ಮುಡಾ ಹಗರಣ : ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡದಿದ್ದರೆ ಸಿಬಿಐಗೆ ವಹಿಸಲಿ - ಪ್ರಹ್ಲಾದ ಜೋಶಿ

| Published : Sep 29 2024, 01:55 AM IST / Updated: Sep 29 2024, 12:06 PM IST

Prahlad Joshi

ಸಾರಾಂಶ

ಸಿದ್ದರಾಮಯ್ಯ ವಿರುದ್ಧದ ಕೇಸಿಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಕೇಸಿಗೂ ವ್ಯತ್ಯಾಸವಿದೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವಧಿಯಲ್ಲಿ ಕೂಡ ಎಲೆಕ್ಟ್ರೋಲ್‌ ಬಾಂಡ್‌ನಲ್ಲಿ ಹಣ ತೆಗೆದುಕೊಂಡಿದ್ದಾರೆ.

ಹುಬ್ಬಳ್ಳಿ: ಮುಡಾ ಹಗರಣದಲ್ಲಿ ಸಿಲುಕಿದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡದಿದ್ದರೆ ಸಿಬಿಐ ತನಿಖೆಗೆ ವಹಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸವಾಲು ಎಸೆದಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಇಲ್ಲವೇ, ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯ ಮಾಡಿದರು.

ಮುಡಾ ಹಗರಣದ ಎ-1 ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಗಿರುವುದರಿಂದ ಇಲ್ಲಿಯ ಅಧಿಕಾರಿಗಳು ಸರಿಯಾದ ತನಿಖೆ ಮಾಡಲ್ಲ. ಪರಿಣಾಮ ಸತ್ಯ ಹೊರಬರುವುದಿಲ್ಲ ಎಂದರು.

ಇತ್ತೀಚೆಗಷ್ಟೇ ಲೋಕಾಯುಕ್ತಕ್ಕೆ ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದಾರೆ. ಹೀಗಿರುವಾಗ ಸಿಎಂ ವಿರುದ್ಧ ಲೋಕಾಯುಕ್ತ ಎಸ್ಪಿ ಆಗಲಿ, ಕರ್ನಾಟಕ ಪೊಲೀಸ್ ಆಗಲಿ ಪಾರದರ್ಶಕ ತನಿಖೆ ನಡೆಸುವುದು ಅಸಾಧ್ಯದ ಮಾತು. ಹಾಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಇಲ್ಲವೇ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಂಧನ ಕಾನೂನಿಗೆ ಬಿಟ್ಟ ವಿಷಯ. ಆದರೆ, ಅವರದ್ದೇ ಸರ್ಕಾರ ಇರುವುದರಿಂದ ಪ್ರಕರಣ ಸುದೀರ್ಘವಾಗಲಿದೆ. ನಮ್ಮ ಹೋರಾಟವೂ ಮುಂದುವರಿಯಲಿದೆ ಎಂದು ತಿಳಿಸಿದರು.

2011ರಲ್ಲಿ ರಾಜ್ಯಪಾಲರು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು ಇದೇ ಕಾಂಗ್ರೆಸ್ ನಾಯಕರು ಹೇಳಿದ್ದರು. ಈಗ ತಮ್ಮ ವಿರುದ್ಧ ತನಿಖೆಗೆ ಅನುಮತಿ ನೀಡಿದಾಕ್ಷಣ ರಾಜ್ಯಪಾಲರು ಸಂವಿಧಾನ ಮೀರಿದ್ದಾರೆ ಎನ್ನುತ್ತಿದ್ದಾರೆ. ಇದು ಕಾಂಗ್ರೆಸ್ಸಿಗರ ಅವಕಾಶವಾದಿತನ ಹಾಗೂ ಸಮಯ ಸಾಧಕ ಪ್ರವೃತ್ತಿ ತೋರುತ್ತದೆ ಎಂದರು.

ಕೋರ್ಟ್‌ ಸುದೀರ್ಘ ವಿಚಾರಣೆ ನಡೆಸಿ ಇವರದು ತಪ್ಪು ಎಂದು ತೀರ್ಪು ಕೊಟ್ಟ ಮೇಲೂ ಷಡ್ಯಂತ್ರ ಅಂತ ಹೇಳುತ್ತಾರೆ. ₹ 62 ಕೋಟಿ ಮೌಲ್ಯದ 14 ಸೈಟ್‌ ಪಡೆದುಕೊಂಡಿದ್ದಾರೆ. ಕೋರ್ಟ್‌ ಆದೇಶದಲ್ಲಿ ಕೋಟ್‌ ಮಾಡಿದೆ. ಆದರೂ ಇವರು ಪ್ರತಿದಿನ ರಾಜ್ಯಪಾಲರನ್ನು ಬೈಯುತ್ತಾರೆ. ಏನಿದು ನಾನ್ಸೆನ್ಸ್‌ ಎಂದು ಜೋಶಿ ಕಿಡಿಕಾರಿದರು.

ಸಿದ್ದರಾಮಯ್ಯ ವಿರುದ್ಧದ ಕೇಸಿಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಕೇಸಿಗೂ ವ್ಯತ್ಯಾಸವಿದೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವಧಿಯಲ್ಲಿ ಕೂಡ ಎಲೆಕ್ಟ್ರೋಲ್‌ ಬಾಂಡ್‌ನಲ್ಲಿ ಹಣ ತೆಗೆದುಕೊಂಡಿದ್ದಾರೆ. ಅವರ ಮೇಲೂ ಎಫ್‌ಐಆರ್‌ ಮಾಡಬೇಕಾಗುತ್ತದೆ ಎಂದರು.

ಆಗೇಕೆ ಧ್ವನಿ ಎತ್ತಲಿಲ್ಲ?

2002ರಲ್ಲಿ ಗೋಧ್ರಾ ಘಟನೆ ಆದಾಗ ಸಿಎಂ ಆಗಿದ್ದ ನರೇಂದ್ರ ಮೋದಿ ರಾಜೀನಾಮೆ ನೀಡಲಿಲ್ಲ ಎಂದಿರುವ ಸಿದ್ದರಾಮಯ್ಯ ಆಗ ಏಕೆ ಅವರ ವಿರುದ್ಧ ಧ್ವನಿ ಎತ್ತಲಿಲ್ಲ? ಎಂದು ಪ್ರಶ್ನಿಸಿದ ಜೋಶಿ, ಆಗ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಅದರಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದ್ದು ಕಾಂಗ್ರೆಸ್ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸರ್ವರನ್ನೂ ಸಾಮಾಜಿಕ ನ್ಯಾಯದಲ್ಲೇ ಕಾಣುತ್ತಿದ್ದಾರೆ. ಗೋದ್ರಾ, ಗೋದ್ರೋತ್ತರ ಘಟನೆಗಳಲ್ಲಿ ಮೋದಿ ಅವರ ಪಾತ್ರವೇ ಇಲ್ಲವೆಂದು ಸ್ಪಷ್ಟಪಡಿಸಿದರು.