ಸಾರಾಂಶ
- ಹೊನ್ನಾಳಿ ಬಿಜೆಪಿ, ವೀರಶೈವ- ಲಿಂಗಾಯತ ಸಮಾಜ ಮುಖಂಡ ಅರಕೆರೆ ನಾಗರಾಜ ಒತ್ತಾಯ
- ಕ್ಷಮೆ ಕೇಳದಿದ್ದರೆ ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ವಿರುದ್ಧ ಹೋರಾಟ - - -ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಅಚ್ಚುಕಟ್ಟು ರೈತರ ಹಿತಕ್ಕಾಗಿ ಹೋರಾಟ ನಡೆಸಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಇತರರನ್ನು ನಿರುದ್ಯೋಗಿಗಳು ಎಂದು ಹಗುರ ಮಾತನಾಡಿರುವ ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ವಿ. ಶಿವಗಂಗಾ ತಕ್ಷಣ ಕ್ಷಮೆ ಕೇಳಬೇಕು ಎಂದು ಹೊನ್ನಾಳಿ ಬಿಜೆಪಿ ಹಾಗೂ ವೀರಶೈವ- ಲಿಂಗಾಯತ ಸಮಾಜದ ಮುಖಂಡರು ಎಚ್ಚರಿಸಿದರು.ಮುಖಂಡ ಅರಕೆರೆ ನಾಗರಾಜ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತಪರ ಹೋರಾಟನಿರತ ನಮ್ಮ ನಾಯಕರನ್ನು ನಿರುದ್ಯೋಗಿಗಳು ಎಂದು ಶಾಸಕ ಬಸವರಾಜ ಶಿವಗಂಗಾ ಟೀಕಿಸಿದ್ದಾರೆ. ರೇಣುಕಾಚಾರ್ಯ ಇತರೆ ಮುಖಂಡರು ಇದಕ್ಕೆ ಉತ್ತರ, ತಿರುಗೇಟು ನೀಡಿದ್ದಾರೆ. ಹೀಗಿದ್ದೂ, ಶಾಸಕ ಶಿವಗಂಗಾ ನಮ್ಮ ಸಮಾಜದ ಶಾಸಕರನ್ನು ತುಳಿಯುವ ಕೆಲಸ ಮಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ನನ್ನ ಶಕ್ತಿ ಏನೆಂದು ಹೊನ್ನಾಳಿಯಲ್ಲಿ ತೋರಿಸುತ್ತೇನೆಂದು ಹೇಳಿಕೆ ನೀಡಿದ್ದು ಸರಿಯಲ್ಲ ಎಂದರು.
ಮುಂದಿನ ಚುನಾವಣೆಯಲ್ಲಿ ಹೊನ್ನಾಳಿಯಲ್ಲಿ ಶಕ್ತಿ ತೋರಿಸುತ್ತೇನೆ ಎಂದಿರುವ ಬಸವರಾಜ ಶಿವಗಂಗಾ ತಾವೊಬ್ಬರೇ ಜಾತಿ ಮಗ ಅಲ್ಲ. ಚನ್ನಗಿರಿ ಕ್ಷೇತ್ರದ ಮಾಡಾಳ ಮಲ್ಲಿಕಾರ್ಜುನ ಸಹ ಜಾತಿ ಮಗ ಆಗಿದ್ದಾರೆಂಬುದು ಮರೆಯಬೇಡಿ. ರೇಣುಕಾಚಾರ್ಯ ಒಂದೇ ಜಾತಿಗೆ ಸೀಮಿತರಲ್ಲ. ವೀರಶೈವ ಲಿಂಗಾಯೇತರರಿಗೂ ಸಹ ತಾಪಂ, ಜಿಪಂ, ಸ್ಥಳೀಯ ಸಂಸ್ಥೆಗಳಲ್ಲಿ ಗೆಲ್ಲಿಸಿ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕೊಡಿಸಿದ್ದು ಮಾಜಿ ಸಚಿವ ರೇಣುಕಾಚಾರ್ಯ ಎಂದರು.ಬೇಕಿದ್ದರೆ ಮುಖ್ಯಮಂತ್ರಿಯಾಗಿ, ಬೇಡ ಅಂದವರು ಯಾರು? ನಮ್ಮ ನಾಯಕರ ಬಗ್ಗೆ ಹಗುರ ಮಾತನಾಡಿದರೆ ನಾವ್ಯಾರೂ ಸಹಿಸುವುದಿಲ್ಲ. ತಕ್ಷಣವೇ ನಮ್ಮ ನಾಯಕರಾದ ರೇಣುಕಾಚಾರ್ಯ ಬಳಿ ಕ್ಷಮೆ ಕೇಳಬೇಕು. 2004ರಿಂದಲೂ ಹೊನ್ನಾಳಿ ಕ್ಷೇತ್ರದ ಜನರೆ ರೇಣುಕಾಚಾರ್ಯ ಬೆನ್ನಿಗೆ ನಿಂತಿದ್ದಾರೆ. ಭದ್ರಾ ಅಚ್ಚುಕಟ್ಟು ರೈತರಿಗೆ ಅನ್ಯಾಯವಾಗಿದ್ದಕ್ಕೆ ಹೋರಾಟ ನಡೆಸಿದ್ದಾರೆ. ಉದ್ಯೋಗ ಇರುವ ನೀವು ಯಾಕೆ ಹೋರಾಟ ಮಾಡಿಲ್ಲ? ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಯಾಕೆ ಧ್ವನಿ ಎತ್ತಿಲ್ಲ ಎಂದು ಅರಕೆರೆ ನಾಗರಾಜ ಪ್ರಶ್ನಿಸಿದರು.
