ಹುಬ್ಬಳ್ಳಿ:
ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಹೇಳಿದಂತೆ ನಾವೆಲ್ಲರೂ ಸಾಮರಸ್ಯದಿಂದ ಬದುಕಿದರೆ ದೇಶ ಸರ್ವಶಕ್ತಿ ರಾಷ್ಟ್ರವಾಗುವುದರಲ್ಲಿ ಸಂಶಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಕಾರ್ಯಕಾರಿಣಿ ಸದಸ್ಯ ಶ್ರೀಧರ ನಾಡಗೇರ್ ತಿಳಿಸಿದರು.ಇಲ್ಲಿಯ ಆರ್‌ಎಸ್‌ಎಸ್ ಕಚೇರಿ ಕೇಶವ ಕುಂಜದಲ್ಲಿ ಸಾಮರಸ್ಯ ವೇದಿಕೆ ಹುಬ್ಬಳ್ಳಿ ಮಹಾನಗರ ವತಿಯಿಂದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ಸರ್ವ ಶಕ್ತಿ ರಾಷ್ಟ್ರವಾಗಲೂ ಜಗತ್ತಿನ ಮುಂದುವರಿದ ದೇಶಗಳಿಗೆ ಇಷ್ಟವಿಲ್ಲ. ಸ್ವಾವಲಂಬಿ ಆಗಬಾರದು ಎಂಬುವುದು ಆ ದೇಶಗಳ ಆಂತರಿಕ ಚಿಂತನೆ. ಹೀಗಾಗಿ ಮುಂದುವರಿಯದಂತೆ ನೋಡಿಕೊಳ್ಳಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಬೇರೆ ದೇಶಗಳು ಎಷ್ಟೇ ಪ್ರಯತ್ನಗಳು ನಡೆಸಿದರೂ ಅಂಬೇಡ್ಕರ್ ಅವರು ಹೇಳಿದಂತೆ ನಾವೆಲ್ಲರೂ ಸಾಮರಸ್ಯದಿಂದ ಬದುಕಿದರೆ ಮಾತ್ರ ಅದನ್ನು ತಡೆಯಲು ಸಾಧ್ಯ ಎಂದರು.ಭಾರತ ದುರ್ಬಲವಾಗಿ ಇರುವಂತೆ ಮಾಡಲಾಗುತ್ತಿದೆ. ಸದಾ ಆಂತರಿಕ ಭೇದ-ಭಾವ ನಮ್ಮಲ್ಲಿ ಸೃಷ್ಟಿಸಲಾಗುತ್ತಿದೆ. ಆದ್ದರಿಂದ ನಾವೆಲ್ಲರೂ ಸಾಮರಸ್ಯದಿಂದ ಕೂಡಿ ಸಂವಿಧಾನ ಪಾಲಿಸಬೇಕು. ಅಂಬೇಡ್ಕರ್ ಸಾಕಷ್ಟು ನೋವು ಅನುಭವಿಸಿದರೂ ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಹಿತ ಬಯಸಿದರು. ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ತಮ್ಮ ಜನಾಂಗ ಮೇಲೆತ್ತುವ ಕೆಲಸ ಮಾಡಿದರು ಎಂದು ಹೇಳಿದರು.ಅಸ್ಪೃಶ್ಯತೆ ಕೊನೆಗಾಣಿಸಲು ಮಹಾತ್ಮ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ಸಿಡಿದೆದ್ದರು. ಸಮಾನತೆ ತತ್ವ ಸಾರಿದ ಬೌದ್ಧ ಧರ್ಮ ಸ್ವೀಕರಿಸಿದರು. ಬಹುಶಃ ಅವರು ದೇಶ ಮೊದಲ ಪ್ರಧಾನಿಯಾಗಿದ್ದರೆ ಈ ದೇಶ ಈಗ ಇನ್ನೂ ಚೆನ್ನಾಗಿ ಇರುತ್ತಿತ್ತು. ಸಮಾಜಕ್ಕೆ ಶ್ರಮಿಸಿದ್ದರಿಂದ ಅಂಬೇಡ್ಕರ್ ಅವರು ಈಗಲೂ ಪ್ರತಿಯೊಬ್ಬರ ಮನದಲ್ಲಿ ಇದ್ದಾರೆ ಎಂದು ಹೇಳಿದರು.
ದೊಡ್ಡ ವ್ಯಕ್ತಿಗಳನ್ನು ದೇವರ ಸ್ಥಾನದಲ್ಲಿ ಕೂಡ್ರಿಸಿ ಅವರ ಗುಣಗಾನ ಮಾಡುವುದು ಮನುಷ್ಯನ ಪತನದ ಲಕ್ಷಣವಾಗಿದೆ ಎಂದ ಅವರು, ಸಿದ್ಧಾಂತ ಹಾಗೂ ಜೀವನ ನಡುವೆ ಅಂತರ ಕಡಿಮೆ ಮಾಡಬೇಕಿದೆ. ಎಲ್ಲರೂ ಒಂದಾಗಿ ಬದುಕಬೇಕಿದೆ. ಎಲ್ಲ ಜಾತಿಯವರನ್ನು ಪ್ರೀತಿ-ಗೌರವದಿಂದ ಕಾಣಬೇಕು ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ ಕಂಬ್ಳಿ ಮಾತನಾಡಿ, ಅಂಬೇಡ್ಕರ ಕಷ್ಟಪಟ್ಟು ನಮಗೆಲ್ಲ ಬೆಳಕು ನೀಡಿದ್ದಾರೆ. ಅವರು ವ್ಯಕ್ತಿಯಲ್ಲ ಶಕ್ತಿಯಾಗಿದ್ದರು. ಆದರೆ ನಾವುಗಳು ಇನ್ನೂ ಸಮಾಜದಲ್ಲಿ ಪ್ರೀತಿ, ಸ್ವಾತಂತ್ರ್ಯ ಹಾಗೂ ಸ್ವಚ್ಛಂದವಾಗಿ ಬದುಕುಲು ಏಕೆ ಆಗುತ್ತಿಲ್ಲ? ಇದಕ್ಕೆ ಸಮಾಜದಲ್ಲಿ ಹಣೆಪಟ್ಟಿ ಕಟ್ಟುತ್ತಿರುವುದು ಎಂದು ತಿಳಿಸಿದರು.
ಅಂಬೇಡ್ಕರ್ ನಡೆದು ಬಂದ ದಾರಿ, ಜೀವನ ಶೈಲಿ ಹಾಗೂ ಅನೇಕ ಸಂಗತಿಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಕಾರ್ಯವಾಗಬೇಕಿದೆ. ಮೂಲಭೂತ ಹಕ್ಕುಗಳ ಜೊತೆ ಕರ್ತವ್ಯ ಪಾಲಿಸಬೇಕು. ಗ್ರಾಮದಲ್ಲಿ ಸಾಮರಸ್ಯ ಬದುಕನ್ನು ಮಕ್ಕಳಿಗೆ ಕಲಿಸಬೇಕಿದೆ ಎಂದರು.