ಶಾಲೆಗಳಲ್ಲಿ ಕೊರತೆ ಕಂಡರೆ ಚುನಾವಣೆ ಸ್ಪರ್ಧೆಗೆ ತಡೆ: ನ್ಯಾಯಾಧೀಶ ಎಚ್.ದೇವದಾಸ್

| Published : Mar 05 2024, 01:32 AM IST

ಶಾಲೆಗಳಲ್ಲಿ ಕೊರತೆ ಕಂಡರೆ ಚುನಾವಣೆ ಸ್ಪರ್ಧೆಗೆ ತಡೆ: ನ್ಯಾಯಾಧೀಶ ಎಚ್.ದೇವದಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಸಾಸ್ವೇಹಳ್ಳಿ ಹೋಬಳಿಯ ಲಿಂಗಾಪುರ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ಶಾಲಾ ಮೈದಾನದ ಗುಂಡಿಗಳ ಮುಚ್ಚಿ ಸಮತಟ್ಟು ಮಾಡಲು ಹಾಕಿಸಿದ ಮಣ್ಣು ವರ್ಷವಾದರೂ ಮೈದಾನಕ್ಕೆ ಹರಡಿಸಿದೇ ಹಾಗೇ ಇರುವುದು ಕಂಡು ಸಿಟ್ಟಾದ ನ್ಯಾಯಾಧೀಶರು ನಿಮ್ಮ ಊರಲ್ಲಿ ಏನು ವ್ಯವಹಾರ ನಡೆಯುತ್ತಿದೆಯೋ ನನಗೆ ಗೊತ್ತಿಲ್ಲ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿ ಯಾವುದೇ ಕೊರತೆ ಇಲ್ಲದಂತೆ ನೋಡಿಕೊಳ್ಳಬೇಕು ಒಂದು ವೇಳೆ ಕೊರತೆಗಳು ಕಂಡು ಬಂದರೆ ಶಾಲಾ ಮಕ್ಕಳಿಂದ ದೂರು ದಾಖಲಿಸಿ ನೀವು ಚುನಾವಣೆಗೆ ಸ್ಪರ್ಧಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಧೀಶ ಎಚ್.ದೇವದಾಸ್ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.

ತಾಲೂಕಿನ ಸಾಸ್ವೇಹಳ್ಳಿ ಹೋಬಳಿಯ ಲಿಂಗಾಪುರ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ಶಾಲಾ ಮೈದಾನದ ಗುಂಡಿಗಳ ಮುಚ್ಚಿ ಸಮತಟ್ಟು ಮಾಡಲು ಹಾಕಿಸಿದ ಮಣ್ಣು ವರ್ಷವಾದರೂ ಮೈದಾನಕ್ಕೆ ಹರಡಿಸಿದೇ ಹಾಗೇ ಇರುವುದು ಕಂಡು ಸಿಟ್ಟಾದ ನ್ಯಾಯಾಧೀಶರು ನಿಮ್ಮ ಊರಲ್ಲಿ ಏನು ವ್ಯವಹಾರ ನಡೆಯುತ್ತಿದೆಯೋ ನನಗೆ ಗೊತ್ತಿಲ್ಲ ಆದರೇ, ಪಂಚಾಯಿತಿಯವರು ನಿಮ್ಮೂರ ಶಾಲೆಗೆ ಆಗಬೇಕಾದ ಅಗತ್ಯ ಕೆಲಸ ಕಾರ್ಯಗಳ ಮಾಡಬೇಕು. ಶಾಲೆಗಳು ಎಂದರೆ ದೇವಸ್ಥಾನಗಳಿದ್ದಂತೆ ಅಲ್ಲಿ ಓದುವ ಮಕ್ಕಳು ದೇವರಿಗೆ ಸಮಾನ ಎಂದು ಪರಿಭಾವಿಸಬೇಕು ಎಂದು ಗ್ರಾಮದ ಚುನಾಯಿತ ಪ್ರತಿನಿಧಿಗಳಿಗೆ ಹೇಳಿದರು