ಯಾರೂ ಯಾರನ್ನೂ ತುಳಿಯುವುದಕ್ಕೆ ಆಗುವುದಿಲ್ಲ. ಇಲ್ಲಸಲ್ಲದ ಹೇಳಿಕೆ ನೀಡಿ, ತೇಜೋವಧೆ ಮಾಡುವುದು ಸರಿಯಲ್ಲ. ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ಸಿಗರು ರೇಣುಕಾಚಾರ್ಯರಿಗೆ ನೀವೇ ಹೇಳಿದಂತೆ ಕೋಟಿಗಟ್ಟಲೇ ದುಡ್ಡಿ ಕೊಟ್ಟಿದ್ದರೆ, ಸಾಕ್ಷ್ಯ ಇದ್ದರೆ ಬಿಡುಗಡೆ ಮಾಡಿ. ಸತ್ಯವಿದ್ದರೆ ಸಾಕ್ಷ್ಯಗಳನ್ನು ಹೊರಗೆ ಬಿಡಿ. ನಿನ್ನೆ ಮೊನ್ನೆ ಬಂದು, ಶಾಸಕರಾಗಿ ಆಯ್ಕೆಯಾದವರಿಂದ ಹೀಗೆಲ್ಲಾ ಮಾತುಗಳು ಸರಿಯಲ್ಲ. ಶಾಸಕರಾಗಿ ನಿಮ್ಮ ವರ್ತನೆ, ಬಾಯಿ ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಿರಿ ಎಂದು ತಾಕೀತು ಹೇಳಿದರು.ಪಕ್ಷದ ಮುಖಂಡ ದೊಡ್ಡೇರಿ ಗಿರೀಶ ಮಾತನಾಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪನವರಿದ್ದಾರೆ. ಇಂತಹವರನ್ನು ಬಿಟ್ಟು ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗಬೇಕೆಂದು ಬಸವರಾಜ ಶಿವಗಂಗಾ ಧ್ವನಿ ಎತ್ತುತ್ತಾರೆ. ಮತ್ತೊಂದು ಕಡೆ ಸಮಾಜದ ಶಾಸಕರಾಗಿ ತನಗೆ ತುಳಿಯಲು ಯತ್ನಿಸುತ್ತಿದ್ದಾರೆ ಎಂಬಂ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.
