- ತಾಲೂಕು ಪಂಚಾಯಿತಿ ಸಾಮಾರ್ಥ್ಯ ಸೌಧದಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಸರ್ಕಾರಿ ಕಚೇರಿಗೆ ಸಾರ್ವಜನಿಕರು ಅರ್ಜಿ ಸಲ್ಲಿಸಿದಾಗ ತಪ್ಪದೆ ಹಿಂಬರಹ ನೀಡಬೇಕು ಎಂದು ಚಿಕ್ಕಮಗಳೂರು ಲೋಕಾಯುಕ್ತ ಕಚೇರಿ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಸರ್ಕಾರಿ ನೌಕರರಿಗೆ ಸೂಚಿಸಿದರು.

ಮಂಗಳವಾರ ತಾಪಂ ಸಾಮರ್ಥ್ಯ ಸೌಧದಲ್ಲಿ ಲೋಕಾಯುಕ್ತ ಡಿವೈ.ಎಸ್.ಪಿ ತಿರುಮಲೇಶ್ ಅಧ್ಯಕ್ಷತೆ ಯಲ್ಲಿ ನಡೆದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಮಾತನಾಡಿ ಸರ್ಕಾರಿ ನೌಕರರು ಕಚೇರಿಗೆ ಬಂದ ಸಾರ್ವಜನಿಕರಿಗೆ ಗೌರವ ನೀಡಬೇಕು. ಲೋಕಾಯುಕ್ತರು ಮಾಹಿತಿ ಕೇಳಿದರೆ ಸೂಕ್ತ ದಾಖಲೆ ನೀಡಬೇಕು.ಕಂದಾಯ ಇಲಾಖೆ ಹಾಗೂ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಕಡತ ಲಭ್ಯವಿಲ್ಲ ಎಂದು ಬರೆದುಕೊಡುತ್ತಾರೆ. ಈ ಬಗ್ಗೆ ಕಡತ ಏನಾಗಿದೆ ಎಂದು ಸೂಕ್ತ ಉತ್ತರ ನೀಡಬೇಕು ಎಂದು ಸೂಚಿಸಿದರು.

ಅಧಿಕಾರಿಗಳಿಂದ ಅಧಿಕಾರ ದುರುಪಯೋಗವಾಗಿದೆ ಎಂದು ದೂರುಗಳು ಬಂದಿದೆ. ಸಾರ್ವಜನಿಕರು ಸಂಬಂಧಪಟ್ಟ ದಾಖಲೆ ನೀಡಿದರೆ ಕ್ರಿಮಿನಲ್ ಕೇಸು ದಾಖಲಿಸುತ್ತೇವೆ. ಸಾರ್ವಜನಿಕರು ದೂರು ನೀಡಲು ಜಿಲ್ಲಾ ಕೇಂದ್ರಕ್ಕೆ ಬರಲು ಸಾಧ್ಯವಾಗದಿದ್ದರೆ ಅಂಚೆ ಮೂಲಕ ರಿಜಿಸ್ಟರ್ ಪೋಸ್ಟ್ ಮಾಡಬಹುದು. ಲೋಕಾಯುಕ್ತರ ಹೆಸರಿನಲ್ಲಿ ಯಾರಾದರೂ ದೂರವಾಣಿ ಕರೆ ಮಾಡಿದರೆ ತಕ್ಷಣ ನಮ್ಮ ಗಮನಕ್ಕೆ ತನ್ನಿ ಎಂದು ಅಧಿಕಾರಿಗಳಿಗೆ ತಿಳಿಸಿದರು.


ಸಾರ್ವಜನಿಕರು ಯಾವುದೇ ದೂರು ನೀಡಬೇಕಾದರೂ ಸಂಬಂಧಪಟ್ಟ ಫಾರಂನಲ್ಲಿ ದಾಖಲೆಯೊಂದಿಗೆ ನೀಡಬೇಕು. ದಾಖಲೆ ಸಮೇತ ಭ್ರಷ್ಟಾಚಾರದ ವಿರುದ್ಧ ದೂರು ನೀಡಿದರೆ ತನಿಖೆ ಮಾಡಿ ಎಫ್.ಐ.ಆರ್ ಹಾಕುತ್ತೇವೆ. ಅನೇಕರು ಸರಿ ಯಾದ ದಾಖಲೆ ನೀಡದೆ ಮದ್ಯದಲ್ಲೇ ಕೇಸಿನಿಂದ ಹಿಂದಕ್ಕೆ ಸರಿಯುತ್ತಾರೆ. ಎನ್.ಆರ್.ಪುರದಲ್ಲಿ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದ ಶಿಕ್ಷಣ ಇಲಾಖೆ ಜಮೀನನ್ನು ಒತ್ತುವರಿದಾರರಿಂದ ಬಿಡಿಸಲಾಗಿತ್ತು ಎಂದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಇ.ಒ. ನವೀನ್ ಕುಮಾರ್, ತಹಸೀಲ್ದಾರ್ ಡಾ.ನೂರಲ್ ಹುದಾ ಇದ್ದರು. ಜನ ಸಂಪರ್ಕ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಪಿಡಿಒ ಗಳು ಭಾಗವಹಿಸಿದ್ದರು. ಲೋಕಾಯುಕ್ತ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ 8 ಅರ್ಜಿಗಳು ಬಂದಿದ್ದು ಬಹುತೇಕ ಕಂದಾಯ ಇಲಾಖೆ ಬಗ್ಗೆ ಅರ್ಜಿ ನೀಡಿದ್ದಾರೆ.