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಪಿಡಿಒ ಕರೆಯಿಸಿ ವಿದ್ಯಾರ್ಥಿಗಳಿಗೆ ಅಗತ್ಯ ಶೌಚ ಗೃಹ, ಮೈದಾನ ಸಮತಟ್ಟು, ಚರಂಡಿ ನೀರು ಶಾಲಾ ಆವರಣಕ್ಕೆ ಬಾರದಂತೆ ವ್ಯವಸ್ಥೆ ಮಾಡಿಸಬೇಕು ಈ ಎಲ್ಲಾ ಕೆಲಸಗಳ ಮಾಡಿಸದಿದ್ದರೆ ನಿಮ್ಮ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಧೀಶರು ಎಚ್ಚರಿಕೆ ನೀಡಿದರು.

ನಂತರ ನ್ಯಾಯಾಧೀಶರು ಶಾಲಾ ಮಕ್ಕಳೊಂದಿಗೆ ಮಂಡಕ್ಕಿ ಮಿರ್ಚಿ ಸವಿದರು. ಈ ಸಂದರ್ಭದಲ್ಲಿ ಹೊನ್ನಾಳಿ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸಪೆಕ್ಟರ್ ತಿಪ್ಪೇಸ್ವಾಮಿ, ಗ್ರಾಮಪಂಚಾಯಿತಿ ಅಧ್ಯಕ್ಷೆ ಜ್ಯೋತಿಮುರುಗೇಶ್,ಸದಸ್ಯೆ ರೇಖಾ ಲೋಕೇಶ್, ಪಿಡಿಒ ಪರಮೇಶ್ವರ ಕೊಳ್ಳೂರ್ , ಬಿ.ಆರ್.ಪಿ.ಕೆ.ಜ.ಅರುಣ್ ಕುಮಾರ್, ಸಾಸ್ವೇಹಳ್ಳಿ -ಲಿಂಗಾಪುರ ಕ್ಲಸ್ಟರ್ ನ ಸಿ.ಆರ್.ಪಿ. ಕಾಳಾಚಾರ್, ಮುಖ್ಯ ಶಿಕ್ಷಕ ಕುಮಾರಸ್ವಾಮಿ,ರೈತ ಮುಖಂಡ ಧನರಾಜಪ್ಪ,ಎಚ್.ಕೆ.ರಮೇಶ್ ಮುಂತಾದವರಿದ್ದರು.ಒಂದು ತಿಂಗಳಲ್ಲಿ ಕಾರ್ಯಗಳ ಪೂರ್ಣಗೊಳಿಸಿ

ಶಾಲೆಗಳ ಅಭಿವೃದ್ಧಿ ವಿಚಾರಗಳಲ್ಲಿ ರಾಜಕೀಯ ಮಾಡಬೇಡಿ, ಒಂದು ತಿಂಗಳ ಒಳಗಾಗಿ ಶಾಲೆಯ ಮೈದಾನ ಸರಿಪಡಿಸುವುದು, ಮೂಲಭೂತ ಸೌಕರ್ಯಗಳ ಒದಗಿಸುವ ಕೆಲಸ ಮುಗಿಯಬೇಕು. ಮತ್ತೊಮ್ಮೆ ನಾನು ಬಂದಾಗ ಕೆಲಸ ಬಾಕಿ ಇದ್ದರೆ ಶಾಲಾ ಮಕ್ಕಳಿಂದ ಸಮಸ್ಯೆಗಳ ಬಗ್ಗೆ ದೂರು ಬರೆಸಿ ಮುಂದಿನ ದಿನಗಳಲ್ಲಿ ಚುನಾವಣೆಗೆ ನಿಲ್ಲದಂತೆ ಮಾಡಿಸುವೆ ಎಂದು ನ್ಯಾಯಾಧೀಶ ಎಚ್.ದೇವದಾಸ್‌ ಖಡಕ್ ಸೂಚನೆ ನೀಡಿದರು.