ಕೇಂದ್ರ ಸರ್ಕಾರ ಉದ್ಯಮಿಗಳಿಗೆ ಕೋಟ್ಯಂತರ ಹಣ ನೀಡಿದರೆ ದಿವಾಳಿಯಾಗುವುದಿಲ್ಲವೇ?: ಜೆ.ಪಿ. ಹೆಗ್ಡೆ

| Published : Apr 04 2024, 01:07 AM IST

ಕೇಂದ್ರ ಸರ್ಕಾರ ಉದ್ಯಮಿಗಳಿಗೆ ಕೋಟ್ಯಂತರ ಹಣ ನೀಡಿದರೆ ದಿವಾಳಿಯಾಗುವುದಿಲ್ಲವೇ?: ಜೆ.ಪಿ. ಹೆಗ್ಡೆ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜೆಪಿ ಹೆಗ್ಡೆ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಪಕ್ಷ ಕಾರ್ಯಕರ್ತರ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಹೆಗ್ಡೆ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಉಡುಪಿ

ಗ್ಯಾರಂಟಿ ಯೋಜನೆ ಮೂಲಕ ಬಡಜನರಿಗೆ ನೆರವು ನೀಡಿದಾಗ ಸರ್ಕಾರ ದಿವಾಳಿಯಾಗುತ್ತದೆ ಎಂದು ಹೇಳುವ ಬಿಜೆಪಿ, ಕೇಂದ್ರ ಸರ್ಕಾರ ದೊಡ್ಡದೊಡ್ಡ ಉದ್ಯಮಿಗಳಿಗೆ ಕೋಟ್ಯಂತರ ರು. ಹಣ ನೀಡುವಾಗ ಸರ್ಕಾರ ದಿವಾಳಿಯಾಗುತ್ತದೆ ಎಂದು ಅನಿಸುವುದಿಲ್ಲವೇ ಎಂದು ಉಡುಪಿ - ಚಿಕ್ಕಮಗಳೂರು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ ಹೆಗ್ಡೆ ಪ್ರಶ್ನಿಸಿದರು.

ಬುಧವಾರ ನಾಮಪತ್ರ ಸಲ್ಲಿಕೆಗೂ ಮುನ್ನ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ನಡೆದ ಪಕ್ಷ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ತಮಗೆ ಅವಕಾಶ ನೀಡಿದರೆ ಕರಾವಳಿಯ ಮೀನುಗಾರರ ಸಮಸ್ಯೆ, ಹೆದ್ದಾರಿ ಸಮಸ್ಯೆ, ಮಲೆನಾಡು -ಬಯಲುಸೀಮೆಯ ಅಡಿಕೆ - ಕಾಫಿ ಬೆಳೆಗಾರರ ಸಮಸ್ಯೆಗೆ ಪರಿಹಾರದಂತಹ ಕೆಲಸ ಕಾರ್ಯ ಮಾಡಲು ಸಹಕಾರಿಯಾಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಎಂಜಿನಿಯರಿಂಗ್, ಮೆಡಿಕಲ್ ಕಾಲೇಜು ಸ್ಥಾಪನೆ ಸಾಧ್ಯವಾಗಲಿದೆ ಎಂದರು.

ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಉಸ್ತುವಾರಿ, ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಕಾಂಗ್ರೆಸ್ ಪಕ್ಷ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರಭಾವಶಾಲಿಯಾಗಿದೆ. ಕಾರಣಾಂತರಗಳಿಂದ ಕೆಲವು ಚುನಾವಣೆಗಳಲ್ಲಿ ಸೋತಿರಬಹುದು. ಈ ಬಾರಿ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಉತ್ತಮ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ರಾಜ್ಯದಲ್ಲಿ 17 ಸ್ಥಾನ ಗೆಲ್ಲುತ್ತೇವೆ ಎಂದು ಗುಪ್ತಚರ ಇಲಾಖೆ ವರದಿ ಬಂದಿದೆ. ಆ 17 ಕ್ಷೇತ್ರಗಳಲ್ಲಿ ‌ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವೂ ಒಂದು ಎಂದರು.

ಉಡುಪಿ ಜಿಲ್ಲೆ ಸ್ಥಾಪನೆ ಆಗಿದ್ರೆ ಅದು ಜಯಪ್ರಕಾಶ್ ಹೆಗ್ಡೆಯವರ ಕೊಡುಗೆ, ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಕೊಡುಗೆ ಏನಿಲ್ಲ, ತಮ್ಮದೇ ಪಕ್ಷದವರಿಂದ ಗೋಬ್ಯಾಕ್ ಹೇಳಿಸಿ ಅವರು ಕ್ಷೇತ್ರವನ್ನೇ ಬದಲಾಯಿಸಬೇಕಾಯಿತು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕಮಗಳೂರು ಜಿಲ್ಲೆಯ ಶಾಸಕರಾದ ರಾಜೇಶಗೌಡ, ಜಿ.ಎಚ್. ಶ್ರೀನಿವಾಸ್, ಎಚ್.ಡಿ.ತಮ್ಮಯ್ಯ ಮತ್ತು ನಯನ ಮೋಟಮ್ಮ, ಮಾಜಿ ಸಚಿವೆ ಮೋಟಮ್ಮ, ಮಾಜಿ ಶಾಸಕರಾದ ಗೋಪಾಲ ಪೂಜಾರಿ ಮತ್ತು ಬಿ.ಎಂ.ಸುಕುಮಾರ್ ಶೆಟ್ಟಿ, ಎಂ.ಎ.ಗಫೂರ್, ಮುನಿಯಾಲು ಉದಯಕುಮಾರ್ ಶೆಟ್ಟಿ, ಡಾ. ಅಂಶುಮಂತ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ರಮೇಶ್ ಕಾಂಚನ್, ಗೀತಾ ವಾಗ್ಳೆ ಮೊದಲಾದವರಿದ್ದರು.