ತಿಂಗಳೊಳಗೆ ಕಾಂತರಾಜ್ ವರದಿ ಜಾರಿಗೊಳಿಸದಿದ್ದರೆ ಹೋರಾಟ

| Published : Jan 03 2025, 12:32 AM IST

ಸಾರಾಂಶ

ಚಾಮರಾಜನಗರದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ₹೧೦೯ ಕೋಟಿ ವೆಚ್ಚ ಮಾಡಿ ರಚಿಸಿದ ಕಾಂತರಾಜ ಆಯೋಗವು ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಯನ್ನು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಆ ಆಯೋಗದ ಶಿಫಾರಸ್ಸುಗಳನ್ನು ತಕ್ಷಣ ಜಾರಿ ಮಾಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರುಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಣಾಳಿಕೆಯಲ್ಲಿಯೂ ಸಹ ಸದಾಶಿವ ಆಯೋಗದ ವರದಿ ಹಾಗೂ ಕಾಂತರಾಜ್ ವರದಿಯನ್ನು ಅಧಿಕಾರಕ್ಕೆ ಬಂದರೆ ತಕ್ಷಣ ಜಾರಿ ಮಾಡುವುದಾಗಿ ಪ್ರಕಟಿಸಿತ್ತು. ಆದರೆ ಅಧಿಕಾರಕ್ಕೆ ಬಂದು ೨೧ ತಿಂಗಳು ಕಳೆದರೂ ಇದುವರೆಗೆ ಜಾರಿ ಮಾಡದೇ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.ಉಪ ಚುನಾವಣೆ ಸಂದರ್ಭದಲ್ಲೂ ಜಾರಿ ಮಾಡುತ್ತೇವೆ ಎಂದು ಹೇಳಿ ಈಗ ಸಬೂಬು ಹೇಳುತ್ತಿರುವುದು ಸರಿಯಲ್ಲ, ಇದಕ್ಕಾಗಿ ಒಂದು ತಿಂಗಳು ಗಡುವು ನೀಡುತ್ತೇವೆ, ಅಲ್ಲಿಯವರೆಗೆ ಜಾರಿ ಮಾಡದಿದ್ದರೆ, ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಯಾವುದೇ ಅಧಿಸೂಚನೆ ಬೇಡ:ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಯಾಗುವ ತನಕ ಯಾವುದೇ ನೇಮಕಾತಿ ಹಾಗೂ ಮುಂಬಡ್ತಿ ಮಾಡಲು ಯಾವುದೇ ಅಧಿಸೂಚನೆಯನ್ನು ಸರ್ಕಾರ ಹೊರಡಿಸಬಾರದೆಂದು ಆಗ್ರಹಿಸಿದರು. ರಾಜ್ಯ ಸಂಪುಟವು ೨೦೨೪ ರ ಅ.೨೮ ರಂದು ೨೦೨೪ರ ಆ.೧ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಎಸ್ಸಿ/ಎಸ್ಟಿ ಸಮುದಾಯಗಳಿಗೆ ಒಳಮೀಸಲಾತಿ ಕೊಡಲು ತಾತ್ವಿಕವಾಗಿ ಒಪ್ಪಿಗೆ ನೀಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ೨೦೨೪ರ ನ.೧೨ರ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಚ್.ಎನ್.ನಾಗಮೋಹನ್‌ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚಿಸಲಾಗಿದೆ. ಒಳಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆ ಹೊರಡಿಸಬಾರದೆಂದು ಸಚಿವ ಸಂಪುಟವು ನಿರ್ಧರಿಸಿದೆ. ಈ ನಿರ್ಣಯವನ್ನು ೨೦೨೪ ಅ.೨೮ರ ಕಾನೂನು ಸಚಿವ ಎಚ್.ಕೆ.ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.ಸಂಪುಟದ ಈ ಆದೇಶವನ್ನು ೧೫ ದಿನಗಳ ನಂತರ ಸಮಾಜ ಕಲ್ಯಾಣ ಇಲಾಖೆಯು ತಡವಾಗಿ ೨೦೨೪ ಡಿ .೧೩ ರ ಡಿಪಿಎಆರ್ ಇಲಾಖೆಗೆ ರವಾನಿಸಿದ್ದು, ಡಿಪಿಎಆರ್ ಇಲಾಖೆಯು ಮತ್ತೆ ಎರಡು ವಾರಗಳ ಕಾಲ ವಿಳಂಬ ಮಾಡಿ ೨೦೨೪ ನ.೨೫ ರಂದು ಎಲ್ಲಾ ಇಲಾಖೆಗಳಿಗೆ ಸೂಚಿಸಿದೆ. ಈ ವಿಳಂಬವನ್ನು ದುರುಪಯೋಗ ಮಾಡಿಕೊಂಡಿರುವ ಹಲವಾರು ಇಲಾಖೆಗಳು ದಿ.೨೮-೧೦-೨೦೨೪ ರಿಂದ ೨೫-೧೧-೨೦೨೪ರ ವರೆಗೆ ನೇರ ನೇಮಕಾತಿಗಳ ಪ್ರಕ್ರಿಯೆ ಪ್ರಾರಂಭಿಸಲು ಹೊಸ ಅಧಿಸೂಚನೆಗಳನ್ನು ಹೊರಡಿಸಿವೆ. ಇದು ಅತ್ಯಂತ ಖಂಡನೀಯ ಕ್ರಮ ಎಂದು ದೂರಿದರು.

