- ಸ್ವಾಮೀಜಿಗಳ ಪೂರ್ವಾಶ್ರಮದ ಹೆತ್ತವರು, ಕುಟುಂಬಕ್ಕೆ ಇನ್ನು ನಾವೆಲ್ಲಾ ಆಸರೆ: ಅರವಿಂದ ಲಿಂಬಾವಳಿ ಘೋಷಣೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾವಿ ಕುಲವು ಒಂದಾಗದಿದ್ದರೆ ಆಪತ್ತು ಕಟ್ಟಿಟ್ಟ ಬುತ್ತಿ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೂಚ್ಯವಾಗಿ ಎಚ್ಚರಿಸಿದ್ದಾರೆ.

ನಗರದ ಯರಗುಂಟೆ ಗ್ರಾಮದಲ್ಲಿ ಕುಂಚಿಟಿಗ ಸಮಾಜದಿಂದ ಭೋವಿ ಪೀಠದ ಶ್ರೀಗಳ ಪೂರ್ವಾಶ್ರಮದ ಹೆತ್ತವರಿಗೆ ಕುಟೀರ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವಿ ಕುಲವು ಒಂದಾಗಬೇಕಾದ ಅನಿವಾರ್ಯತೆ ಇಂದು ಹೆಚ್ಚಾಗಿದೆ ಎಂದರು.

ಬಾಲ್ಯ ಸ್ನೇಹಿತ ಸ್ವಾಮೀಜಿಯ ಪೂರ್ವಾಶ್ರಮದ ಹೆತ್ತವರಿಗೆ ಸಮುದಾಯದ ನೆರವಿನಿಂದ ಮನೆ ದಾನ ಮಾಡಿರುವ ಮಾದರಿ ನಡೆ ಇದಾಗಿದೆ. ಇಲ್ಲಿ ಜಾತಿ ಮೀರಿದ ಪ್ರೀತಿ, ವಾತ್ಸಲ್ಯ, ಸ್ನೇಹವಿದೆ. ಇಮ್ಮಡಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ ಸ್ನೇಹ ಎಲ್ಲರಿಗೂ ಸ್ಫೂರ್ತಿಯಾಗಿದೆ. ಈ ಮಾನವೀಯ ಕಾರ್ಯ ಮುಂದಿನ ಬದಲಾವಣೆಗೆ ಮೊದಲ ಹೆಜ್ಜೆಯಾಗಿದೆ ಎಂದು ಶ್ಲಾಘಿಸಿದರು.


ಸಮಾರಂಭ ಉದ್ಘಾಟಿಸಿದ ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಇಂತಹದ್ದೊಂದು ಕಾರ್ಯಕ್ರಮ ಖುಷಿ ನೀಡಿದರೂ, ಮತ್ತೊಂದು ಕಡೆ ನಮಗೆ ಮುಜುಗರಕ್ಕೆ ತಳ್ಳಿದಂತಿದೆ. ನಿಮ್ಮ ಸ್ವಾಮೀಜಿ ಪೂರ್ವಾಶ್ರಮದ ಹೆತ್ತವರಿಗೆ ಮನೆ ಕಟ್ಟುವ ಸಾಮರ್ಥ್ಯ ನಿಮ್ಮ ಸಮಾಜಕ್ಕೆ ಇಲ್ಲವೇ ಎಂಬುದಾಗಿ ಕೇಳಿದಂತಿದೆ. ನಮಗೆ ಒಂದು ಮಾತನ್ನೂ ಹೇಳದೇ, ವೇದಿಕೆ ಮೇಲೆ ಕೂರಿಸಿದರು. ಮುಂದೆ ಯಾರ ಮನೆ ಕಟ್ಟುತ್ತೀರೋ ಆ ಜವಾಬ್ದಾರಿ ನಿಮ್ಮದಲ್ಲ. ನಿಮ್ಮ ಸಮಸಮಾಜ ಕಟ್ಟುವ ಕೆಲಸಕ್ಕೆ ಚ್ಯುತಿ ಬರಬಾರದು ಎಂದರು.

ಇನ್ನು ಮುಂದೆ ಯಾವ ಸ್ವಾಮೀಜಿಗಳ ಪೂರ್ವಾಶ್ರಮದ ಹೆತ್ತವರು, ಕುಟುಂಬ ವರ್ಗ ತೊಂದರೆಯಲ್ಲಿದೆ ನಮಗೆ ಹೇಳಿ. ನಾನೇ ಈ ಬಗ್ಗೆ ನೇತೃತ್ವ ವಹಿಸುತ್ತೇನೆ. ಎಲ್ಲ ಸಮುದಾಯಗಳ ಮುಖಂಡರ ಬಳಗ ಕಟ್ಟಿಕೊಂಡು, ಅಂತಹ ಸ್ವಾಮೀಜಿಗಳ ಪೂರ್ವಾಶ್ರಮದವರಿಗೆ ಸೂರು ಕಲ್ಪಿಸುವ ಕೆಲಸದ ಹೊಣೆ ಹೊರುತ್ತೇವೆ. ಇಂದು ಬುದ್ಧ ಪೌರ್ಣಿಮೆ. ನಮಗೆ ನೀವೆಲ್ಲಾ ಸ್ವಾಮೀಜಿಗಳು ಜ್ಞಾನೋದಯ ಮಾಡಿದ್ದೀರಿ. ಯಾವ ಸ್ವಾಮೀಜಿಗಳ ಪೂರ್ವಾಶ್ರಮದವರಿಗೆ ಸಮಸ್ಯೆ ಇದ್ದರೆ ನಮಗೆ ಹೇಳಿ, ನಾವೇ ನೋಡಿಕೊಳ್ಳುತ್ತೇವೆ ಎಂದು ಘೋಷಿಸಿದರು.

ಸ್ವಾಮೀಜಿಗಳ ಪೂರ್ವಾಶ್ರಮದ ಪಾಲಕರ ಸಮಸ್ಯೆಗಳನ್ನು ಮಠಾಧೀಶರು ತೆಗೆದುಕೊಳ್ಳುವುದು ಬೇಡ. ನಾವು ಅದನ್ನು ಮಾಡುತ್ತೇವೆ. ಆರೋಗ್ಯ ಸಮಸ್ಯೆ, ಮನೆ ಸಮಸ್ಯೆ ಇರುವರನ್ನು ನೋಡಿಕೊಳ್ಳಲು ನಾವು ಸಿದ್ಧರಿದ್ದೇವೆ. ಇದಕ್ಕಾಗಿ ಸಮಿತಿಯೊಂದನ್ನು ಮಾಡಿ. ಹೊಳಲ್ಕೆರೆ ತಾ. ತಾಳಿಕಟ್ಟೆಯಲ್ಲಿ ಈಶ್ವರಾನಂದಪುರಿ ಸ್ವಾಮೀಜಿ ಪೂರ್ವಾಶ್ರಮದ ಪಾಲಕರ ಮನೆ ಕಟ್ಟುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಮತಾಂತರ ಆದವರನ್ನು ವಾಪಾಸ್ ಹಿಂದೂ ಧರ್ಮಕ್ಕೆ ಕರೆ ತರುವ ಕೆಲಸ ಪೇಜಾವರ ಸ್ವಾಮೀಜಿ ಮಾಡಿದ್ದರು. ಈ ಕಾರ್ಯವನ್ನು ಎಲ್ಲ ಮಠಾಧೀಶರು ಮಾಡಿದ್ದರು. ಯಾರು ಯಾರು, ಯಾವ್ಯಾವ ಧರ್ಮಗಳಿಗೆ ಮತಾಂತರ ಆಗಿದ್ದರೋ ಅಂತಹವರನ್ನು ವಾಪಾಸ್ಸು ಮಾತೃಧರ್ಮ, ಹಿಂದೂ ಧರ್ಮಕ್ಕೆ ಕರೆ ತರುವ ಕೆಲಸವಾಗಲಿ. ಬೇರೆ ಧರ್ಮದವರಿಂದ ಹಿಂದೂ ಧರ್ಮಕ್ಕೆ ಸಮಸ್ಯೆ ಇಲ್ಲ. ನಮ್ಮ ಧರ್ಮದಲ್ಲೇ ಇರುವಂತಹ ಮನಸ್ಥಿತಿಯಿಂದಾಗಿ ಸಮಸ್ಯೆಗಳಿವೆ. ಅದೆಲ್ಲವನ್ನೂ ನಿವಾರಿಸೋಣ ಎಂದು ಅವರು ಹೇಳಿದರು.

ಮಂತ್ರಾಲಯದ ಶ್ರೀ ಮಠದ ಬಗ್ಗೆ ತಪ್ಪು ಕಲ್ಪನೆ ಸಮಾಜದಲ್ಲಿ ಇದೆ. ಪೂಜೆ ಮಾಡುವಾಗ ಮಾತ್ರ ಅಲ್ಲಿ ಸ್ವಾಮೀಜಿ ಮಡಿಯಲ್ಲಿರುತ್ತಾರೆ. ಇದನ್ನು ಹೋಗಲಾಡಿಸುವ ಕಾರ್ಯವನ್ನು ಮಾಡಲಾಗಿದೆ. ಬೇರೆ ಧರ್ಮಕ್ಕಿಂತ ಹಿಂದೂ ಧರ್ಮದ ಉಪ ಜಾತಿಗಳಿಂದ ದೊಡ್ಡದಾದ ಅಪಾಯವಿದೆ. ರಾಜಕಾರಣ ಇನ್ನೂ ಹೆಚ್ಚಿನ ಮಾಡುತ್ತಿದೆ. ಮಂತ್ರಾಲಯದ ಶ್ರೀಗಳೂ ಶ್ರೀಮಠದಲ್ಲಿ ಬದಲಾವಣೆಗೆ ಮುಂದಾಗಿದ್ದಾರೆ. ಎಲ್ಲ ಕಡೆಯಿಂದಲೂ ಬದಲಾವಣೆ ಆಗುವಂತಾಗಲಿ ಆಗಲಿ ಎಂದು ಅರವಿಂದ ಲಿಂಬಾವಳಿ ಮನವಿ ಮಾಡಿದರು.

ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ನನಗೂ ಸಹ ಇಲ್ಲಿ ಗೃಹಪ್ರವೇಶ ಕಾರ್ಯಕ್ರಮವಿದೆ ಎಂಬುದೇ ಗೊತ್ತಿರಲಿಲ್ಲ. ರಾಜಕಾರಣಿಗಳಲ್ಲೂ ಇಲ್ಲದಂತಹ ಒಗ್ಗಟ್ಟನ್ನು ವೇದಿಕೆ ಮೇಲಿರುವ ಸ್ವಾಮೀಜಿಗಳಲ್ಲಿದೆ. ಲಕ್ಷಾಂತರ ವೇತನ ಪಡೆಯುವ ನೌಕರರೂ ತಮ್ಮ ಹೆತ್ತವರಿಗೆ ಊಟ ಹಾಕುವುದಿಲ್ಲ. ಆದರೆ, ಈ ಸ್ವಾಮೀಜಿಗಳು ಮಾದರಿಯಾಗಿದ್ದಾರೆ. ಯಾವ್ಯಾವ ಸ್ವಾಮೀಜಿಗಳ ಪೂರ್ವಾಶ್ರಮದ ಹೆತ್ತವರು, ಕುಟುಂಬ ವರ್ಗದವರಿಗೆ ಅಗತ್ಯವಿದೆ ಹೇಳಿದರೆ, ತಾವೂ ಸಹ ಕೈ ಜೋಡಿಸುತ್ತೇನೆ ಎಂದು ಭರವಸೆ ನೀಡಿದರು.

ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ಮಾತನಾಡಿ, ಎಲ್ಲ ಸಮುದಾಯಗಳ ಬಂಧುಗಳಾಗಿ ಬದುಕಬೇಕೆಂಬ ಸಂದೇಶವನ್ನು ವೇದಿಕೆ ನೀಡಿದೆ. ಎಲ್ಲರೂ ಒಂದೇ ಎಂಬ ಭಾವನೆ ಮೂಡಿದೆ. ಈ ಬಾಂಧವ್ಯ ಹೀಗೆಯೇ ಮುಂದುವರಿಯಲಿ. ನಾಡಿನ ಎಲ್ಲರಿಗೂ ತಿಳಿವಳಿಕೆ ಆಗಬೇಕು. ಮಠಾಧೀಶರ ಪೂರ್ವಾಶ್ರಮದ ಪಾಲಕರನ್ನು ಸಮುದಾಯ ಪೋಷಿಸಲಿ ಎಂದು ಮನವಿ ಮಾಡಿದರು.

ಬಿಜೆಪಿ ಮುಂಖಂಡ ಲಿಂಗಮೂರ್ತಿ ಮಾತನಾಡಿ, ಇತಿಹಾಸದ ಪುಟದಲ್ಲಿ ಉಳಿಯುವಂತಹ ಕೊಡುಗೆಯನ್ನು ಕುಂಚಿಟಿಗ ಸಮುದಾಯದ ಇಲ್ಲಿ ನೀಡಿದೆ. ಮಠಾಧೀಶರು ಬಡ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಈ ಎಲ್ಲ ಸ್ವಾಮೀಜಿಗಳ ಒಗ್ಗಟ್ಟು ಎಲ್ಲರಿಗೂ ಪ್ರೇರಣೆಯಾಗಿದೆ. ಸಮಾಜ ಕಟ್ಟುವವರು ಬಡವರೇ ಹೊರತು ಶ್ರೀಮಂತರಲ್ಲ ಎಂದರು.

