ರೈತರ ಸಮಸ್ಯೆ ಬಗೆಹರಿಸದಿದ್ದರೆ ತಾಲೂಕು ಕಚೇರಿಗೆ ಮುತ್ತಿಗೆ

| Published : May 12 2024, 01:19 AM IST

ರೈತರ ಸಮಸ್ಯೆ ಬಗೆಹರಿಸದಿದ್ದರೆ ತಾಲೂಕು ಕಚೇರಿಗೆ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತ ರೈತರ ಸಭೆ ಕರೆದು ಎರಡು ಇಲಾಖೆಗಳ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ಗುರುವಾರ ಅರಣ್ಯ ಇಲಾಖೆ ಮತ್ತು ತಾಲೂಕು ಕಚೇರಿಗೆ ಮುತ್ತಿಗೆ ಹಾಕುವುದಾಗಿ ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಎಚ್ಚರಿಕೆ ನೀಡಿದರು.

ಕನಕಪುರ: ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತ ರೈತರ ಸಭೆ ಕರೆದು ಎರಡು ಇಲಾಖೆಗಳ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ಗುರುವಾರ ಅರಣ್ಯ ಇಲಾಖೆ ಮತ್ತು ತಾಲೂಕು ಕಚೇರಿಗೆ ಮುತ್ತಿಗೆ ಹಾಕುವುದಾಗಿ ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಎಚ್ಚರಿಕೆ ನೀಡಿದರು.

ನಗರದ ರೈತ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಮನಗರ ಜಿಲ್ಲೆ ಮತ್ತು ಕನಕಪುರ ತಾಲೂಕಿನಲ್ಲಿ ಇತ್ತೀಚೆಗೆ ಕಾಡಾನೆಗಳ ಉಪಟಳ ಮಿತಿಮೀರಿದೆ. ಕಾಡಾನೆಗಳ ದಾಳಿಯಿಂದ ರಾಮನಗರ ಜಿಲ್ಲೆಯಲ್ಲಿ ರೈತರ ಸರಣಿ ಸಾವುಗಳು ಸಂಭವಿಸುತ್ತಿವೆ. ಇಷ್ಟಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆಕೋಶ ವ್ಯಕ್ತಪಡಿಸಿದರು.

ಕಳೆದ ಮೂರು ದಿನಗಳ ಹಿಂದೆ ನಗರದ ಕೂಗಳತೆ ದೂರದಲ್ಲಿರುವ ಶ್ರೀನಿವಾಸನಹಳ್ಳಿ ಗ್ರಾಮದ ರೇಷ್ಮೆ ತೋಟದಲ್ಲಿ ರೈತನ ಮೇಲೆ ಹಾಡಹಗಲೇ ಕಾಡಾನೆ ದಾಳಿ ನಡೆಸಿ ಭಯ ಹುಟ್ಟಿಸಿದೆ. ಘಟನೆಯಲ್ಲಿ ರೈತ ಗಂಭೀರವಾಗಿ ಗಾಯಗೊಂಡಿದ್ದ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಏನಾಗಿದೆ ಎಂದು ನೋಡುವ ಸೌಜನ್ಯವನ್ನೂ ತೋರಲಿಲ್ಲ. ಹಾಗಾದರೆ ರೈತರ ಪ್ರಾಣಕ್ಕೆ ಬೆಲೆ ಇಲ್ಲವೇ ರೈತರಿಂದ ಕಾಡುಪ್ರಾಣಿಗಳಿಗೆ ತೊಂದರೆಯಾದರೆ ಅರಣ್ಯ ಇಲಾಖೆ ಅಧಿಕಾರಿಗಳು ಸುಮ್ಮನೆ ಇದ್ದು ಬಿಡುವರೆ? ಎಂದು ಪ್ರಶ್ನೆ ಮಾಡಿದರು.

ಕಾಡಾನೆಗಳು ನಾಡಿಗೆ ಬರದಂತೆ ತಡೆಗಟ್ಟ ಬೇಕಾದ ಸೋಲಾರ್ ವ್ಯವಸ್ಥೆ ಹಾಳಾಗಿದೆ. ಟ್ರಂಚ್ ವ್ಯವಸ್ಥೆ ಸರಿ ಇಲ್ಲ. ಕಾಡಂಚಿಗೆ ಬರುವ ಕಾಡಾನೆಗಳ ಚಲನವಲನ ಗಳ ಮೇಲೆ ನಿಗಾ ವಹಿಸುವುದಿಲ್ಲ. ಅರಣ್ಯ ಇಲಾಖೆಯ ವಾಚರ್‌ಗಳು ಕಾಡಾನೆಗಳ ಚಲನವಲಗಳ ಮೇಲೆ ನಿಗಾ ವಹಿಸಿ ನಿಯಂತ್ರಣ ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಸರ್ಕಾರ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗೆ ಎಲ್ಲಾ ರೀತಿ ಸೌಲಭ್ಯ ಕೊಟ್ಟಿದ್ದರು ಅಧಿಕಾರಿಗಳು ತಮ್ಮ ಕೆಲಸ ಮಾಡದೆ ಇದ್ದ ಮೇಲೆ ಅರಣ್ಯ ಇಲಾಖೆ ಇದ್ದೇನು ಪ್ರಯೋಜನ? ಇಂತಹ ಒಂದು ಅರಣ್ಯ ಇಲಾಖೆ ಯಾಕೆ ಬೇಕು ಎಂದು ಪ್ರಶ್ನೆ ಮಾಡಿದರು.