ಮುಖಂಡರಾದ ಜೆ.ಕೆ.ಸುರೇಶ, ಡಿ.ಜಿ.ರಾಜಣ್ಣ, ಶಿವು ಹುಡೇದ, ಸಿದ್ದಲಿಂಗಪ್ಪ, ಸಿ.ಆರ್.ಶಿವಾನಂದ, ರಮೇಶ ಗೌಡ, ಅನಿಲಕುಮಾರ, ಮೇಘರಾಜ, ಮಂಜು ಹುಣಸಘಟ್ಟ ಇತರರು ಇದ್ದರು.- - -
* ರೇಣು ಕಪ್ಪುಚುಕ್ಕೆ ಅಂದ ಎಂಎಲ್‌ಸಿ ನವೀನ್‌ಗೆ ಗುಟುರು- ದಾವಣಗೆರೆ ಭದ್ರಾ ಹೋರಾಟಗಾರರರಿಗೆ ನವೀನ ಅವಮಾನ: ಆಕ್ರೋಶ
ಕನ್ನಡಪ್ರಭ ವಾರ್ತೆ ದಾವಣಗೆರೆರೇಣುಕಾಚಾರ್ಯ ಬಿಜೆಪಿಗೆ ಕಪ್ಪುಚುಕ್ಕೆಯಂತೆ ಎಂಬ ಹೇಳಿಕೆ ನೀಡಿರುವ ಚಿತ್ರದುರ್ಗದ ವಿಧಾನ ಪರಿಷತ್ತು ಸದಸ್ಯ ಕೆ.ಎಸ್.ನವೀನ್ ಇಡೀ ಜಿಲ್ಲೆಯ ರೈತರು, ಕ್ಷೇತ್ರದ ಮತದಾರರಿಗೆ ಅವಮಾನ ಮಾಡಿದ್ದಾರೆ ಎಂದು ಹೊನ್ನಾಳಿ ಬಿಜೆಪಿ ಮುಖಂಡ ಜೆ.ಕೆ. ಸುರೇಶ ಕಿಡಿಕಾರಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಡ್ಯಾಂ ಬಲದಂಡೆ ನಾಲೆ ಸೀಳಿ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಕೈಗೊಂಡಿದ್ದನ್ನು ವಿರೋಧಿಸಿ ಎಂ.ಪಿ. ರೇಣುಕಾಚಾರ್ಯ ಇತರರು ಅಚ್ಚುಕಟ್ಟು ರೈತರ ಪರ ಹೋರಾಟ ನಡೆಸಿದ್ದಾರೆ ಹೊರತು, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ನೀರು ಕೊಡದಂತೆ ಯಾರೂ ಆಕ್ಷೇಪಿಸಿಲ್ಲ. ಆದರೂ ವಿಪ ಸದಸ್ಯ ಕೆ.ಎಸ್.ನವೀನ ವಿನಾಕಾರಣ ಎಂ.ಪಿ.ರೇಣುಕಾಚಾರ್ಯ ಬಿಜೆಪಿಗೆ ಕಪ್ಪುಚುಕ್ಕೆ ಎಂಬುದಾಗಿ ಹೇಳಿದ್ದನ್ನು ಖಂಡಿಸುತ್ತೇವೆ. ಚನ್ನಗಿರಿ, ದಾವಣಗೆರೆ, ಹರಿಹರ, ಹರಪನಹಳ್ಳಿ ಭಾಗದ ಭದ್ರಾ ಅಚ್ಚುಕಟ್ಟು ರೈತರ ಹಿತಕ್ಕೆ ಅವಮಾನಿಸುವಂತಹ ಬಾಲಿಶ ಹೇಳಿಕೆ ಕೆ.ಎಸ್.ನವೀನ್ ನೀಡಿದ್ದಾರೆ ಎಂದರು.- - -
(ಟಾಪ್ ಕೋಟ್) ದಾವಣಗೆರೆ ಜಿಲ್ಲಾ ಬಿಜೆಪಿ ನಾಯಕರ ಬಗ್ಗೆ ಮಾತನಾಡುವಾಗ ಯಾರೇ ಆಗಿರಲಿ, ಮೈಮೇಲೆ ಪ್ರಜ್ಞೆ ಇರಬೇಕು. ರೇಣುಕಾಚಾರ್ಯರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂಬ ಹೇಳಿಕೆ ನೀಡುತ್ತಿರುವ ಹರಿಹರ ಶಾಸಕ ಬಿ.ಪಿ.ಹರೀಶ ಇದೇ ರೇಣುಕಾಚಾರ್ಯರ ಮನೆ ಬಾಗಿಲು ಕಾಯುತ್ತಿದ್ದುದನ್ನೂ ನಾವು ಕಂಡಿದ್ದೇವೆ.- ಜೆ.ಕೆ.ಸುರೇಶ, ಬಿಜೆಪಿ ಮುಖಂಡ, ಹೊನ್ನಾಳಿ ತಾಲೂಕು.
- - --1ಕೆಡಿವಿಜಿ3: ದಾವಣಗೆರೆಯಲ್ಲಿ ಮಂಗಳವಾರ ಹೊನ್ನಾಳಿ ತಾಲೂಕು ಬಿಜೆಪಿ ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಅರಕೆರೆ ನಾಗರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜೆ.ಕೆ.ಸುರೇಶ, ದೊಡ್ಡೇರಿ, ಗಿರೀಶ ಇದ್ದರು.