- - -

* (ಗಣ್ಯರ ಕೋಟ್ಸ್‌) ಸನಾತನ ಧರ್ಮಕ್ಕೆ ಬೇರೆ ಧರ್ಮದಿಂದ ಅಪಾಯ ಇಲ್ಲ. ಆದರೆ, ಧಾರ್ಮಿಕ ಅಸಮತೋಲನವೇ ದೊಡ್ಡ ಸವಾಲಾಗಿದೆ. ಏಕತೆ ಇಲ್ಲದಂತಾಗಿದೆ. ಆದರೆ, ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಇದಕ್ಕೆ ತದ್ವಿರುದ್ಧವಾಗಿದೆ. ಇನ್ನು ಪೂರ್ವಾಶ್ರಮದ ಪಾಲಕರನ್ನು ನೋಡಿಕೊಳ್ಳುವ ಜವಾಬ್ದಾರಿ ಸಮುದಾಯದ್ದು. ಇದು ಪಾಲನೆಯಾಗಿಲ್ಲ. ಮೇಲು-ಕೀಳು ಅಸಮಾನತೆ ಹೋಗಲಾಡಿಸದಿದ್ದರೆ ಹಿಂದೂ ಧರ್ಮಕ್ಕೆ ಅಪಾಯವಿದೆ. ತಳ ಸಮುದಾಯ ಭಾರತೀಯ ಪರಂಪರೆ ಬಿಟ್ಟು ಬೇರೆ ಮತಕ್ಕೆ ಹೋಗುವ ರೀತಿ ಕಾಣುತ್ತಿದೆ. ಈ ಎಲ್ಲ ಸ್ವಾಮೀಜಿಗಳ ಒಗ್ಗಟ್ಟು ಸಾಮಾಜಿಕ ಆಂದೋಲನದ ರೀತಿಯಲ್ಲಿ ಆಗಬೇಕು.

- ರವಿ ಹೆಗಡೆ, ಪ್ರಧಾನ ಸಂಪಾದಕ, ಏಷ್ಯಾನೆಟ್‌ ಕನ್ನಡಪ್ರಭ-ಸುವರ್ಣ ನ್ಯೂಸ್‌.

- - - ತಳ ಸಮುದಾಯದ ಬಹಳಷ್ಟು ಜನರು ಅನ್ಯ ಧರ್ಮಕ್ಕೆ ಹೋಗುತ್ತಿದ್ದಾರೆ. ಇದೊಂದು ಸೂಕ್ಷ್ಮ ವಿಚಾರ. ರಾಷ್ಟ್ರೀಯತೆಗೆ ವಿಮುಖರಾಗಿ ಹೋಗುತ್ತಿದ್ದಾರೆ ಎಂಬುದನ್ನು ನೋಡಬೇಕು. ದೇಗುಲ, ಮಠ, ಮನೆ ಪ್ರವೇಶ ಮಾಡಿದ ಕಾರಣಕ್ಕೆ ದೌರ್ಜನ್ಯ ಮಾಡಿದ ಕಾರಣಕ್ಕಾಗಿ ವಿಮುಖರಾಗುತ್ತಿದ್ದಾರೆ. ಇದು ಹೀಗಾಗಬಾರದು. ತಳ ಸಮುದಾಯನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು. ಜಾತಿಯ ಸೋಂಕು ನಮಗೆ ಅರಿವಿಲ್ಲದೇ ಅನುಭವಿಸಿದ್ದೇವೆ. ಇದು ಹೀಗೆ ಆಗಬಾರದು, ಮುಂದುವರಿಯಬಾರದು.

- ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಮಾದಾರ ಚನ್ನಯ್ಯ ಗುರುಪೀಠ, ಚಿತ್ರದುರ್ಗ.

- - - ನಮ್ಮಲ್ಲಿ ಯಾವುದೇ ಕಲ್ಮಶ ಇಲ್ಲ. ಒಂದೇ ತಾಯಿಯ ಮಕ್ಕಳ ರೀತಿಯಲ್ಲಿ ನಾವೆಲ್ಲರೂ ಬದುಕಿದ್ದೇವೆ. ಸನ್ಯಾಸ ದೀಕ್ಷೆ ಪಡೆದ ಬಳಿಕ ಪೂರ್ವಾಶ್ರಮದ ನೆರಳು ಸಹ ನಮ್ಮ ಮೈಮೇಲೆ ಬೀಳದಷ್ಟು ಎಚ್ಚರಿಕೆಯಿಂದ ಬದುಕುತ್ತಿದ್ದೇವೆ. ಸಮಾಜಕ್ಕೆ ಜ್ಞಾನೋದಯ ಆಗಬೇಕು. ಬಸವಣ್ಣ, ಅಂಬೇಡ್ಕರ್ ಸೇರಿ ಯಾರನ್ನೂ ಈ ಸಮಾಜವು ಬಿಟ್ಟಿಲ್ಲ. ನಿಂದನೆಗಳಿಗೆ ಕುಗ್ಗದೇ, ಹಿಗ್ಗದೇ ಬದುಕುತ್ತಿದ್ದೇವೆ. - ಶ್ರೀ ವಚನಾನಂದ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ.

- - -

(-ಫೋಟೋಗಳಿವೆ.)