ದೇಗುಲಗಳು ಉಳಿದರೆ ಧರ್ಮ, ಸಂಸ್ಕೃತಿ ರಕ್ಷಣೆ: ಶ್ರೀಕಾಂತ ನಿಂಬಾಳ

| Published : Feb 28 2024, 02:35 AM IST

ದೇಗುಲಗಳು ಉಳಿದರೆ ಧರ್ಮ, ಸಂಸ್ಕೃತಿ ರಕ್ಷಣೆ: ಶ್ರೀಕಾಂತ ನಿಂಬಾಳ
Share this Article
  • FB
  • TW
  • Linkdin
  • Email

ಸಾರಾಂಶ

ದೇವಸ್ಥಾನಗಳು ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಟ್ರಸ್ಟ್ ಸಹಾಯಹಸ್ತ ಚಾಚುತ್ತಿರುವುದು ಶ್ಲಾಘನೀಯ ಎಂದು ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಕಲಶೆಟ್ಟಿ, ಮುಖಂಡ ಶ್ರೀಕಾಂತ ನಿಂಬಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಚವಡಾಪುರ

ಧರ್ಮ, ನಮ್ಮ ಸಂಸ್ಕೃತಿ, ಸಂಪ್ರದಾಯಗಳ ರಕ್ಷಣೆಯಾಗಬೇಕಾದರೆ ದೇವಸ್ಥಾನಗಳು ಉಳಿಯಬೇಕು. ಈ ನಿಟ್ಟಿನಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ನವರು ಸಹಾಯ ಹಸ್ತ ಚಾಚುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಕಲಶೆಟ್ಟಿ, ಮುಖಂಡ ಶ್ರೀಕಾಂತ ನಿಂಬಾಳ ಹೇಳಿದರು.

ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದ ಚವಡೇಶ್ವರಿ ದೇವಸ್ಥಾನ ನಿರ್ಮಾಣ ಕಾರ್ಯ ನಡೆದಿದ್ದು ದೇವಸ್ಥಾನ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ 1.50 ಲಕ್ಷ ಧನಸಹಾಯದ ಚೆಕ್ ಪಡೆದು ಮಾತನಾಡಿದ ಅವರು, ಧರ್ಮಸ್ಥಳ ಸಂಸ್ಥೆಯವರು ನಿರಂತರವಾಗಿ ಧರ್ಮ ಜಾಗೃತಿ ಕಾರ್ಯದ ಜೊತೆಗೆ ಜನರನ್ನು ಆರ್ಥಿಕ ಸ್ವಾವಲಂಬಿಯಾಗಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಶಿವರಾಜ ಆಚಾರ್ಯ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಅಫಜಲ್ಪುರ ತಾಲೂಕಿಗೆ ಕಾಲಿಟ್ಟಾಗಿನಿಂದ ನಿರಂತರವಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಬಡದಾಳ ಗ್ರಾಮದಲ್ಲಿ ಟ್ರಸ್ಟ್ ವತಿಯಿಂದ ಕೆರೆ ನಿರ್ಮಿಸಲಾಗಿದೆ. ಕೆರೆಯಿಂದಾಗಿ ಈ ಭಾಗದ ಅಂತರ್ಜಲ ಮಟ್ಟ ಕುಸಿಯದಂತೆ ತಡೆಯಲು ಸಾಧ್ಯವಾಗಲಿದೆ. ಅಲ್ಲದೆ ಕೆರೆಯ ಸುತ್ತ ಗಿಡಮರಗಳನ್ನು ನೆಟ್ಟಿದ್ದರಿಂದ ಬಿಸಿಲಿನ ತಾಪ ಕಡಿಮೆಯಾಗುವುದಲ್ಲದೆ ಅರಣ್ಯ ರಕ್ಷಣೆಗೆ ಪ್ರೇರಣೆಯಾಗಿದೆ ಎಂದರು.

ನಮ್ಮ ಟ್ರಸ್ಟ್ ಅಡಿಯಲ್ಲಿ ಅನೇಕ ಮಹಿಳಾ ಸಂಘಗಳಿದ್ದು ಸಂಘಗಳಲ್ಲಿರುವ ಮಹಿಳೆಯರು ಸಾಲ ಪಡೆದು ಸ್ವಂತ ಉದ್ಯಮ ಸ್ಥಾಪಿಸಿ, ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಬಡದಾಳ ಗ್ರಾಮದಲ್ಲಿ 8 ಕೋಟಿ ವರೆಗೆ ಸಾಲ ಸೌಲಭ್ಯ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ರೇಖಾ ದೊಡ್ಮನಿ, ವಲಯ ಮೇಲ್ವಿಚಾರಕ ಮಲ್ಲಿಕಾರ್ಜುನ, ಪ್ರಮುಖರಾದ ಸಂಗಮನಾಥ ನಿಂಬಾಳ, ಚನ್ನಮಲ್ಲಪ್ಪ ಅಡಕಿ, ಜಗದೀಶ ಕಲ್ಲೂರ, ವಿದ್ಯಾವತಿ ಕಲಶೆಟ್ಟಿ, ಸುವರ್ಣ ಕಲಶೆಟ್ಟಿ, ಗುಂಡಮ್ಮ ಸಂತೋಷ ಸೇರಿದಂತೆ ಅನೇಕರು ಇದ್ದರು.