ಲೋಕಸಭೆ ಚುನಾವಣೆ ಮುಗಿದು 15 ದಿನ ಕಳೆದರೂ ಚುನಾವಣೆ ಗುಂಗಿನಿಂದ ಸರ್ಕಾರಿ ಇಲಾಖೆ ಅಧಿಕಾರಿಗಳು ಹೊರಬಂದಿಲ್ಲ. ಚುನಾವಣೆಯ ನೆಪ ಹೇಳಿಕೊಂಡು ಸಾರ್ವಜನಿಕರ, ರೈತರ ಕೆಲಸ ಕಾರ್ಯ ಮಾಡಿಕೊಡದೆ ಕಾಲಹರಣ ಮಾಡುತ್ತಿದ್ದಾರೆ. ರೈತರು ತಾಲೂಕು ಕಚೇರಿಗೆ ಅಲೆದಾಡುತ್ತಿದ್ದರು. ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಸರ್ಕಾರಿ ಇಲಾಖೆ ಅಧಿಕಾರಿಗಳು ಚುನಾವಣೆ ಗುಂಗಿನಿಂದ ಮೊದಲು ಹೊರಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರರು ತಾಲೂಕು ಕಚೇರಿಗೆ ಯಾವಾಗ ಬರುತ್ತಾರೆ? ಯಾವಾಗ ಹೋಗುತ್ತಾರೆ ? ತಿಳಿಯುವುದೇ ಇಲ್ಲ ಸಾರ್ವಜನಿಕರಿಗಾಗಿ ಸಮಯ ನಿಗದಿ ಮಾಡಿ ಜನರ ಸಮಸ್ಯೆಗಳನ್ನು ಆಲಿಸಿ ಅದನ್ನು ಬಗೆಹರಿಸಬೇಕಾದಂತಹ ತಾಲೂಕಿನ ದಂಡಾಧಿಕಾರಿಗಳು ಯಾರು ಎಂದು ಜನರಿಗೆ ಪರಿಚಯವೇ ಇಲ್ಲ. ತಾಲೂಕಿಗೆ ಬಂದು ವರ್ಷ ಕಳೆದರೂ ಇನ್ನು ತಾಲೂಕಿನ ಜನರಿಗೆ ಅಪರಿಚಿತರಂತೆ ಇದ್ದಾರೆಂದು ದೂರಿದರು.

ಈ ಹಿಂದೆ ಇದ್ದ ಎಲ್ಲ ತಹಸೀಲ್ದಾರರು 6 ತಿಂಗಳಿಗೊಮ್ಮೆ ರೈತರ ಕುಂದು ಕೊರತೆ ಸಭೆ ನಡೆಸಿ ಸಮಸ್ಯೆ ಗಳನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದರು. ಆದರೆ ಪ್ರಸ್ತುತ ಇರುವ ತಹಸೀಲ್ದಾರರು ಬಂದು ಒಂದು ವರ್ಷ ಕಳೆದಿದ್ದರೂ ರೈತರ ಕುಂದು ಕೊರತೆ ಸಭೆ ಕರೆದಿಲ್ಲ. ತಹಸೀಲ್ದಾರರು ಮತ್ತು ಅರಣ್ಯ ಇಲಾಖೆ ಡಿಎಫಒ ಅಧಿಕಾರಿಗಳು ಮುಂದಿನ ಗುರುವಾರದ ಒಳಗೆ ರೈತರ ಸಭೆ ಕರೆದು ಸಮಸ್ಯೆಗಳನ್ನು ಆಲಿಸಿ ಬಗೆಹರಿಸದಿದ್ದರೆ ರೈತ ಸಂಘ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲಿದ್ದು ತಾಲೂಕು ಕಚೇರಿ ಮುಂದೆ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಭೆಯಲ್ಲಿ ರೈತ ಸಂಘದ ತಾಲೂಕು ಕಾರ್ಯದರ್ಶಿ ಅಭಿಷೇಕ್, ಮುಖಂಡ ಸುರೇಶ್, ಪುಟ್ಟ ಮಾದೇಗೌಡ, ಮರಿಲಿಂಗೇಗೌಡ, ಮರಿಗೌಡ, ಬೈರೇಗೌಡ, ಪುಟ್ಟ ಮಾದೇಗೌಡ, ಮಾರೇಗೌಡ, ಸುರೇಶ್, ಮಾದೇಶ್, ಶಿವಲಿಂಗೇಗೌಡ, ಚಂದ್ರ, ಚೇತನ್, ವರುಣ್, ರೈತ ಮುಖಂಡರು ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 02: ಕನಕಪುರ ರೈತ ಸಂಘದ ಕಚೇರಿಯಲ್ಲಿ ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿದರು. ಕಾರ್ಯದರ್ಶಿ ಅಭಿಷೇಕ್, ಮುಖಂಡ ಸುರೇಶ್, ಪುಟ್ಟ ಮಾದೇಗೌಡ, ಮರಿಲಿಂಗೇಗೌಡ, ಮರಿಗೌಡ, ಬೈರೇಗೌಡ, ಪುಟ್ಟ ಮಾದೇಗೌಡ ಇತರರಿದ್ದರು.