ಯಾದಗಿರಿಯಲ್ಲಿ 1 ಕೆ.ಜಿ. ಪ್ಲಾಸ್ಟಿಕ್‌ ಕೊಟ್ಟರೆ 1 ಕೆ.ಜಿ. ಸಕ್ಕರೆ ಉಚಿತ

| Published : Jul 18 2024, 01:34 AM IST

ಸಾರಾಂಶ

ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲು ವಡಗೇರಾ ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಯೊಬ್ಬರು ಕೈಗೊಂಡ 1 ಕೆ.ಜಿ ಪ್ಲಾಸ್ಟಿಕ್‌ ತ್ಯಾಜ್ಯ ನೀಡಿದರೆ 1 ಕೆ.ಜಿ. ಸಕ್ಕರೆ ನೀಡುವ ಅಭಿಯಾನ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

ವಡಗೇರಾ: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲು ವಡಗೇರಾ ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಯೊಬ್ಬರು ಕೈಗೊಂಡ 1 ಕೆ.ಜಿ ಪ್ಲಾಸ್ಟಿಕ್‌ ತ್ಯಾಜ್ಯ ನೀಡಿದರೆ 1 ಕೆ.ಜಿ. ಸಕ್ಕರೆ ನೀಡುವ ಅಭಿಯಾನ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಉದ್ದೇಶದಿಂದ ತಡಿಬಿಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೋವಿಂದ ರಾಠೋಡ್ ಈ ಅಭಿಯಾನ ನಡೆಸುತ್ತಿದ್ದು, ಪ್ಲಾಸ್ಟಿಕ್ ಮುಕ್ತ ಗ್ರಾಮ ನಿರ್ಮಾಣದ ಗುರಿ ಹೊಂದಿದ್ದಾರೆ. ಈ ಕಾರ್ಯಕ್ಕಾಗಿ ಗ್ರಾಪಂ ಕಚೇರಿಯಲ್ಲಿ ₹3,900 ನೀಡಿ 1 ಕ್ವಿಂಟಲ್‌ ಸಕ್ಕರೆ ದಾಸ್ತಾನು ಮಾಡಿದ್ದಾರೆ. ಅಲ್ಲದೆ, ಪ್ಲಾಸ್ಟಿಕ್ ವಸ್ತುಗಳನ್ನು ನೀಡಿ ಪ್ರತಿಯಾಗಿ ಸಕ್ಕರೆ ತೆಗೆದುಕೊಂಡು ಹೋಗುವಂತೆ ಪ್ರಚಾರವನ್ನೂ ಮಾಡಿಸಿದ್ದಾರೆ.

ಕಳೆದೊಂದು ವಾರದಲ್ಲಿ 30 ಕೆ.ಜಿ.ಗೂ ಅಧಿಕ ತ್ಯಾಜ್ಯ ಸಂಗ್ರಹವಾಗಿದ್ದು, ಪ್ಲಾಸ್ಟಿಕ್‌ ಅನ್ನು ತ್ಯಾಜ್ಯ ಸಂಗ್ರಹಕಾರರಿಗೆ ಪ್ರತಿ ಕೆ.ಜಿ.ಗೆ ₹15-25 ರಂತೆ ಮರು ಮಾರಾಟ ಮಾಡಲಾಗುತ್ತದೆ. ಬಂದ ಹಣದಲ್ಲಿ ಮತ್ತೆ ಸಕ್ಕರೆ ಖರೀದಿಸಲಾಗುತ್ತದೆ. ಹಣ ಕಡಮೆ ಬಿದ್ದರೆ ಪಂಚಾಯಿತಿಯಿಂದ ಹಣ ಹೊಂದಿಸಲಾಗುವುದು. ಮುಂದಿನ ದಿನಗಳಲ್ಲಿ 17 ಗ್ರಾಪಂಗಳಲ್ಲಿ ಈ ಪ್ರಯೋಗ ನಡೆಸುವ ಉದ್ದೇಶವಿದೆ ಎಂದು ಗೋವಿಂದ್‌ ರಾಠೋಡ್‌ "ಕನ್ನಡಪ್ರಭ "ಕ್ಕೆ ತಿಳಿಸಿದರು.