ಸಾರಾಂಶ
ರೈತರು ತೀವ್ರ ಹೋರಾಟ ಮಾಡಿದ ಜಿಲ್ಲೆಗಳಲ್ಲಿ ಮಾತ್ರ ಕೆಲವು ರೈತರ ವಕ್ಫ್ ಆಸ್ತಿ ನೋಟಿಸ್ ಹಿಂಪಡೆಯಲಾಗಿದೆ. ಅನೇಕ ಜಿಲ್ಲೆಗಳಲ್ಲಿ ನೋಟಿಸ್ ವಾಪಸ್ ಪಡೆದಿಲ್ಲ. ಸರ್ಕಾರ ಎಲ್ಲ ಜಮೀನುಗಳ ಪಹಣಿಯಲ್ಲಿನ ವಕ್ಫ್ ಆಸ್ತಿ ರದ್ದುಗೊಳಿಸಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ಬೆಳಗಾವಿ : ರೈತರು ತೀವ್ರ ಹೋರಾಟ ಮಾಡಿದ ಜಿಲ್ಲೆಗಳಲ್ಲಿ ಮಾತ್ರ ಕೆಲವು ರೈತರ ವಕ್ಫ್ ಆಸ್ತಿ ನೋಟಿಸ್ ಹಿಂಪಡೆಯಲಾಗಿದೆ. ಇನ್ನೂ ಅನೇಕ ಜಿಲ್ಲೆಗಳಲ್ಲಿ ರೈತರ ನೋಟಿಸ್ ವಾಪಸ್ ಪಡೆದಿಲ್ಲ. ಸರ್ಕಾರ ರೈತರ ಎಲ್ಲ ಜಮೀನುಗಳ ಪಹಣಿಯಲ್ಲಿನ ವಕ್ಫ್ ಆಸ್ತಿ ರದ್ದುಗೊಳಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಧಾನಸೌಧ ಎದುರಿನ ಕೊಂಡಸಕೊಪ್ಪದಲ್ಲಿ ರೈತರ ಪ್ರತಿಭಟನೆಯಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾರಕರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಸರ್ಕಾರ ವಕ್ಫ್ ಬೋರ್ಡ್ ರದ್ದುಗೊಳಿಸಬೇಕು. ಇದಾಗದಿದ್ದರೆ ಆಸ್ತಿ ವ್ಯಾಜ್ಯ ವಿಚಾರಣೆ ಅಧಿಕಾರ ಮೊಟಕುಗೊಳಿಸಿ ಸಿವಿಲ್ ಕೋರ್ಟ್‌ಗೆ ವ್ಯಾಜ್ಯ ವಿಚಾರಣೆ ಅಧಿಕಾರ ನೀಡಬೇಕು. ವಕ್ಫ್ ವಿಷಯದಲ್ಲಿ ಅನ್ಯಾಯ ಮಾಡಿದರೆ ರೈತರು ರಾಜ್ಯ ಸರ್ಕಾರವನ್ನೇ ಕಿತ್ತು ಹಾಕಲಿದ್ದಾರೆ ಎಂದು ಗುಡುಗಿದರು. ಬಿಜೆಪಿ ಸರ್ಕಾರದಲ್ಲೂ ರೈತರಿಗೆ ವಕ್ಫ್ ನೋಟಿಸ್ ನೀಡಲಾಗಿದೆ. ಈ ವಿಷಯದಲ್ಲಿ ಪ್ರತಿಭಟಿಸುವ ಹಕ್ಕು ಬಿಜೆಪಿಯವರಿಗೆ ಇಲ್ಲ ಎಂದು ಬಿಜೆಪಿ ವಿರುದ್ಧವೂ ಹರಿಹಾಯ್ದರು.
ಮೂರು ಕೃಷಿ ಸುಧಾರಣೆ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಉತ್ತರ ಪ್ರದೇಶ ಸೇರಿದಂತೆ ಮೂರು ರಾಜ್ಯಗಳ ಚುನಾವಣೆ ಹಿನ್ನೆಲೆ ಕೇಂದ್ರ ಸರ್ಕಾರ ವಾಪಸ್ ಪಡೆದರೂ ರಾಜ್ಯ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಈ ಕಾಯ್ದೆ ಈಗಲೂ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಕಾಯ್ದೆ ಹಿಂಪಡೆದಿಲ್ಲ. ತಕ್ಷಣ ಕಾಯ್ದೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಕೇಂದ್ರ ಎಂಎಸ್ಪಿ ಜಾರಿಗೊಳಿಸಿದ್ದರೂ ಇದರ ಸರಿಯಾದ ಲಾಭ ರೈತರಿಗೆ ಸಿಗುತ್ತಿಲ್ಲ. ಹಾಗಾಗಿ ಎಂಎಸ್‌ಪಿಗೆ ಕಾನೂನಿನ ಬಲ ನೀಡಬೇಕು. ಬಗರ್ ಹುಕುಂ ಸಾಗುವಳಿ ರೈತರಿಗೆ ಅರಣ್ಯ ಇಲಾಖೆ ಕಿರುಕುಳ ನಿಲ್ಲಿಸಬೇಕು. ಕೂಡಲೇ ಸರ್ಕಾರ ಬಗರ್ ಹುಕುಂ ರೈತರನ್ನು ಸಕ್ರಮಗೊಳಿಸಬೇಕು ಎಂದು ಒತ್ತಾಯಿಸಿದರು.ಡಾ.ಸ್ವಾಮಿನಾಥನ್ ವರದಿ ಪ್ರಕಾರ ಎಫ್‌ಆರ್‌ಪಿ ಜಾರಿಗೊಳಿಸಬೇಕು. ರಾಜ್ಯ ಸರ್ಕಾರ ಎಸ್ಎಪಿ ಮೂಲಕ ರೈತರಿಗೆ ಯೋಗ್ಯ ದರ ಭರಿಸಬೇಕು. ಸಕ್ಕರೆ ಇಳುವರಿ ಕಾರ್ಖಾನೆಗಳೇ ನಿಗದಿ ಮಾಡುವುದನ್ನು ರದ್ದು ಮಾಡಿ, ಕಮಿಟಿ ರಚನೆ ಮಾಡಿ ಅದಕ್ಕೆ ಅಧಿಕಾರ ನಿಡಬೇಕು. ಕಬ್ಬು ಕಳಿಸಿದ 15 ದಿನದೊಳಗೆ ರೈತರ ಖಾತೆಗೆ ಬಿಲ್ ಪಾವತಿಸಬೇಕು. ವಿದ್ಯುತ್ ಖಾಸಗೀಕರಣ ನೀತಿ, ಪ್ರಿಪೇಡ್ ಮೀಟರ್ ಅಳವಡಿಕೆ ಕೈಬಿಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
2022-23ರಲ್ಲಿ ರಾಜ್ಯವನ್ನು ಬರಪೀಡಿತ ಎಂದು ಘೋಷಣೆ ಮಾಡಿದರೂ ಪುಡಿಗಾಸು ಪರಿಹಾರ ನೀಡಿ ಕೈತೊಳೆದುಕೊಳ್ಳಲಾಗಿದೆ. ಎಕರೆಗೆ ಕನಿಷ್ಠ ₹25 ಸಾವಿರ ಪರಿಹಾರ ರೈತರ ಖಾತೆಗೆ ಜಮೆ ಮಾಡಬೇಕು. ರೈತರನ್ನು ಸುಲಿಗೆ ಮಾಡುತ್ತಿರುವ ಬೆಳೆವಿಮಾ ಕಂಪನಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹೈನುಗಾರಿಕೆ ರೈತರಿಗೆ ಯೋಗ್ಯ ದರ ನೀಡಬೇಕು ಎಂದೂ ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ರೈತರ ಎಲ್ಲ ಬೇಡಿಕೆಗಳನ್ನು ಸಿಎಂ ಹಾಗೂ ಸಂಬಂಧಿಸಿದ ಸಚಿವರ ಗಮನಕ್ಕೆ ತಂದು ಸ್ಪಂದಿಸುವ ಭರವಸೆ ನೀಡಿದರು. ಆದರೆ, ಸಿಎಂ ಸಿದ್ದರಾಮಯ್ಯನವರೇ ಸ್ಥಳಕ್ಕೆ ಬಂದು ಭರವಸೆ ನೀಡುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ರೈತರು ಪಟ್ಟುಹಿಡಿದರು. ಕೊನೆಗೆ ಆರೇಳು ಮುಖಂಡರನ್ನು ಒಳಗೊಂಡ ರೈತರ ನಿಯೋಗವನ್ನು ಸುವರ್ಣವಿಧಾನಸೌಧಕ್ಕೆ ಕರೆಸಿಕೊಂಡು ರೈತರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸುವಚ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಡಲಾಯಿತು.