ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

| Published : Apr 12 2024, 01:13 AM IST / Updated: Apr 12 2024, 11:47 AM IST

ಸಾರಾಂಶ

ಸಂವಿಧಾನದ ಹಾಗೂ ಜನಪರವಾಗಿದ್ದವರ ಮನೆ ಮೇಲೆ ದಾಳಿ ಮಾಡಿ ಜೈಲಿಗೆ ಹಾಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ ಆರೋಪಿಸಿದರು.

ಮುಂಡಗೋಡ: ಗ್ಯಾರಂಟಿ ಯೋಜನೆ ಜಾರಿ ಮಾಡಿದರೆ ರಾಜಕೀಯ ಸನ್ಯಾಸತ್ವ ಪಡೆಯುವುದಾಗಿ ಬಿಜೆಪಿಯವರು ಹೇಳಿದ್ದರು. ಬಡವರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದರೆ ಸರ್ಕಾರದ ಬೊಕ್ಕಸ ಖಾಲಿಯಾಗುತ್ತದೆ ಎಂದು ಬೊಬ್ಬೆ ಹೊಡೆಯುವ ಬಿಜೆಪಿಗರಿಗೆ ಅದಾನಿ, ಅಂಬಾನಿ, ಮಲ್ಯರಂಥ ಶ್ರೀಮಂತರ ಲಕ್ಷಾಂತರ ಕೋಟಿ ರುಪಾಯಿ ಸಾಲ ಮನ್ನಾ ಮಾಡಿದರೆ ಕೇಂದ್ರದ ಬೊಕ್ಕಸ ತುಂಬುತ್ತದೆಯೇ? ಎಂದು ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಸಂಜೆ ಪಟ್ಟಣದ ಲೊಯೋಲಾ ವಿಕಾಸ ಕೇಂದ್ರ ಸಭಾಂಗಣದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಪುತ್ರ, ಯುವ ಮುಖಂಡ ವಿವೇಕ್ ಹೆಬ್ಬಾರ್ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

400ಸ್ಥಾನ ಗೆದ್ದರೆ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳುತ್ತಿದ್ದಾರೆ. ಸಂವಿಧಾನ ಇಲ್ಲದಿದ್ದರೆ ಅವರೇ ಇರುತ್ತಿರಲಿಲ್ಲ. ಸಮಾಜದ ಪ್ರತಿಯೊಬ್ಬರಿಗೆ ಆರ್ಥಿಕ ಮತ್ತು ಸಾಮಾಜಿ ಶಕ್ತಿ ನೀಡಿದ್ದು ಸಂವಿಧಾನ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನದ ಹಾಗೂ ಜನಪರವಾಗಿದ್ದವರ ಮನೆ ಮೇಲೆ ದಾಳಿ ಮಾಡಿ ಜೈಲಿಗೆ ಹಾಕುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.

ವಿವೇಕ ಹೆಬ್ಬಾರ ಮಾತನಾಡಿ, ಭಗೀರಥನಂತೆ ಕೆಲಸ ಮಾಡಿದ ಶಾಸಕ ಶಿವರಾಮ ಹೆಬ್ಬಾರ ಅವರನ್ನು ಬಿಜೆಪಿ ನಡೆಸಿಕೊಂಡ ರೀತಿ ಹಾಗೂ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಯತ್ನಿಸಿದವರ ಮೇಲೆ ಕ್ರಮ ಕೈಗೊಳ್ಳುವ ಬದಲು ಅವರಿಗೆ ಉನ್ನತ ಸ್ಥಾನ ನೀಡುವ ಮೂಲಕ ಕಾರ್ಯಕರ್ತರಿಗೆ ನೋವುಂಟು ಮಾಡಲಾಗಿದೆ. ಇದರಿಂದ ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿರುವುದಾಗಿ ಹೇಳಿದ ಅವರು, ಕಾರ್ಯಕರ್ತರಿಗೆ ತೊಂದರೆಯಾದರೆ ಸಹಿಸುವುದಿಲ್ಲ. ಕಾರ್ಯಕರ್ತರ ರಕ್ಷಣೆ ತಮ್ಮ ಹೊಣೆ ಎಂದರು.ಇದೇ ಸಂದರ್ಭದಲ್ಲಿ ಪಪಂ ಮಾಜಿ ಅಧ್ಯಕ್ಷ ಫಣಿರಾಜ ಹದಳಗಿ, ಜಿಪಂ ಮಾಜಿ ಸದಸ್ಯ ರವಿಗೌಡ ಪಾಟೀಲ, ಧುರೀಣ ಉದಯ ಪಾಲೇಕರ ಸೇರಿದಂತೆ ಪಪಂ ಸದಸ್ಯರು, ಗ್ರಾಪಂ ಸದಸ್ಯರು ಸೇರಿದಂತೆ ಸಾವಿರಕ್ಕೂ ಅಧಿಕ ಜನ ಕಾಂಗ್ರೆಸ್ ಸೇರ್ಪಡೆಯಾದರು. ಮಾಜಿ ಶಾಸಕ ವಿ.ಎಸ್. ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎನ್. ದುಂಡಸಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಕೃಷ್ಣ ಹಿರೇಹಳ್ಳಿ, ಪ್ರಕಾಶ್ ಹೆಗಡೆ, ಮುನಾಪ ಮಿರ್ಜಾನಕರ, ಶಂಕರ ಪಾಟೀಲ, ವೆಂಕಟೇಶ ಹೆಗಡೆ ಹೊಸಬಾಳೆ, ಬಸವರಾಜ ನಡುವಿನಮನಿ, ಶಾರದಾ ರಾಠೋಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.