ಅಹಿಂದ ಸಮಾಜವು ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ.ಕೆ. ಶಿವಕುಮಾರ ಅವರ ಮುಖ ನೋಡಿ ಮತ ಹಾಕಿಲ್ಲ. ಸಿದ್ದರಾಮಯ್ಯ ಅವರ ನಾಯಕತ್ವದ ಗುಣ ಮೆಚ್ಚಿ ಮತಹಾಕಿ ಅಧಿಕಾರಕ್ಕೆ ತಂದಿದೆ. ಇದನ್ನು ಅರಿಯದೇ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಅವರಿಗೆ ದ್ರೋಹ ಮಾಡಿದರೆ ಮುಂದಿನ ಅನಾಹುತಗಳಿಗೆ ನೇರ ಹೊಣೆಯಾಗಲಿದೆ.

ಹುಬ್ಬಳ್ಳಿ:

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದಿರುವ ಅಹಿಂದ ಕರ್ನಾಟಕ ಸಂಘಟನೆ ಸಂಚಾಲಕು ಸಿದ್ದು ತೇಜಿ, ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಿಂದ ಸಮಾಜವು ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ.ಕೆ. ಶಿವಕುಮಾರ ಅವರ ಮುಖ ನೋಡಿ ಮತ ಹಾಕಿಲ್ಲ. ಸಿದ್ದರಾಮಯ್ಯ ಅವರ ನಾಯಕತ್ವದ ಗುಣ ಮೆಚ್ಚಿ ಮತಹಾಕಿ ಅಧಿಕಾರಕ್ಕೆ ತಂದಿದೆ. ಇದನ್ನು ಅರಿಯದೇ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಅವರಿಗೆ ದ್ರೋಹ ಮಾಡಿದರೆ ಮುಂದಿನ ಅನಾಹುತಗಳಿಗೆ ನೇರ ಹೊಣೆಯಾಗಲಿದೆ ಎಂದರು.

ಜಾಗೃತ ಹೆಜ್ಜೆಯಿಡಲಿ:

ಸಿದ್ದರಾಮಯ್ಯ ಅವರ ಮೇಲೆ ಯಾವುದೇ ಹಗರಣ, ಭ್ರಷ್ಟಾಚಾರದ ಆರೋಪಗಳಿಲ್ಲ. ಆದರೂ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಹುನ್ನಾರ ನಡೆಯುತ್ತಿದೆ. ಕಾಂಗ್ರೆಸ್‌ ಹೈಕಮಾಂಡ್‌ ಈ ವಿಷಯದಲ್ಲಿ ತನ್ನ ನಿರ್ಧಾರ ತೆಗೆದುಕೊಳ್ಳುವಾಗ ಜಾಗೃತವಾಗಿ ಹೆಜ್ಜೆ ಇಡಬೇಕು. ಅಹಿಂದ ವರ್ಗದ ಶಾಸಕರು ಡಿಸಿಎಂ ಡಿ.ಕೆ. ಶಿವಕುಮಾರ ಅವರ ಜತೆ ಕೈಜೋಡಿಸಿದಲ್ಲಿ ಅಂಥ ಶಾಸಕರ ಮನೆಯ ಎದುರು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಸುವರ್ಣಸೌಧಕ್ಕೆ ಮುತ್ತಿಗೆ:

ಗ್ರಾಪಂ, ತಾಪಂ, ಜಿಪಂ, ನಗರಸಭೆ, ಪಾಲಿಕೆ ಚುನಾವಣೆಗಳಲ್ಲಿ ಅಹಿಂದ ವರ್ಗಕ್ಕೆ ಸಾಮಾನ್ಯ ವಾರ್ಡ್‌ನಲ್ಲಿ ಟಿಕೆಟ್‌ ನೀಡಬೇಕು. ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡುವ ಕುರಿತು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಗಂಭೀರವಾಗಿ ಚರ್ಚಿಸಿ ಡಿ. 15ರೊಳಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ 50 ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಸಿದ್ದು ತೇಜಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಿನ, ಪ್ರಧಾನ ಕಾರ್ಯದರ್ಶಿ ಬೀರಲಿಂಗ ಪೂಜಾರಿ, ಜಿಲ್ಲಾಧ್ಯಕ್ಷ ದೇವೇಂದ್ರ, ಸಂಚಾಲಕ ಶಂಕರ ಸೇರಿದಂತೆ ಹಲವರಿದ್ದರು.