ಸಾರಾಂಶ
ಕನ್ನಡಪ್ರಭ ವಾರ್ತ ಚಾಮರಾಜನಗರ
ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಂಡರೆ ನಮ್ಮ ಸುತ್ತಲಿನ ಪರಿಸರ, ಕುಟುಂಬ, ಸಮಾಜ ಸ್ವಾಸ್ಥ್ಯದಿಂದ ಕೂಡಿರಲಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅಭಿಪ್ರಾಯಪಟ್ಟರು.ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಎನ್ಆರ್‌ಎಲ್ಎಂ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
"ಪೆಣ್ಣು, ಪೆಣ್ಣಂದೇಕೆ ಜರಿಯುವರು, ಕಣ್ಣು ಕಾಣದ ಗಾವಿಲರು, ಪೆಣ್ಣಲ್ಲವೇ ನಿಮ್ಮನ್ನೆಲ್ಲಾ ಹಡೆದವಳು " ಎಂಬ ಜಿಲ್ಲೆಯ ಪ್ರಸಿದ್ಧ ಕವಯಿತ್ರಿ ಸಂಚಿ ಹೊನ್ನಮ್ಮ ಅವರ ಕವಿತೆಯನ್ನು ಜಿಲ್ಲಾಧಿಕಾರಿ ಉಲ್ಲೇಖಿಸಿದರು. ಮಹಿಳೆಯರನ್ನು ಜರಿಯುವ ಕಾಲ ಈಗಿಲ್ಲ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿದ್ದಾರೆ. ಕುಟುಂಬ ಹಾಗೂ ಆಡಳಿತ ನಿರ್ವಹಣೆಯಲ್ಲಿ ಮುಂದಿದ್ದಾರೆ. ಸಮಾಜ ಶುದ್ಧಿಕರಣದಲ್ಲೂ ಮಹಿಳೆಯರ ಪ್ರಮುಖ ಪಾತ್ರವಿದೆ. ಇದು ಆರೋಗ್ಯಕಾರಿ ಬೆಳವಣಿಗೆ ಎಂದರು.ಮಹಿಳೆ ಯಾವುದೇ ದೊಡ್ಡ ಅಥವಾ ಚಿಕ್ಕ ಹುದ್ದೆಯಲ್ಲಿರಲಿ, ಕುಟುಂಬ, ಆಡಳಿತ ನಿರ್ವಹಣೆಯಲ್ಲಿ ದಿನಪೂರ್ತಿ ಇತರರಿಗಾಗಿ ದುಡಿಯುವ ಮಹಿಳೆಯರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು. ಒತ್ತಡರಹಿತ ಜೀವನ ನಡೆಸಬೇಕು. ಪೌಷ್ಠಿಕ ಆಹಾರ ಸೇವಿಸಬೇಕು. ಎಲ್ಲವನ್ನು ನಿರ್ವಹಿಸುವ ಮಹಿಳೆಯರು ಆರೋಗ್ಯದಿಂದ ಕೂಡಿದ್ದರೇ ಸುಶಿಕ್ಷಿತ ಕುಟುಂಬ, ಸಮಾಜ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಸರ್ಕಾರದ ಮಹತ್ವಾಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ’ಗೃಹಲಕ್ಷ್ಮೀ’ ಅನುಷ್ಠಾನದಲ್ಲಿ ಇಡೀ ರಾಜ್ಯದಲ್ಲಿಯೇ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಶೇ.೫೦ರಷ್ಟು ಮಹಿಳಾ ಜನಸಂಖ್ಯೆ ಜಿಲ್ಲೆಯಲ್ಲಿದೆ. ಶೇ.೫೦ರಷ್ಟು ಗ್ರಾಪಂಗಳಲ್ಲಿ ಮಹಿಳಾ ಅಧ್ಯಕ್ಷರು, ಸದಸ್ಯರಿದ್ದಾರೆ. ಜಿಲ್ಲೆಯಲ್ಲಿ ಸಂಪದ್ಭರಿತ ಅರಣ್ಯ ಪ್ರದೇಶಗಳು, ಪ್ರಕೃತಿ ತಾಣಗಳಿವೆ. ಮುಖ್ಯವಾಗಿ ಆಡಳಿತದಲ್ಲಿ ಮಹಿಳಾ ಪ್ರಾಧಾನ್ಯತೆ ಹೊಂದಿರುವ ಚಾಮರಾಜನಗರ ಜಿಲ್ಲೆ ಅಭಿವೃದ್ಧಿ ಚಿಂತನೆಯಲ್ಲಿಯೂ ಮುಂಚೂಣಿಯಲ್ಲಿರಬೇಕು ಎಂದು ಹೇಳಿದರು.