಸಭೆ ವ್ಯವಸ್ಥಾಪಕ ಸತ್ಯನಾರಾಯಣ, ಆರೋಗ್ಯ ನಿರೀಕ್ಷಕಿ ಲಾವಣ್ಯ, ಪೃಥ್ವಿ, ಶಿವನಾಗೇಗೌಡ ಹಾಗೂ ವ್ಯಾಪಾರಿಗಳು ಹಾಜರಿದ್ದರು.