ಎಲ್ಲವೂ ಅವ್ರೆ ನಿರ್ಧರಿಸಿದ್ರೆ ನಾವೇಕೆ?

| Published : Aug 08 2025, 01:05 AM IST

ಸಾರಾಂಶ

ಇಲ್ಲಿನ ಪಟ್ಟಣದ ಪುರಸಭೆಯಲ್ಲಿ ಗುರುವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ಕಾರ್ಯದ ಬಗ್ಗೆ ಮಾಹಿತಿ ನೀಡದೆ, ಕೇವಲ ಅಧ್ಯಕ್ಷ, ಉಪಾಧ್ಯಕ್ಷ, ಮುಖ್ಯಾಧಿಕಾರಿ ನಡುವೆ ಮಾತ್ರ ಚರ್ಚೆಯಾಗುತ್ತದೆ.

ಈವರೆಗೂ ಠರಾವು ಪುಸ್ತಕದ ಮುಖವೇ ನೋಡಿಲ್ಲ

ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಸಮಾಧಾನ

ಕನ್ನಡಪ್ರಭ ವಾರ್ತೆ ಕುರುಗೋಡು

ಇಲ್ಲಿನ ಪಟ್ಟಣದ ಪುರಸಭೆಯಲ್ಲಿ ಗುರುವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ಕಾರ್ಯದ ಬಗ್ಗೆ ಮಾಹಿತಿ ನೀಡದೆ, ಕೇವಲ ಅಧ್ಯಕ್ಷ, ಉಪಾಧ್ಯಕ್ಷ, ಮುಖ್ಯಾಧಿಕಾರಿ ನಡುವೆ ಮಾತ್ರ ಚರ್ಚೆಯಾಗುತ್ತದೆ. ಈವರೆಗೂ ಠರಾವು ಪುಸ್ತಕದ ಮುಖವೇ ನೋಡಿಲ್ಲ. ಎಲ್ಲವೂ ಅವರೇ ನಿರ್ಧರಿಸುವುದಾದರೆ ನಾವೇಕೆ ಎಂದು ಬಹುತೇಕ ಸದಸ್ಯರು ಏರುಧ್ವನಿಯಲ್ಲಿ ಶಾಸಕ ಜೆ.ಎನ್. ಗಣೇಶ್ ಮುಂದೆ ಅಸಮಾಧಾನ ಹೊರಹಾಕಿದರು.

3ನೇ ವಾರ್ಡ್ ಸದಸ್ಯೆ ತಿಪ್ಪಮ್ಮ ಮಾತನಾಡಿ, ವರ್ಷ ಕಳೆದರೂ ನನ್ನ ವ್ಯಾಪ್ತಿಯಲ್ಲಿ ಬಿಡಿಗಾಸಿನ ಕೆಲಸವಾಗಿಲ್ಲ. ಮತ ನೀಡಿರುವ ಜನರು ಪ್ರಶ್ನಿಸುತ್ತಿದ್ದಾರೆ. ನಿಮ್ಮನ್ನು ಕೈ ಮುಗಿದು ಬೇಡಿಕೊಳ್ಳುವೆ, ಅನುದಾನ ನೀಡಿ ಎಂದು ಮನವಿ ಮಾಡಿದರು.

ಇದಕ್ಕೆ ಧ್ವನಿಗೂಡಿಸಿದ 15ನೇ ವಾರ್ಡ್ ಸದಸ್ಯ ವೀರೇಶ್ ನಮ್ಮಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಸದ್ಯ ಕೆರೆ ನಿರ್ಮಾಣಕ್ಕೆ ಕನಿಷ್ಠ ಎರಡು ವರ್ಷ ಆಗಲಿದೆ. ಅಲ್ಲಿಯ ತನಕ ಯಾವುದೇ ತಾತ್ಕಲಿಕ ವ್ಯವಸ್ಥೆ ಇಲ್ಲ. ಜೊತೆಗೆ ಚರಂಡಿ ಎಲ್ಲಂದರಲ್ಲಿ ಬ್ಲಾಕ್ ಆಗಿ ತ್ಯಾಜ್ಯ ನೀರು ರಸ್ತೆಗೆ ಅರಿಯುತ್ತಿದೆ. ಇದರಿಂದ ವಾಹನ ಸವಾರರು, ಪಾದಚಾರಿಗಳು ಬಿದ್ದು ಕಾಲು ಮುರಿದುಕೊಂಡು ಶಾಪ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಶಾಸಕ ಗಣೇಶ್ ಎಲ್ಲ ಸದಸ್ಯರಿಗೆ ಕಾರ್ಯದ ಬಗ್ಗೆ ಮಾಹಿತಿ ನೀಡುವಂತೆ ತಿಳಿಸುವ ಜತೆಗೆ ಶೀಘ್ರ ಅಗತ್ಯ ಇರುವ ಕಡೆ ಅನುದಾನ ನೀಡುವ ಭರವಸೆ ನೀಡಿದರು.

