ತುಂಗಾ ನದಿ ರಕ್ಷಿಸದಿದ್ದಲ್ಲಿ ಕುಡಿವ ನೀರಿಗೂ ಕಂಟಕ: ದೀಪಾ ಶ್ರೀಧರ್

| Published : Feb 19 2024, 01:30 AM IST

ತುಂಗಾ ನದಿ ರಕ್ಷಿಸದಿದ್ದಲ್ಲಿ ಕುಡಿವ ನೀರಿಗೂ ಕಂಟಕ: ದೀಪಾ ಶ್ರೀಧರ್
Share this Article
  • FB
  • TW
  • Linkdin
  • Email

ಸಾರಾಂಶ

ಮಲೆನಾಡು ಮತ್ತು ಬಯಲುಸೀಮೆಯ ಜೀವನದಿಯಾಗಿರುವ ತುಂಗಾ ನದಿಯಲ್ಲಿ ಬೇಸಿಗೆಗೆ ಮುನ್ನವೇ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ ಎಂದು ಪರೋಪಕಾರಂ ದೀಪಾ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಲುಷಿತಗೊಳ್ಳುತ್ತಿರುವ ತುಂಗಾ ನದಿಯನ್ನು ಸಂರಕ್ಷಿಸದಿದ್ದಲ್ಲಿ ಕುಡಿಯುವ ನೀರಿಗೂ ಕಂಟಕ ಎದುರಾಗುವ ಸಾಧ್ಯತೆ ಇದೆ ಎಂದು ಪರೋಪಕಾರಂ ಕುಟುಂಬದ ದೀಪಾ ಶ್ರೀಧರ್ ಆತಂಕ ವ್ಯಕ್ತಪಡಿಸಿದರು.

ಪರೋಪಕಾರಂ ಕುಟುಂಬದ ವತಿಯಿಂದ ಹಮ್ಮಿಕೊಂಡಿದ್ದ 750ನೇ ಕಾರ್ಯಕ್ರಮದ ಭಾಗವಾಗಿ ಭಾನುವಾರ ಆಯೋಜಿಸಿದ್ದ ನಗರದ ಗುಂಡಪ್ಪ ಶೆಡ್‍ನ ಮಲ್ಲೇಶ್ವರ ನಗರದ ಮ್ಯೂಸಿಕ್ ಪಾರ್ಕ್‍ನಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮಲೆನಾಡು ಮತ್ತು ಬಯಲುಸೀಮೆಯ ಜೀವನದಿಯಾಗಿರುವ ತುಂಗಾ ನದಿಯಲ್ಲಿ ಬೇಸಿಗೆಗೆ ಮುನ್ನವೇ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ. ತುಂಗೆಯ ಒಡಲಿಗೆ ನಗರ, ಪಟ್ಟಣಗಳ ಕೊಳಚೆ ನೀರು ಸೇರುತ್ತಿದೆ. ಅಲ್ಲದೆ ನದಿ ಪಾತ್ರದಲ್ಲಿ ಸುರಿಯಲಾಗುತ್ತಿರುವ ಭಾರೀ ಪ್ರಮಾಣದ ತ್ಯಾಜ್ಯ ನದಿ ನೀರನ್ನು ಕಲುಷಿತಗೊಳಿಸುತ್ತಿದೆ ಎಂದರು. ಇದನ್ನು ತಡೆಗಟ್ಟಲು ಸರ್ಕಾರ, ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ತುಂಗಾನದಿಯ ಜಲ ಮಾಲಿನ್ಯ ನಿಯಂತ್ರಣಕ್ಕಾಗಿ ಪರೋಪಕಾರಂ ಕುಟುಂಬ ಸಹ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಗತ್ಯ ಸಹಕಾರ ಹಾಗೂ ಆದ್ಯತೆ ನೀಡಲಿದೆ ಎಂದು ಹೇಳಿದರು.ಹಣ- ಅಧಿಕಾರ, ಪ್ರಚಾರ- ಪ್ರಸಿದ್ಧಿ, ಪ್ರಶಸ್ತಿ- ಪುರಸ್ಕಾರದ ವ್ಯಾವೋಹವಿಲ್ಲದೆ ನಿಸ್ವಾರ್ಥ ಮನಸ್ಸಿನಿಂದ ಸಾಮಾಜಿಕ ಸೇವೆ ಮಾಡಬೇಕು. ಇಂತಹ ಸೇವೆಯಿಂದ ಮಾನಸಿಕ ಸಂತೃಪ್ತಿ ದೊರೆಯುತ್ತದೆ. ನಿಸ್ವಾರ್ಥ ಸೇವೆಯಿಂದ ಸಾಮಾಜಿಕ ಬದಲಾವಣೆ ಸಾಧ್ಯಎಂದರು.

ನಗರದ ಸ್ವಚ್ಛತೆ, ಸಾಮಾಜಿಕ ಸ್ವಾಸ್ಥ್ಯ, ದೇಶಪ್ರೇಮ, ಆಧ್ಯಾತ್ಮಿಕ ಚಿಂತನೆಯ ಮೌಲ್ಯಗಳೊಂದಿಗೆ ಪರೋಪಕಾರಂ ಕುಟುಂಬ ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿದೆ. 750ನೇ ಕಾರ್ಯಕ್ರಮ ಎಂಬ ಮೈಲಿಗಲ್ಲಿನ ಸಂಖ್ಯೆ ಸಾಂಕೇತಿಕ. ಸಂಖ್ಯೆಯ ಲೆಕ್ಕ ಮುಖ್ಯವಲ್ಲ. ನಾವು ಮಾಡುವ ಸಾಮಾಜಿಕ ಕಾರ್ಯ, ಅದರಿಂದ ಸಮಾಜಕ್ಕೆ ಆಗುವ ಅನುಕೂಲ ಮುಖ್ಯ. ಈ ನಿಟ್ಟಿನಲ್ಲಿ ಪರೋಪಕಾರಂ ಕುಟುಂಬದ ಸಾಮಾಜಿಕ ಕಾರ್ಯ ನಿಸ್ವಾರ್ಥ ಮನಸ್ಸಿನ ಸಾರ್ವಜನಿಕರ ಸಹಕಾರದಿಂದ ನಾಲ್ಕು ಅಂಕೆಯ ಸಂಖೆ ತಲುಪುವುದು ನಿಶ್ಚಿತ. ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪರೋಪಕಾರಂ ಕುಟುಂಬದ ಅನಿಲ್ ಹೆಗ್ಡೆ, ಎನ್.ಎಂ.ರಾಘವೇಂದ್ರ , ಕಾರ್ಪೆಂಟರ್ ಕುಮಾರ್, ನಿವೃತ್ತ ಯೋಧ ಕೆ.ಎಸ್.ವೆಂಕಟೇಶ್ ,ಆರ್‌.ಕಿರಣ್, ರಾಘವೇಂದ್ರ ಪೈ, ಕೆ.ಎಸ್.ಸುರೇಶ್, ವಿಜಯ್ ಕಾರ್ತಿಕ್, ವೈಶಾಖ, ಚರಿತಾ, ಸಚಿನ್ ಮತ್ತಿತರರು ಭಾಗವಹಿಸಿದ್ದರು.