ತಾಪಂ ಇ.ಓ ಮಾತನಾಡಿ, ಹಾವುಗೊಲ್ಲರಿಗೆ ಮನೆ ಕಟ್ಟಿಕೊಳ್ಳಲು ನಿವೇಶನ ಮಂಜೂರಾಗಿದೆ. 3 ತಿಂಗಳ ಹಿಂದೆ ಜಾತಿ ಸರ್ಟಿಫಿಕೇಟ್ ನೀಡಲಾಗಿದೆ. ಪ್ರತಿ ಮನೆ ಕಟ್ಟಿಕೊಳ್ಳಲು ₹1.20 ಲಕ್ಷ ನೀಡಲಾಗುವುದು. ಆ ಹಣ ಸಾಕಾಗುವುದಿಲ್ಲ. ಆದ್ದರಿಂದ ಎನ್.ಜಿ.ಓ ಹಾಗೂ ದಾನಿಗಳು ಮುಂದೆ ಬರಬೇಕು ಎಂದರು.

ಮೇದರ ಬೀದಿಯ ಮಂಜುನಾಥ್ ಮಾತನಾಡಿ, ಲಿಂಗಾಪುರ ಗ್ರಾಮದಲ್ಲಿ ಕೈಗಾರಿಕೆ ಇಲಾಖೆ ಸರ್ಕಾರದ 10 ಎಕರೆ ಜಮೀನು ಖರೀದಿ ಮಾಡಿದ್ದು ಕಾಮಗಾರಿ ಮುಗಿದು 15 ವರ್ಷ ಆಗಿದೆ. ಅರಣ್ಯ ಜಾಗ ಎಂದು ಕೈಗಾರಿಕೆ ನಿಲ್ಲಿಸ ಲಾಗಿದೆ.ಅದು ಅರಣ್ಯ ಜಾಗವಲ್ಲ. ಸರ್ಕಾರದ ಕೋಟ್ಯಾಂತರ ರು. ಪೋಲಾಗಿದ್ದು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಅಳಲಗೆರೆಯ ಚೆರಿಯನ್ ಮಾತನಾಡಿ, ಸರ್ಕಾರ ಅರಣ್ಯ ಹಾಗೂ ಕಂದಾಯ ಭೂಮಿ ಗುರುತಿಸಲು ಎಸ್.ಐ.ಟಿ.ರಚನೆ ಮಾಡಿದೆ. ಈಗ ಯಾವ ಹಂತದಲ್ಲಿದೆ. ಬಾಳೆಕೊಪ್ಪದಲ್ಲಿ ಹಾವುಗೊಲ್ಲರು 10 ವರ್ಷದಿಂದ ಮುಚ್ಚಿದ ಶಾಲಾ ಆವರಣದಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ವಾಸಮಾಡುತ್ತಿದ್ದಾರೆ. ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದರು.

ಕೊಪ್ಪ ಎ.ಪಿ.ಎಂ.ಸಿ.ಸದಸ್ಯ ಎಚ್.ಎಂ.ಶಿವಣ್ಣ ಮಾತನಾಡಿ,ಜಂಟಿ ಸರ್ವೆ ವಿಳಂಬವಾಗುತ್ತಿದೆ.ಇದರಿಂದ ಬಡವರಿಗೆ ಅನ್ಯಾಯವಾಗುತ್ತಿದೆ ಎಂದರು.ಶೆಟ್ಟಿಕೊಪ್ಪ ಸುರೇಶ್ ಮಾತನಾಡಿ,ಗ್ರಾಮ ಸಭೆಯಲ್ಲಿ ಕೆಲವು ವಿಷಯ ಪ್ರಸ್ತಾಪ ಮಾಡಿದ್ದಕ್ಕೆ ಹಾಗೂ ಸಣ್ಣ ವಿಷಯಕ್ಕೆ ಕೆಲವರು ಪೊಲೀಸರಿಗೆ ದೂರು ನೀಡಿದ್ದಾರೆ. ಹಿಂದಿನ ಪೊಲೀಸ್ ಅಧಿಕಾರಿ ನನಗೆ ತೀವ್ರ ತೊಂದರೆ ಕೊಟ್ಟಿದ್ದರು. ಜಿಲ್ಲೆ ಹಾಗೂ ರಾಜ್ಯ ಪೊಲೀಸ್ ದೂರು ಪ್ರಾಧೀಕಾರಕ್ಕೂ ಸಹ ದೂರು ನೀಡಿದ್ದೇನೆ. ಆದರೂ ಪ್ರಯೋಜನವಾಗುತ್ತಿಲ್ಲ ಎಂದರು.

-- ಬಾಕ್ಸ್ -- 1963- 64 ರಲ್ಲಿ ಮಂಜೂರಾದ ಭೂಮಿಗೆ ಪೋಡಿ ಆಗಿಲ್ಲ. ಅಕ್ರಮ ಸಕ್ರಮ ಸಮಿತಿ ಕಂದಾಯ ಭೂಮಿ ಮಂಜೂರು ಮಾಡಲು ಅರಣ್ಯ ಇಲಾಖೆ ಒಪ್ಪಿಗೆ ಯಾಕೆ ಬೇಕು. ಸರ್ಕಾರದ ಗೈಡ್ ಲೆನ್ಸ್ ನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಬೇಕು ಎಂದು ಡಿ.ಎಸ್.ಎಸ್.ಮುಖಂಡರಾದ ಡಿ.ರಾಮು, ಮಂಜುನಾಥ್, ವಾಲ್ಮೀಕಿ ಶ್ರೀನಿವಾಸ್ ಹೇಳಿದರು.