ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಸ್ಥಾಪನೆಗೊಂಡಿರುವ ಬಸವಣ್ಣನ ಪುತ್ಥಳಿ ಅನಾವರಣ ಹಾಗೂ ಭಗೀರಥ, ವಾಲ್ಮೀಕಿ ಮತ್ತು ಕನಕದಾಸರ ಪುತ್ಥಳಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಮುದಾಯಗಳ ಸ್ವಾಮೀಜಿಗಳನ್ನು ಆಹ್ವಾನಿಸದೇ ಇರುವುದು ಖಂಡನೀಯ. ಈ ಕಾರ್ಯಕ್ರಮಗಳನ್ನು ರದ್ದುಪಡಿಸದಿದ್ದರೆ ಏ.25 ರಂದು ಕಾರ್ಯಕ್ರಮಕ್ಕೆ ಬರುವ ಸಿಎಂ ಸಿದ್ದರಾಮಯ್ಯರಿಗೆ ಕಪ್ಪುಬಾವುಟ ಪ್ರದರ್ಶಿಸುವುದಾಗಿ ಡಾ.ಅಂಬೇಡ್ಕರ್ ಸ್ವಾಭಿಮಾನ–ಜಾಗೃತಿ ಅಭಿಯಾನ ಸಮಿತಿಯ ಸಿ.ಎಂ.ಕೃಷ್ಣ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಭವನದ ಆವರಣದಲ್ಲಿ ನಿರ್ಮಾಣಗೊಂಡಿರುವ ಬಸವೇಶ್ವರ ಪುತ್ಥಳಿಯು ಕಾನೂನು ಬಾಹಿರವಾಗಿ ಸ್ಥಾಪನೆಗೊಂಡಿದೆ. ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಅನಧಿಕೃತವಾಗಿ ಮುಚ್ಚುಮರೆ ಮಾಡಿ, ಸಾರ್ವಜನಿಕವಾಗಿ ತಿಳಿಸದೇ ಅಧಿಕೃತ ಆಹ್ವಾನ ಪತ್ರಿಕೆ ಹೊರಡಿಸದೇ ತರಾತುರಿಯಲ್ಲಿ ಉದ್ಘಾಟನೆಗೆ ಸಜ್ಜುಗೊಳಿಸಿರುವುದು ಖಂಡನೀಯ ಎಂದರು. ಶ್ರೀ ಭಗೀರಥ, ಶ್ರೀ ವಾಲ್ಮೀಕಿ ಮತ್ತು ಶ್ರೀ ಕನಕದಾಸರ ಪುತ್ಥಳಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸದರಿ ಸಮುದಾಯಗಳ ಗೌರವಾನ್ವಿತ ಸ್ವಾಮೀಜಿಗಳನ್ನು ಆಹ್ವಾನಿಸದೇ ಅಪಮಾನ ಉಂಟುಮಾಡಿ, ಸುತ್ತೂರು ಮಠ ಸ್ವಾಮೀಜಿಯನ್ನು ಮಾತ್ರ ಆಹ್ವಾನಿಸಿ, ತಾರತಮ್ಯ, ಸರ್ವಾಧಿಕಾರಿ ಧೋರಣೆಯನ್ನು ಜಿಲ್ಲಾಡಳಿತ ತಾಳಿದೆ ಎಂದು ಆರೋಪಿಸಿದರು. ಸರ್ಕಾರ ಮತ್ತು ಜಿಲ್ಲಾಡಳಿತ ಈ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಪ್ರತಿಮೆಯ ಉದ್ಘಾಟನೆ ಕಾರ್ಯಕ್ರಮವನ್ನು ಕೂಡಲೇ ರದ್ದುಗೊಳಿಸಲು ಸೂಕ್ತ ಕ್ರಮ ಕೈಗೊಂಡು ಮತ್ತು ಪ್ರತಿಮೆಯ ಸ್ಥಳಾಂತರಕ್ಕೆ ಕ್ರಮ ವಹಿಸಿಸಬೇಕೆಂದು ಆಗ್ರಹಿಸಿದರು.
ಪ್ರತಿಮೆ ಉದ್ಘಾಟಿಸಲು ಮುಂದಾದರೆ ಸಿಎಂಗೆ ಮತ್ತು ಇನ್ನಿತರೆ ಗಣ್ಯರಿಗೆ ಕಪ್ಪು ಬಾವುಟ ಪ್ರದರ್ಶನ ಮತ್ತು ಸಿಎಂಗೆ ಘೇರಾವ್ ಹಾಕುತ್ತೇವೆ ಎಂದರು. ವಾಜಮಂಗಲದಲ್ಲಿ ಡಾ.ಅಂಬೇಡ್ಕರ್ ಬ್ಯಾನರ್‌ಗೆ ಅವಮಾನ ಮಾಡಿರುವ ಕಿಡಿಗೇಡಿಗಳ ಬಂಧನಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕೆಂದು ಅಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಿಂಗರಾಜು, ಹೊಂಗನೂರು ನಟರಾಜು, ನಾ.ಅಂಬರೀಷ ನಾಗೇಶ್ ಭೋಗಾಪುರ ಇದ್ದರು.