ಸಾಹಿತ್ಯ ಕೂಟಗಳು ಅನೇಕ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತವೆ. ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಂತೋಷಕರ ಎಂದು ಹಿರಿಯ ಪತ್ರಕರ್ತ, ಸಾಹಿತಿ ಗಂಗಾಧರ ಕೊಳಗಿ ಹೇಳಿದರು.
ಶಿರಸಿ: ಬಳಗ ಎನ್ನುವುದೇ ಒಂದು ವಿಶಿಷ್ಟ ಖುಷಿ ಕೊಡುತ್ತದೆ. ಇಲ್ಲಿನ ಕವಿ ಕಾವ್ಯ ಬಳಗ ಆಪ್ತತೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಬಳಗಗಳ ಸಾಹಿತ್ಯ ಚಟುವಟಿಕೆಗಳು ಮನಸ್ಸಿಗೆ ಹತ್ತಿರವಾಗುತ್ತದೆ. ಇವು ನಮ್ಮೊಳಗಿನ ಸಾಹಿತ್ಯ ಚಿಗುರನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಗಂಗಾಧರ ಕೊಳಗಿ ಹೇಳಿದರು.
ನಗರದ ಆರಾಧನಾ ಸಭಾಂಗಣದಲ್ಲಿ ಕವಿ ಕಾವ್ಯ ಬಳಗದ ೧೮ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ನಾಗರಾಜ್ ವೈದ್ಯ ಅವರ ‘ಎಐ ಭಗವದ್ಗೀತೆ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.ಇಂತಹ ಸಾಹಿತ್ಯ ಕೂಟಗಳು ಅನೇಕ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತವೆ. ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಂತೋಷಕರ. ದೊಡ್ಡ ಸಾಹಿತ್ಯ ಜಾತ್ರೆಗಳ ಜೊತೆಗೆ ಇಂತಹ ಸಣ್ಣ, ಆತ್ಮೀಯ ಕಾರ್ಯಕ್ರಮಗಳೂ ಅಗತ್ಯವಾಗಿವೆ. ಸಣ್ಣ ಕಾರ್ಯಕ್ರಮಗಳು, ಜಗುಲಿಯ ಸಾಹಿತ್ಯ ಗೋಷ್ಠಿಗಳು ಖಾಸಗಿ ಮತ್ತು ಹತ್ತಿರದ ಸಾಹಿತ್ಯ ಅನುಭವ ದೊರೆಯುತ್ತದೆ ಎಂದು ಹೇಳಿದರು.
ಇತ್ತೀಚೆಗೆ ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ಪುಸ್ತಕಗಳೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ. ಆದರೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದು ಚಿಂತಾಜನಕವಾಗಿದೆ. ಹಿರಿಯ ಬರಹಗಾರರು ಹೆಚ್ಚು ಓದುವುದರ ಜೊತೆಗೆ, ಹೊಸ ತಲೆಮಾರಿನ ಬರಹಗಾರರು ಹಳೆಯ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಅದು ಹೊಸ ದೃಷ್ಟಿಕೋನವನ್ನು ನೀಡುತ್ತದೆ. ಹಿರಿಯರು ಹಳೆಯದನ್ನು ಓದಿ ಹೊಸದನ್ನು ಸೃಷ್ಟಿಸಿದವರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.ಕೃತಿಯ ಕುರಿತು ಮಾತನಾಡಿದ ಲೇಖಕ ಸಂಜಯ ಭಟ್ಟ ಬೆಣ್ಣೆ, ಎಐ ಭಗವದ್ಗೀತೆ ಕೃತಿ ಎಂದರೆ ತಾಂತ್ರಿಕ ಜಗತ್ತಿನ ಭಗವದ್ಗೀತೆ ಎಂದು ಬಣ್ಣಿಸಿದರು.
ಕೃತಿಕಾರ ಪತ್ರಕರ್ತ ನಾಗರಾಜ್ ವೈದ್ಯ, ಯಾವುದೇ ಹೊಸ ತಂತ್ರಜ್ಞಾನ ಬಂದಾಗಲೂ ಜನರಲ್ಲಿ ಆತಂಕ ಶುರುವಾಗುತ್ತದೆ. ಕಂಪ್ಯೂಟರ್ ಬಂದಾಗಲೂ ಹೀಗೆಯೇ ಆಗಿತ್ತು. ಕೀಪ್ಯಾಡ್ ಮೊಬೈಲ್ ಜಮಾನಾ ಮುಗ್ದು ಸ್ಮಾರ್ಟ್ ಫೋನ್ ಬಂದಾಗಲೂ ನಮ್ಗೆಲ್ಲ ಆಗಿದ್ದು ಆತಂಕವೇ. ಆದರೆ, ಇಂದು ವಾಟ್ಸಪ್, ಯುಪಿಐ ಪೇಮೆಂಟ್ ಇಲ್ಲದೆ ನಮ್ಮ ದಿನ ಸಾಗುವುದಿಲ್ಲ. ಮೊಳ ಹೂವು ಕೊಳ್ಳಲು, ಎಳನೀರು ಕುಡಿಯಲು ಹೋದರೂ ಅಲ್ಲಿ ಕ್ಯೂಆರ್ ಕೋಡ್ ಇರುತ್ತದೆ. ಸ್ಕ್ಯಾನ್ ಮಾಡಿ ಪಾವತಿ ಮಾಡಿ ಬರುತ್ತೇವೆ. ಟೆಕ್ನಾಲಜಿ ಎನ್ನುವುದು ಸಾಮಾನ್ಯವಾಗಿದೆ. ಇದೆಲ್ಲವನ್ನೂ ಒಪ್ಪಿಕೊಂಡ ನಮಗೆ ಎಐ ಯಾಕೆ ಹೆದರಿಸಬೇಕು? ಅದನ್ನೂ ಸಾಮಾನ್ಯವಾಗಿಯೇ ಪರಿಗಣಿಸಬೇಕು. ಸರಿಯಾಗಿ ಬಳಸುವುದನ್ನು ಕಲಿತರೆ ಅದು ಭವಿಷ್ಯದ ದೈನಂದಿನ ಉಸಿರಾಗಲಿದೆ ಎಂದರು.ಹಿರಿಯ ಸಾಹಿತಿ ಆರ್.ಡಿ. ಹೆಗಡೆ ಆಲ್ಮನೆ ಅಧ್ಯಕ್ಷತೆ ವಹಿಸಿದ್ದರು. ಭಾಗೀರಥಿ ಹೆಗಡೆ ಸ್ವಾಗತಿಸಿದರು. ಎನ್.ಆರ್. ರೂಪಶ್ರೀ ಕಾರ್ಯಕ್ರಮ ನಿರ್ವಹಿಸಿದರು.