ಜಿಪಂ ಸಿಇಒ ಮೋನಾರೋತ್ ಮಾತನಾಡಿ, ಕುಟುಂಬದಲ್ಲಿ ಎಲ್ಲರಿಗಾಗಿ ದುಡಿಯುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ದೈನಂದಿನ ಒತ್ತಡ ನಿರ್ವಹಣೆಗಾಗಿ ಯೋಗ, ವ್ಯಾಯಾಮ, ಧ್ಯಾನದಂತಹ ಆರೋಗ್ಯಕಾರಿ ಚಟುವಟಿಕೆಗಳಲ್ಲಿ ತೊಡಗಬೇಕು. ಮಹಿಳಾ ಹಕ್ಕುಗಳು, ಸಮಾನತೆ ಬಗ್ಗೆ ಅರಿವು ಹೊಂದಬೇಕು ಎಂದು ತಿಳಿಸಿದರು. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಗಾಂಧಿಜೀ ಹೇಳಿದ್ದರು, ಅದು ನಿಜವಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಕುಟುಂಬದ ಜೊತೆಗೆ ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಅವರ ಗೌರವಧನ ಹೆಚ್ಚಳಕ್ಕೆ ಸರ್ಕಾರ ಮುಂದಾಗಬೇಕು ಎಂದರು.
ಜಿಪಂ ಉಪಕಾರ್ಯದರ್ಶಿ ಪಿ.ಲಕ್ಷ್ಮೀ ಮಾತನಾಡಿ, ತಾಳ್ಮೆಯ ಪ್ರತಿರೂಪ ಮಹಿಳೆ ಆಗಿದ್ದಾಳೆ. ಮಗುವಿನ ಬಾಲ್ಯವನ್ನು ತಿದ್ದಿ, ತೀಡಿ ರೂಪಿಸುವ ಮಹಿಳೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲಳು. ಮಹಿಳೆಯರು ನಿಂತ ನೀರಾಗದೇ ಹರಿಯುವ ನದಿಯಾಗಬೇಕು. ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು ಎಂದರು. ಇದೇ ವೇಳೆ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಮತ್ತು ಅಂಗನವಾಡಿಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಮಹಿಳೆಯರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಜಿಪಂ ಮುಖ್ಯ ಯೋಜನಾ ಅಧಿಕಾರಿ ದೀಪಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸಿ.ಎನ್.ರೇಣುಕಾ, ಗುಂಡ್ಲುಪೇಟೆ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷೆ ಉಮಾಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಂಜುನಾಥ್, ಗುಂಡ್ಲುಪೇಟೆ ತಾಲೂಕು ಆದಿವಾಸಿ ಸಾಮಾಜಿಕ ಹೋರಾಟಗಾರ್ತಿ ರತ್ನಮ್ಮ, ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ಸುಜಾತ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಗಳ ಅಧ್ಯಕ್ಷೆ ಪದ್ಮ, ಕಾರ್ಯದರ್ಶಿ ಸರೋಜ, ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ ಸಿಇಒ ಮೋನಾ ರೋತ್, ಇತರೆ ಗಣ್ಯರು ಸಭಾಂಗಣದ ಹೊರಭಾಗದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.