ಸಾರಾಂಶ
ಮುಂಡಗೋಡ: ಕಬ್ಬು ಬೆಳೆಗಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಯಾವ ಕಾರಣಕ್ಕೆ ಸಮಸ್ಯೆಯಾಗುತ್ತಿದೆ ಎಂಬುದರ ಬಗ್ಗೆ ರೈತರು ಮೊದಲು ಅರ್ಥ ಮಾಡಿಕೊಳ್ಳಬೇಕು. ಕೇವಲ ಸಕ್ಕರೆ ಕಾರ್ಖಾನೆಯವರು ಕಬ್ಬಿಗೆ ₹೧೦೦ ದರ ಜಾಸ್ತಿ ಮಾಡುವುದರಿಂದ ರೈತ ಸಮುದಾಯದ ಅಭಿವೃದ್ಧಿ ಅಸಾಧ್ಯ. ಬದಲಾಗಿ ಸ್ಥಳಿಯವಾಗಿ ಕಬ್ಬು ಕಟಾವು ಮಾಡುವ ತಂಡ ತಯಾರಾಗಬೇಕು. ಆಗ ಮಾತ್ರ ರೈತರು ಹೆಚ್ಚಿನ ಲಾಭ ಗಳಿಸಲು ಸಾಧ್ಯ ಎಂದು ವಿಐಎನ್‌ಪಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ವಿವೇಕ ಹೆಬ್ಬಾರ ತಿಳಿಸಿದರು.
ಮುಂಡಗೋಡ ಗಡಿ ಭಾಗದ ವಿಐಎನ್‌ಪಿ ಸಕ್ಕರೆ ಕಾರ್ಖಾನೆಯಲ್ಲಿ ಆಯೋಜಿಸಿದ್ದ ೨೦೨೩- ೨೪ನೇ ಸಾಲಿನ ಕಬ್ಬಿನ ಹಂಗಾಮು ರೈತರನ್ನು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಮಿಕ ವರ್ಗವಿದ್ದರೂ ಕಬ್ಬನ್ನು ಕಟಾವು ಮಾಡಲು ಮಹಾರಾಷ್ಟ್ರದ ಕಾರ್ಮಿಕರನ್ನು ಅವಲಂಬಿಸುವ ಪರಿಸ್ಥಿತಿ ಎದುರಾಗಿದೆ. ಇದನ್ನು ಹೋಗಲಾಡಿಸಬೇಕಾದರೆ ಸ್ಥಳಿಯವಾಗಿ ಕಬ್ಬು ಕಟಾವು ಮಾಡುವ ತಂಡ ತಯಾರಾಗಬೇಕಿದೆ. ಇದರಿಂದ ಸ್ಥಳಿಯರಿಗೆ ಕೆಲಸ ಸಿಗುತ್ತದೆ ಹಾಗೂ ರೈತರಿಗೂ ವೆಚ್ಚ ಕಡಿಮೆ ಲಾಭ ಹೆಚ್ಚುತ್ತದೆ ಎಂದರು.
ಕಬ್ಬಿನ ಕಟಾವಿನ ವೆಚ್ಚ ಕಡಿಮೆಯಾದರೆ ಅದರ ನೇರವಾದ ಲಾಭ ರೈತರ ಜೇಬಿಗೆ ಹೋಗುತ್ತದೆ ಎಂಬುದು ಪ್ರತಿಯೊಬ್ಬ ರೈತರು ತಿಳಿದುಕೊಳ್ಳಬೇಕು. ಕಬ್ಬಿನ ಬೆಲೆ ನಿಗದಿ ವಿಚಾರದಲ್ಲಿ ದೇಶದಲ್ಲಿ ಒಂದು ವ್ಯವಸ್ಥೆ ಇದೆ. ಅದನ್ನು ಮೀರಿ ಯಾವ ಫ್ಯಾಕ್ಟರಿಯವರು ಏನು ಮಾಡಲು ಸಾಧ್ಯವಿಲ್ಲ.ಕತ್ತರಿಸಿದ ಕಬ್ಬಿನ ಕುಳೆಯನ್ನೇ ಮತ್ತೆ ಮತ್ತೆ ಬಿತ್ತನೆ ಮಾಡುವುದರಿಂದ ಇಳುವರಿ ಕಡೆಮೆಯಾಗುತ್ತದೆ. ಹಾಗಾಗಿ ಉತ್ತಮ ಬೀಜ ಬಿತ್ತನೆ ಮಾಡಿ ಹೆಚ್ಚು ಇಳುವರಿ ಪಡೆಯುವ ಹಾಗೂ ವೆಚ್ಚ ಕಡಿಮೆಗೊಳಿಸುವ ಅಂಶಗಳ ಮೇಲೆ ಗಮನಹರಿಸಿದರೆ ರೈತರು ಹೆಚ್ಚಿನ ಲಾಭ ಪಡೆಯಲು ಸಾಧ್ಯವಿದೆ. ಕಾರ್ಖಾನೆಯಿಂದ ರೈತರಿಗೆ ಏನು ಸಹಾಯ ಮಾಡಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ರೈತ ಮುಖಂಡ ಭುವನೇಶ್ವರ ಶೀಡ್ಲಾಪುರ, ರುದ್ರಪ್ಪ ಬಳಿಗಾರ, ಮುತ್ತಣ್ಣ ಗುಡಗೇರಿ, ಶಂಕರಗೌಡ ಪಾಟೀಲ, ಚನ್ನಬಸಪ್ಪ ಹಾವಣಗಿ, ಸಕ್ಕರೆ ಕಾರ್ಖಾನೆಯ ಸಮಸ್ತ ವ್ವಸ್ಥಾಪಕ ಗಂಗಾರಾಮ ಜುಮನಾಳ ಮುಂತಾದವರು ಉಪಸ್ಥಿತರಿದ್ದರು. ಲಕ್ಷ್ಮಣ ಎಮ್ಮಿನವರ ಸ್ವಾಗತಿಸಿದರು. ಬಿ.ಬಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುತ್ತುರಾಜ ಗುಳೇದಗುಡ್ಡ ನಿರೂಪಿಸಿದರು. ಶರಣಪ್ಪ ಕೋಡಹಳ್ಳಿ ವಂದಿಸಿದರು.