ಕುಂದುಕೊರತೆಗಳಿದ್ದರೆ ಠಾಣೆಗೆ ಬಂದು ತಿಳಿಸಿ: ಪಿಎಸ್ಐ ಲೋಕೇಶ್

| Published : Feb 24 2025, 12:33 AM IST

ಸಾರಾಂಶ

ಕಳೆದ ಸಭೆಯಲ್ಲಿ ಸೂಚಿಸಿದ ಯಾವುದೇ ಸಮಸ್ಯೆಗಳನ್ನು ಇಲಾಖೆ ಸಿಬ್ಬಂದಿ ಬಗೆಹರಿಸುವ ಕೆಲಸ ಮಾಡಿಲ್ಲ. ಇಲಾಖೆ ನಿರಂತರವಾಗಿ ಕುಂದು ಕೊರತೆ ಸಭೆ ಕರೆಯುತ್ತಿಲ್ಲ. ಎಲ್ಲಾ ಗ್ರಾಮಗಳ ಮುಖಂಡರಿಗೂ ತಿಳಿಸದೇ ಕಾಟಚಾರಕ್ಕೆ ಸಭೆ ನಡೆಸಿದರೇ ಯಾವುದೇ ಪ್ರಯೋಜನ ಆಗಿಲ್ಲ.

ಕನ್ನಡಪ್ರಭ ವಾರ್ತೆ ಹಲಗೂರು

ಯಾವುದೇ ಬಗೆಯ ಕುಂದು ಕೊರತೆಗಳಿದ್ದರೂ ಸಾರ್ವಜನಿಕರು ನೇರವಾಗಿ ಠಾಣೆಗೆ ಬಂದು ಅಹವಾಲು, ದೂರು ಸಲ್ಲಿಸಿದರೆ ನ್ಯಾಯಪರ ಕೆಲಸ ಮಾಡಿಕೊಡಲು ಠಾಣಾ ಸಿಬ್ಬಂದಿ ಸದಾ ಸಿದ್ದ ಎಂದು ನೂತನ ಪಿಎಸ್ಐ ಲೋಕೇಶ್‌ ಭರವಸೆ ನೀಡಿದರು.

ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಮುಖಂಡರ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿ, ಕಳೆದ ಸಭೆಯಲ್ಲಿ ಸೂಚಿಸಿದ ಯಾವುದೇ ಸಮಸ್ಯೆಗಳನ್ನು ಇಲಾಖೆ ಸಿಬ್ಬಂದಿ ಬಗೆಹರಿಸುವ ಕೆಲಸ ಮಾಡಿಲ್ಲ. ಇಲಾಖೆ ನಿರಂತರವಾಗಿ ಕುಂದು ಕೊರತೆ ಸಭೆ ಕರೆಯುತ್ತಿಲ್ಲ. ಎಲ್ಲಾ ಗ್ರಾಮಗಳ ಮುಖಂಡರಿಗೂ ತಿಳಿಸದೇ ಕಾಟಚಾರಕ್ಕೆ ಸಭೆ ನಡೆಸಿದರೇ ಯಾವುದೇ ಪ್ರಯೋಜನ ಆಗಿಲ್ಲ ಎಂದು ಮುಖಂಡರು ಬೇಸರ ವ್ಯಕ್ತಪಡಿಸಿದರು.

