ಪ್ರಯತ್ನ ಪ್ರಬಲವಾದರೆ ಕಷ್ಟಗಳಿಗೆ ಸೋಲು: ಗಂಗಾಧರೇಂದ್ರ ಸರಸ್ವತೀ ಶ್ರೀ

| Published : Aug 23 2024, 01:00 AM IST

ಪ್ರಯತ್ನ ಪ್ರಬಲವಾದರೆ ಕಷ್ಟಗಳಿಗೆ ಸೋಲು: ಗಂಗಾಧರೇಂದ್ರ ಸರಸ್ವತೀ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಆತ್ಮಶಕ್ತಿ ಎಂದರೆ ನಿರುತ್ಸಾಹ ಮಾಡಿಕೊಳ್ಳದೇ ಮುಂದೆ ಕೆಲಸ ಮಾಡುವಂತಹ ಸಂಕಲ್ಪ ಶಕ್ತಿ. ಅದರಿಂದಲೇ ಅನೇಕ ಸಲ ಗೆಲ್ಲಲು ಸಾಧ್ಯ ಎಂದು ಸ್ವರ್ಣವಲ್ಲೀ ಶ್ರೀಗಳು ತಿಳಿಸಿದರು.

ಶಿರಸಿ: ಮನುಷ್ಯನ ಜೀವನ ಎನ್ನುವುದು ಒಂದು ರೀತಿಯಲ್ಲಿ ಹೋಯ್ದಾಟ. ನಮ್ಮ ಪ್ರಯತ್ನ, ಈಶ್ವರ ಇಚ್ಛೆ, ಅದೃಷ್ಟ ಇವು ಮೂವರು ಪರಸ್ಪರ ಕಚ್ಚಾಟ ಮಾಡಿಕೊಳ್ಳುತ್ತಿದ್ದಾರೆ. ಈ ಮೂವರ ಪೈಕಿ ಪುರುಷ ಪ್ರಯತ್ನ ಎನ್ನುವುದು ಸನ್ಮಾರ್ಗದಲ್ಲಿ ನಡೆದರೆ ಅದಕ್ಕೆ ಹೆಚ್ಚಿಗೆ ಬಲ ಬರಲು ಸಾಧ್ಯವಿದೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ತಮ್ಮ ಹಾಗೂ ಮಠದ ಕಿರಿಯ ಶ್ರೀಗಳಾದ ಆನಂದಬೊಧೇಂದ್ರ ಸರಸ್ವತೀ ಸ್ವಾಮೀಜಿಗಳ ಚಾತುರ್ಮಾಸ ವ್ರತಾಚರಣೆಯಲ್ಲಿ ಕಿಸಲವಾಡ ಸೀಮೆಯ ಶಿಷ್ಯರ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.ಆಧ್ಯಾತ್ಮಿಕ ಸಾಧನೆಯ ಕ್ಷೇತ್ರದಲ್ಲೂ ತೊಡಕುಗಳು ಇರುತ್ತವೆ. ಕರ್ತವ್ಯಗಳ ತೊಡಕುಗಳು, ದುರದೃಷ್ಟಗಳ ತೊಡಕುಗಳು ಬರುತ್ತವೆ. ಇವುಗಳೆಲ್ಲ ನಮ್ಮ ಹಿಂದಿನ ಜನ್ಮದ ಅದೃಷ್ಟಗಳ ಕಾರಣದಿಂದ ಬರುತ್ತವೆ. ಇಲ್ಲವೋ ದೈವ ಇಚ್ಛೆಯಿಂದ ಬರುತ್ತದೆ. ಅವುಗಳನ್ನು ತೀವ್ರವಾದ ಪುರುಷ ಪ್ರಯತ್ನದ ಮೂಲಕ ದಾಟಲು ಸಾಧ್ಯವಿದೆ ಎಂದರು.

ನಿನ್ನ ಆತ್ಮಶಕ್ತಿಯಿಂದ ದೈವವನ್ನೂ ಗೆದ್ದು ಮುಂದೆ ಹೋಗು ಎಂಬುದಾಗಿ. ಆತ್ಮಶಕ್ತಿ ಎಂದರೆ ನಿರುತ್ಸಾಹ ಮಾಡಿಕೊಳ್ಳದೇ ಮುಂದೆ ಕೆಲಸ ಮಾಡುವಂತಹ ಸಂಕಲ್ಪ ಶಕ್ತಿ. ಅದರಿಂದಲೇ ಅನೇಕ ಸಲ ಗೆಲ್ಲಲು ಸಾಧ್ಯ ಎಂದರು.

ಯೋಗವಾಸಿಷ್ಠ ಗ್ರಂಥವು ಪುರುಷ ಪ್ರಯತ್ನದ ಮಹತ್ವವನ್ನು ತುಂಬಾ ದೀರ್ಘವಾಗಿ ಕೊಂಡಾಡುತ್ತದೆ. ನಮ್ಮ ಜೀವನದಲ್ಲಿ ಯಾವುದು ಪ್ರಬಲವೋ ಅದು ಗೆಲ್ಲುತ್ತದೆ. ಯಾವುದು ದುರ್ಲಭವೋ ಅದು ಸೋಲುತ್ತದೆ. ಆದ್ದರಿಂದ ಪ್ರಯತ್ನವನ್ನು ಪ್ರಬಲವಾಗಿಸಿಕೊಳ್ಳಬೇಕು. ಶಾಸ್ತ್ರಗಳು ಇದಕ್ಕೆ ಉಪಾಯಗಳನ್ನು ಹೇಳುತ್ತವೆ. ಆ ಉಪಾಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಪ್ರಯತ್ನವನ್ನು ಬಲಪಡಿಸಿಕೊಳ್ಳಲು ಸಾಧ್ಯವಿದೆ. ನಮ್ಮ ಪ್ರಯತ್ನದಿಂದಲೇ ಕಷ್ಟಗಳನ್ನು ದಾಟಲು ಸಾಧ್ಯವಾಗುತ್ತದೆ. ಪುಣ್ಯ ಮತ್ತು ಪಾಪ ಕರ್ಮ ಇವೆರಡರಲ್ಲಿ ಪಾಪ ಕರ್ಮವು ನಮಗೆ ಬಾಧಕವಾಗುತ್ತದೆ. ಅವುಗಳನ್ನು ಈಗಿನ ಕರ್ಮಗಳನ್ನು ಮಾಡುವುದರ ಮೂಲಕ ಅದರಿಂದ ಗೆಲ್ಲಬೇಕು ಎಂದರು.ಸೀಮೆಯ ಪ್ರಮುಖರಾದ ವಿಶ್ವನಾಥ ಹೆಗಡೆ, ಪ್ರಶಾಂತ ಭಟ್ಟ, ಗಣಪತಿ ಭಟ್ ಇತರರು ಇದ್ದರು.