೨೦೨೪ ಅ.೨೮ರ ನಿರ್ಣಯಾನುಸಾರ ೨೦೨೪.ಅ.೨೮ ರಿಂದ ಇಲ್ಲಿಯ ತನಕ ವಿವಿಧ ಇಲಾಖೆಗಳು ನೇರ ನೇಮಕಾತಿಗಾಗಿ ಹೊರಡಿಸಿರುವ ಎಲ್ಲ ಹೊಸ ಅಧಿಸೂಚನೆಗಳನ್ನು ಹಿಂಪಡೆದು ಒಳಮೀಸಲಾತಿ ಜಾರಿಯಾಗುವವರೆಗೂ ನೇರ ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು. ಪರಿಶಿಷ್ಟ ಜಾತಿಗಳ ಜನಸಂಖ್ಯೆಗೆ ಸಂಬಂಧಿಸಿದ ನಿಖರ ದತ್ತಾಂಶವನ್ನು ಸಂಗ್ರಹಿಸಿ ವರದಿ ನೀಡಲೆಂದೇ ನ್ಯಾ.ನಾಗಮೋಹನ್ ದಾಸ್ ಆಯೋಗವನ್ನು ರಚಿಸಲಾಗಿತ್ತು. ಒಳಮೀಸಲಾತಿ ಆದೇಶವನ್ನು ಅನಿರ್ದಿಷ್ಟ ಮುಂದೂಡುವ ಹುನ್ನಾರವೇ ಆಗಿದೆ. ಒಳಮೀಸಲಾತಿ ಆದೇಶವನ್ನು ಪ್ರಾಮಾಣಿಕವಾಗಿ ಜಾರಿಮಾಡುವ ಉದ್ದೇಶವಿದ್ದರೇ ಅತ್ಯಂತ ವೈಜ್ಞಾನಿಕವಾದ ವರದಿ ಸಲ್ಲಿಸಿರುವ ನ್ಯಾ.ಸದಾಶಿವ ಆಯೋಗವು ನೀಡಿರುವ ದತ್ತಾಂಶವನ್ನೇ ಪರಿಗಣಿಸಬೇಕು ಎಂದರು.

ರಾಜ್ಯಸಭೆಯಲ್ಲಿ ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಬೇಕು. ತಪ್ಪಿದ್ದಲ್ಲಿ ಪ್ರಧಾನಮಂತ್ರಿ ಮೋದಿಯವರೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ನೇಮಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಸಂಯೋಜಕ ಎಂ.ಗೋಪಿನಾಥ್, ರಾಜ್ಯ ಸಂಯೋಜಕ ಆರ್.ಮುನಿಯಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ನಾಗೇಶ್, ಅನ್ನದಾನಪ್ಪ, ಹನುಮಂತು, ಜಿಲ್ಲಾ ಉಸ್ತುವಾರಿ ಎಚ್.ಸೀಗನಾಯಕ, ಜಿಲ್ಲಾಧ್ಯಕ್ಷ ರಾಜೇಂದ್ರ ಸಿದ್ದಾರ್ಥ ಇದ್ದರು.