ಹಲಗೂರಿನ ಹೃದಯ ಭಾಗದಲ್ಲಿ ನಿರ್ಮಿಸಲಾಗುತ್ತಿರುವ ಡಾ.ಅಂಬೇಡ್ಕರ್ ಭವನ ಕಾಮಗಾರಿ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದೆ. ಇದರಿಂದ ಭವನದ ಮುಂಭಾಗದಲ್ಲಿ ಹಲವು ಬೀದಿ ಬದಿ ವ್ಯಾಪಾರಿಗಳು ಟೆಂಟ್ ಹಾಕಿಕೊಂಡು ಅಂಗಡಿ ಮಾಡಿಕೊಂಡಿದ್ದು, ತೆರವುಗೊಳಿಸಬೇಕೆಂದು ಒತ್ತಾಯಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ ಇಲಾಖೆ, ಮುಜರಾಯಿ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸ್ಥಳೀಯ ಮಟ್ಟದ ಅಧಿಕಾರಿಗಳನ್ನು ಕುಂದುಕೊರತೆ ಸಭೆಗೆ ಆಹ್ವಾನಿಸಿ ಸಭೆಯಲ್ಲಿನ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಹಿರಿಯ ಮುಖಂಡರಾದ ಮುದ್ದಯ್ಯ, ನಾಗಸಿದ್ದಯ್ಯ, ಟಿ.ಕೆ.ಹಳ್ಳಿ ಸ್ವಾಮಿ, ಗ್ರಾಪಂ ಸದಸ್ಯ ಬಿ.ಡಿ.ರಾಜೇಂದ್ರ, ಮುಖಂಡರಾದ ಕೊನ್ನಾಪುರ ಕೆ.ಜಿ.ಸಿದ್ದಲಿಂಗಮೂರ್ತಿ, ಡಿ.ಕೆ.ಹಳ್ಳಿ ಶಿವಸ್ವಾಮಿ, ಶಿವಣ್ಣ, ನಾಗಯ್ಯ, ಅಮರ್, ಶಿವಕುಮಾರ್, ತಮ್ಮಯ್ಯ, ಪ್ರೇಮ ಕುಮಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇಂದಿನಿಂದ ಶ್ರೀಉರಿಗಣ್ಣೇಶ್ವರಿ ದೇವಾಲಯ ಜೀರ್ಣೋದ್ಧಾರ

ಹಲಗೂರು:

ಸಮೀಪದ ಅಂತರವಳ್ಳಿಯ ಶ್ರೀಉರಿಗಣ್ಣಮ್ಮ ದೇವಿಯ ದೇವಾಲಯಗಳ ಪುನರ್ ಜೀರ್ಣೋದ್ಧಾರ ಕಾರ್ಯಕ್ರಮ ಫೆ.24 ಮತ್ತು ಫೆ.25 ರಂದು ಎರಡು ದಿನಗಳ ಕಾಲ ನಡೆಯಲಿದೆ.

ಗ್ರಾಮದ ಹಿರಿಯ ಮುಖಂಡರಾದ ಕೆ.ಸಿದ್ದಯ್ಯ ಮಾತನಾಡಿ ಫೆ.24 ರಂದು ಸಂಜೆ 6ರಿಂದ ಶ್ರೀಉರಿಗಣ್ಣಮ್ಮ ದೇವಿಯ ಪುನರ್ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಗಣಪತಿ ಪೂಜೆ, ನಂದಿ ಪೂಜೆ, ನವಗ್ರಹ ಹೋಮ ಮತ್ತು ಅಭಿಷೇಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ನಂತರ ಮಹಾ ಮಂಗಳಾರತಿ ನಡೆಯಲಿದೆ.

ಫೆ.25ರ 8 ಗಂಟೆಗೆ ಗಂಗೆ ತಡಿಯಿಂದ ದೇವರುಗಳನ್ನು ತರಲಾಗುವುದು. ದೇವಾಲಯ ಪ್ರವೇಶ, ಮಹಾ ಮಂಗಳಾರತಿ ನಡೆಯಲಿದೆ. ಪೂಜಾ ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೂ ಅನ್ನ ಸಂತರ್ಪಣೆ ನಡೆಯಲಿದೆ. ಎಲ್ಲಾ ವರ್ಗದ ಭಕ್ತಾದಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಮಾಡಬೇಕೆಂದು ಮನವಿ ಮಾಡಿದರು.

ಈ ವೇಳೆ ಯಜಮಾನರಾದ ರವಿ, ಮುಖಂಡರಾದ ಎಂ.ಶಿವಣ್ಣ, ಎಂ.ಶಿವಕುಮಾರ್, ಕೆ.ಸಿದ್ದಯ್ಯ, ಮಲ್ಲೇಶ್, ಚಿಕ್ಕಾಳಯ್ಯ, ಅಮಿತ್, ಮಹೇಶ್, ಈಜಯ್ಯ, ಶಿವಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.