ಕೇಸ್ ಇತ್ಯರ್ಥವಾದರೆ ಹೈದರಾಬಾದ್ ಕರ್ನಾಟಕಕ್ಕೆ ಇನ್ನೂ 4 ಸಾವಿರ ಶಿಕ್ಷಕರ ನೇಮಕ
KannadaprabhaNewsNetwork | Published : Oct 28 2023, 01:15 AM IST
ಕೇಸ್ ಇತ್ಯರ್ಥವಾದರೆ ಹೈದರಾಬಾದ್ ಕರ್ನಾಟಕಕ್ಕೆ ಇನ್ನೂ 4 ಸಾವಿರ ಶಿಕ್ಷಕರ ನೇಮಕ
ಸಾರಾಂಶ
ಮುಂದಿನ ವರ್ಷ 20 ಸಾವಿರ ಶಿಕ್ಷಕರ ನೇಮಕ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಹೈದ್ರಾಬಾದ್ ಕರ್ನಾಟಕದಲ್ಲಿ 9 ಸಾವಿರ ಶಿಕ್ಷಕರನ್ನು ತೆಗೆದುಕೊಂಡಿದ್ದೇವೆ. ಇನ್ನು 4 ಸಾವಿರ ತೆಗೆದುಕೊಳ್ಳಬೇಕು. ಆದರೆ, ಕೆಲವರು ಕೋರ್ಟ್‌ಗೆ ಹೋಗಿರುವುದು ನೇಮಕಾತಿಗೆ ಸಮಸ್ಯೆಯಾಗಿದೆ. ಅ.30ರಂದು ಈ ಬಗ್ಗೆ ನ್ಯಾಯಾಲಯದಲ್ಲಿ ಒಂದು ಕೇಸ್ ಇದೆ, ಇದು ಇತ್ಯರ್ಥವಾದರೆ ಹೈದರಾಬಾದ್ ಕರ್ನಾಟಕಕ್ಕೆ 4 ಸಾವಿರ ಶಿಕ್ಷಕರ ನೇಮಕವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವರ್ಷ 20 ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ. 20 ಸಾವಿರದಲ್ಲಿ 15 ಸಾವಿರ ರೆಗ್ಯುಲರ್ ಟೀಚರ್ ಹಾಗೂ 5 ಸಾವಿರ ಸಂಗೀತ, ಪಿಇ ಶಿಕ್ಷಕರ ನೇಮಕವಾಗಲಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಕ್ವಾಲಿಟಿ ಎಜುಕೇಷನ್ ಕೊಡಲು ಯೋಜನೆ ಸಿದ್ಧಪಡಿಸುತ್ತಿದ್ದೇವೆ. ಅಜೀಂ ಪ್ರೇಮ್‌ಜೀ, ಇನ್ ಪೋಸಿಸ್ ಖಾಸಗಿ ಸಂಸ್ಥೆಗಳಿಂದ ಶಿಕ್ಷಕರಿಗೆ ತರಬೇತಿ ಕೊಡಿಸುತ್ತೇವೆ. ಮಕ್ಕಳಿಗೆ ಪೌಷ್ಠಿಕಾಂಶ ಕೊಡಲು ಸಿದ್ಧತೆ ನಡೆಯುತ್ತಿದೆ. ಪಠ್ಯಪುಸ್ತಕ ಗಾತ್ರ ಕಡಿಮೆ ಆಗಬೇಕು. ಈ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ ಎಂದರು. ಸ್ಮಾರ್ಟ್‌ಸಿಟಿ ಕಳಪೆ ಕಾಮಗಾರಿ ತನಿಖೆ: ಶಿವಮೊಗ್ಗ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ಕುರಿತು ಉನ್ನತಮಟ್ಟದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ. ಶೀಘ್ರದಲ್ಲೇ ಈ ತನಿಖೆ ನಡೆಯಲಿದೆ. ಸ್ಮಾರ್ಟ್‌ಸಿಟಿ ಯೋಜನೆ ಬಗ್ಗೆ ದೊಡ್ಡಮಟ್ಟದ ತನಿಖೆ ಆಗಬೇಕು. ಕಳಪೆ ಕಾಮಗಾರಿ ಬಗ್ಗೆ 1500 ಅರ್ಜಿ ಬಂದಿದೆ. ತಪ್ಪಿತಸ್ಥರ ಮೇಲೆ ತನಿಖೆ ಆಗಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಈಗಾಗಲೇ ಬರಗಾಲ ಆವರಿಸಿದೆ. ಮುಂಬರುವ ದಿನಗಳಲ್ಲಿ ನೀರಿನ ಹಾಹಾಕಾರ ಉಂಟಾಗಬಹುದು. ಹಾಗಾಗಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಜಿಲ್ಲೆಯಲ್ಲಿ ಸಮಪರ್ಕವಾಗಿ ಅನುಷ್ಠಾನಗೊಳಿಸಲಾಗುವುದು. ಆ ಮೂಲಕ ಹಳ್ಳಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬಹುದು ಎಂದರು. ವಿದ್ಯುತ್ ಸಮಸ್ಯೆ ಬಗ್ಗೆ ಇಂಧನ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಬರಗಾಲ ಛಾಯೆ ಇರುವುದರಿಂದ ಸರ್ಕಾರ ರೈತರಿಗೆ 5 ತಾಸು ವಿದ್ಯುತ್ ನೀಡುವ ಭರವಸೆ ನೀಡಿದೆ. ನಾನ್ ಸ್ಟಾಪ್ ಐದು ತಾಸು ಕೊಡುವಂತೆ ಸೂಚನೆ ನೀಡಿದ್ದೇನೆ. ಐದು ತಾಸು ವಿದ್ಯುತ್ ಕೊಟ್ಟರೆ ರೈತರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು. ಕರ್ನಾಟಕ ಬಸವಣ್ಣನ ನಾಡು ಅಂತಾಗಬೇಕು ಎಂಬ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಸಿದ ಮಧು ಬಂಗಾರಪ್ಪ ಅವರು, ಎಂ.ಬಿ.ಪಾಟೀಲ್ ಅವರು ವೈಯಕ್ತಿಕವಾಗಿ ಅವರ ಅಭಿಪ್ರಾಯ ತಿಳಿಸಿದ್ದಾರೆ. ಈ ಬಗ್ಗೆ ಸರ್ಕಾರ ತೀರ್ಮಾನ ಮಾಡುತ್ತದೆ. ನಾನು ಈ ಬಗ್ಗೆ ಚರ್ಚೆ ಮಾಡಲ್ಲ, ಬಸವಣ್ಣನವರ ಬಗ್ಗೆ ಬಹಳ ಅಪಾರವಾದ ಗೌರವ ಇದೆ. ಬಸವಣ್ಣನವರ ಮಾರ್ಗದರ್ಶನ ನಾವು ಅನುಸರಿಸುತ್ತೇವೆ ಎಂದರು. - - - ಕೋಟ್ ಸಿಎಂ, ಡಿಸಿಎಂ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡುತ್ತಿದ್ದಾರೆ. ಅವರು ಮಾಡಲಿ ನೋ ಪ್ರಾಬ್ಲಂ. ಸಚಿವರು ತಪ್ಪು ಮಾಡಿದ್ರೆ ದೂರು ಕೊಡಲಿ, ಕ್ರಮ ಕೈಗೊಳ್ಳಲಿ. ನಮ್ಮ ದೇಶದಲ್ಲಿ ಕಾನೂನು ಇದೆ, ಕಾನೂನು ಸತ್ತು ಹೋಗಿಲ್ಲ. ಪದೇ ಪದೇ ಇಂತಹ ದೂರು ಬಂದ್ರೆ ಬರವಣಿಗೆಯಲ್ಲಿ ದೂರು ಕೊಡಲಿ - ಮಧು ಬಂಗಾರಪ್ಪ, ಶಿಕ್ಷಣ ಸಚಿವ - - - -27ಎಸ್‌ಎಂಜಿಕೆಪಿ02: ಮಧು ಬಂಗಾರಪ್ಪ