7ನೇ ವಾರ್ಡ್‌ನಲ್ಲಿ ವಿದ್ಯುತ್ ಕಂಬ ಮತ್ತು ಪರಿವರ್ತಕ ಬದಲಾವಣೆಗೆ ಅನುದಾನ ಮೀಸಲಿದ್ದರೂ ಈವರೆಗೆ ಅನುಷ್ಠಾನಗೊಂಡಿಲ್ಲ. ಜೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ ಸರಿಯಾಗಿ ಉತ್ತರಿಸುವುದಿಲ್ಲ. ಯಾರನ್ನು ಕೇಳಬೇಕು ಎಂಬುದು ಅರ್ಥವಾಗುತ್ತಿಲ್ಲ ಎಂದು ಸದಸ್ಯ ಎನ್.ಗುರುಮೂರ್ತಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ನಾಮ ನಿರ್ದೇಶನ ಸದಸ್ಯ ಮೃತ್ಯುಂಜಯ, 3ನೇ ವಾರ್ಡ್‌ನಲ್ಲಿ ಪರಿವರ್ತಕ ದಾರಿಹೋಕರ ಕೈಗೆ ತಾಕುವಂತಿದೆ. ಈ ಬಗ್ಗೆ ಇಲಾಖೆ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ. ಜನರ ಸಾವಿಗಾಗಿ ಕಾಯುತ್ತಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೆಸ್ಕಾಂ ಎಇಇ ರಾಜೇಂದ್ರ ಪ್ರಸಾದ್, ಇಲಾಖೆಯಲ್ಲಿ ಅನುದಾನ ಮೀಸಲಿರುವುದಿಲ್ಲ. ದುರಸ್ತಿ ಅಥವಾ ಹೊಸ ಕಂಬ, ಪರಿವರ್ತಕ ಅಳವಡಿಕೆ ಅಗತ್ಯವಿದ್ದಲ್ಲಿ ಕ್ರಿಯಾಯೋಜನೆ ತಯಾರಿಸಿ ಇಲಾಖೆ ಮೇಲಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಅನುದಾನ ಬಿಡುಗಡೆ ಬಳಿಕ ಅನುಷ್ಟಾನಗೊಳಿಸಲಾಗುವುದು. ತುರ್ತು ದುರಸ್ತಿ ಇದ್ದಲ್ಲಿ ನನ್ನ ಗಮನಕ್ಕೆ ತಂದರೆ ತಾತ್ಕಾಲಿಕವಾಗಿ ಸರಿಪಡಿಸಲಾಗುವುದು ಎಂದರು.

ಪೊಲೀಸ್ ಇಲಾಖೆ ಗುರುತಿಸಿರುವ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ₹14.25 ಲಕ್ಷ ಅನುದಾನ ಮಂಜೂರು ಮಾಡಲು ಸದಸ್ಯರ ಒಪ್ಪಿಗೆ ಕೇಳಿದಾಗ ಕೆಲವು ಸದಸ್ಯರು ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನದ ಕೊರತೆಯಾಗುತ್ತದೆ. ನಿಮ್ಮ ಇಲಾಖೆಯ ಅನುದಾನದಲ್ಲಿ ಖರೀದಿಸುವಂತೆ ಹೇಳಿದರು. ಮಧ್ಯಪ್ರವೇಶಿಸಿದ ಶಾಸಕ ಜೆ.ಎನ್. ಗಣೇಶ್, ಪಟ್ಟಣದಲ್ಲಿ ಜರುಗುವ ಕಳ್ಳತನ, ಅಪಘಾತ ಘಟನೆ ಪತ್ತೆ ಹಚ್ಚುವಲ್ಲಿ ಸಿಸಿ ಕ್ಯಾಮೆರಾ ಅವಶ್ಯ. ಹೀಗಾಗಿ ಸಮಸ್ಯೆ ಅಗತ್ಯ ಇರುವ ಕಡೆ ಶಾಸಕರ ಅನುದಾನದಲ್ಲಿ ಹಣ ನೀಡುವೆ ಎಂದು ಹೇಳಿ ಸದಸ್ಯರ ತಕರಾರಿಗೆ ತೆರೆ ಎಳೆದರು.

ಶಾಸಕ ಜೆ.ಎನ್. ಗಣೇಶ್, ಪುರಭಸೆ ಟಿ.ಶೇಖಣ್ಣ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಮುಖ್ಯಾಧಿಕಾರಿ ಹರ್ಷವರ್ಧನ ರೆಡ್ಡಿ, ಸಿಪಿಐ ವಿಶ್ವನಾಥ ಕೆ.ಹಿರೇಗೌಡರ್ ಮತ್ತು ಪಿಎಸ್ಐ ಸುಪ್ರಿತ್ ಇದ್ದರು.